×
Ad

ರೈಸಿಂಗ್ ಸ್ಟಾರ್ಸ್ ಏಶ್ಯಕಪ್ : ಭಾರತ ‘ಎ’ ತಂಡದಲ್ಲಿ ಸ್ಥಾನ ಪಡೆದ ಸೂರ್ಯವಂಶಿ

Update: 2025-11-04 20:01 IST
Photo: PTI

ಹೊಸದಿಲ್ಲಿ, ನ.4: ಈ ತಿಂಗಳಾಂತ್ಯದಲ್ಲಿ ದೋಹಾದಲ್ಲಿ ನಡೆಯಲಿರುವ ರೈಸಿಂಗ್ ಸ್ಟಾರ್ಸ್ ಏಶ್ಯ ಕಪ್ ಟೂರ್ನಿಗೆ ಜಿತೇಶ್ ಶರ್ಮಾ ನೇತೃತ್ವದ ಭಾರತ ‘ಎ’ ತಂಡವನ್ನು ಪ್ರಕಟಿಸಲಾಗಿದ್ದು, ಬ್ಯಾಟಿಂಗ್‌ನ ಬಾಲ ಪ್ರತಿಭೆ ವೈಭವ್ ಸೂರ್ಯವಂಶಿ ಹಾಗೂ ಐಪಿಎಲ್ ಪ್ರತಿಭೆ ಪ್ರಿಯಾಂಶ್ ಆರ್ಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

17ರ ವಯಸ್ಸಿನ ವೈಭವ್ ಸೂರ್ಯವಂಶಿ ಮಂಗಳವಾರ ಮೇಘಾಲಯ ವಿರುದ್ಧ ರಣಜಿ ಟ್ರೋಫಿ ಪಂದ್ಯದಲ್ಲಿ ಬಿಹಾರದ ಪರ ಕೇವಲ 67 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 9 ಬೌಂಡರಿಗಳ ಸಹಿತ 93ರನ್ ಗಳಿಸಿದ್ದಾರೆ. 17ರ ವಯಸ್ಸಿನ ವೈಭವ್ ಕೇವಲ 7ರನ್‌ನಿಂದ ಅರ್ಹ ಶತಕದಿಂದ ವಂಚಿತರಾದರು.

ಇದಕ್ಕೂಮೊದಲು ಮೇಘಾಲಯ ತಂಡವು ತನ್ನ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 408 ರನ್ ಗಳಿಸಿತ್ತು.

ಭಾರತ ‘ಎ’ ತಂಡವು ‘ಬಿ’ ಗುಂಪಿನಲ್ಲಿ ಒಮಾನ್, ಯುಎಇ ಹಾಗೂ ಪಾಕಿಸ್ತಾನ ‘ಎ’ ತಂಡದೊಂದಿಗೆ ಸ್ಥಾನ ಪಡೆದಿದೆ. ‘ಎ’ ಗುಂಪಿನಲ್ಲಿ ಬಾಂಗ್ಲಾದೇಶ ‘ಎ’, ಹಾಂಕಾಂಗ್, ಅಫ್ಘಾನಿಸ್ತಾನ ‘ಎ’ ಹಾಗೂ ಶ್ರೀಲಂಕಾ ‘ಎ’ ತಂಡಗಳಿವೆ.

ಪಂದ್ಯಾವಳಿಯು ನವೆಂಬರ್ 14ರಿಂದ 23ರ ತನಕ ನಡೆಯಲಿದ್ದು, ಭಾರತ ‘ಎ’ ತಂಡವು ನ.14ರಂದು ಯುಎಇ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಆನಂತರ ನ.16ರಂದು ಪಾಕಿಸ್ತಾನ ‘ಎ’ ಎ ತಂಡದ ವಿರುದ್ಧ ಹೈ-ವೋಲ್ಟೇಜ್ ಪಂದ್ಯವನ್ನು ಆಡಲಿದೆ.

ಈ ವರ್ಷದ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಪರ 101ರನ್ ಗಳಿಸಿ ಪುರುಷರ ಟಿ20 ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಕಿರಿಯ ಆಟಗಾರ ಎನಿಸಿಕೊಂಡು ಇತಿಹಾಸ ನಿರ್ಮಿಸಿರುವ ಸೂರ್ಯವಂಶಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಬಿಹಾರದ ಬಾಲಕ ವೈಭವ್ ಕಳೆದ ತಿಂಗಳು ಬ್ರಿಸ್ಬೇನ್‌ನಲ್ಲಿ ನಡೆದ ಆಸ್ಟ್ರೇಲಿಯ ‘ಎ’ ವಿರುದ್ಧ ಭಾರತದ ಅಂಡರ್-19 ತಂಡದ ಪರ ಶತಕ ಗಳಿಸಿದ್ದರು.

ರೈಸಿಂಗ್ ಸ್ಟಾರ್ಸ್ ಏಶ್ಯ ಕಪ್‌ಗೆ ಭಾರತ ‘ಎ’ ತಂಡ:

ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ನೇಹಾಲ್ ವಧೇರ, ನಮನ್ ಧೀರ್(ಉಪ ನಾಯಕ), ಸೂರ್ಯಾಂಶ್ ಶೆಡ್ಗೆ, ಜಿತೇಶ್ ಶರ್ಮಾ(ನಾಯಕ, ವಿಕೆಟ್‌ಕೀಪರ್), ರಮನ್‌ದೀಪ್ ಸಿಂಗ್, ಹರ್ಷ ದುಬೆ, ಅಶುತೋಶ್ ಶರ್ಮಾ, ಯಶ್ ಠಾಕೂರ್, ಗುರ್ಜಪ್‌ನೀತ್ ಸಿಂಗ್, ವಿಜಯಕುಮಾರ್ ವೈಶಾಕ್, ಯುದ್ದ್‌ವೀರ್ ಸಿಂಗ್ ಚರಕ್, ಅಭಿಷೇಕ್ ಪೊರೆಲ್(ವಿಕೆಟ್‌ಕೀಪರ್), ಸುಯಶ್ ಶರ್ಮಾ.

*ಮೀಸಲು ಆಟಗಾರರು: ಗುರ್ನೂರ್ ಸಿಂಗ್ ಬ್ರಾರ್, ಕುಮಾರ ಕುಶಾಗ್ರ, ತನುಷ್ ಕೋಟ್ಯಾನ್, ಸಮೀರ್ ರಿಝ್ವಿ, ಶೇಕ್ ರಶೀದ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News