ವೃತ್ತಿಪರ ಟೆನಿಸ್ ಗೆ ನಿವೃತ್ತಿ ಘೋಷಿಸಿದ ಕನ್ನಡಿಗ ರೋಹನ್ ಬೋಪಣ್ಣ
ರೋಹನ್ ಬೋಪಣ್ಣ (Photo: PTI)
ಹೊಸದಿಲ್ಲಿ: ಖ್ಯಾತ ಟೆನಿಸ್ ಆಟಗಾರ ರೋಹನ್ ಬೋಪಣ್ಣ ವೃತ್ತಿಪರ ಟೆನಿಸ್ ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಎರಡು ದಶಕಗಳಿಗೂ ಹೆಚ್ಚು ಕಾಲದ ಟೆನಿಸ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.
ಕೊಡಗಿನಲ್ಲಿ ಹುಟ್ಟಿ ಬೆಳೆದ ಬೋಪಣ್ಣ ಅವರು ಭಾರತದ ಟೆನಿಸ್ ಆಟಗಾರನಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕೀರ್ತಿ ತಂದಿದ್ದಾರೆ.
ರೋಹನ್ ಬೋಪಣ್ಣ ಅವರು 43ನೇ ವಯಸ್ಸಿನಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಮೊದಲ ಬಾರಿಗೆ ನಂ.1 ಶ್ರೇಯಾಂಕವನ್ನು ತಲುಪಿದ್ದರು. ಈ ಸಾಧನೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
"ವಿದಾಯ… ಆದರೆ ಇದು ಅಂತ್ಯವಲ್ಲ." ರೋಹನ್ ಬೋಪಣ್ಣ ತಮ್ಮ ಟೆನಿಸ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸುತ್ತಾ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ.
“20 ಮರೆಯಲಾಗದ ವರ್ಷಗಳ ನಂತರ, ಈಗ ನನ್ನ ರ‍್ಯಾಕೆಟ್ ಗೆ ವಿದಾಯ ಹೇಳುವ ಸಮಯ ಬಂದಿದೆ. ಈ ಮಾತುಗಳನ್ನು ಬರೆಯುವಾಗ ನನ್ನ ಹೃದಯ ಭಾರವಾಗಿದ್ದರೂ ಕೃತಜ್ಞತೆಯಿಂದ ತುಂಬಿದೆ. ಕೊಡಗಿನ ಒಂದು ಚಿಕ್ಕ ಪಟ್ಟಣದಿಂದ ಆರಂಭವಾದ ಪ್ರಯಾಣದಲ್ಲಿ, ಕಾಫಿ ತೋಟಗಳಲ್ಲಿ ಓಡಿ ಶಕ್ತಿ ಹೆಚ್ಚಿಸುವುದು, ಬಿರುಕು ಬಿದ್ದ ಕೋರ್ಟ್‌ಗಳಲ್ಲಿ ಕನಸು ಬೆನ್ನಟ್ಟುವುದು, ವಿಶ್ವದ ಅತಿ ದೊಡ್ಡ ವೇದಿಕೆಗಳಲ್ಲಿ ಆಡುವುದು ಎಲ್ಲವೂ ಅವರಿಗೆ ಅಸಾಧಾರಣ ಅನುಭವವಾಗಿತ್ತು. ಟೆನಿಸ್ ನನಗೆ ಕೇವಲ ಆಟವಲ್ಲ. ಅದು ನನಗೆ ಅರ್ಥ, ಬಲ ಮತ್ತು ನಂಬಿಕೆಯನ್ನು ನೀಡಿದೆ. ನಾನು ಕುಗ್ಗಿದಾಗ ಇದು ಶಕ್ತಿ ನೀಡಿತು, ಮತ್ತು ವಿಶ್ವವು ಅನುಮಾನಿಸಿದಾಗ ನಂಬಿಕೆ ನೀಡಿತು ಎಂದು ನಿವೃತ್ತಿ ಸಂದೇಶದಲ್ಲಿ ರೋಹನ್ ಬೋಪಣ್ಣ ಹೇಳಿದರು.