×
Ad

ಐಸಿಸಿ ಏಕದಿನ ರ‍್ಯಾಂಕಿಂಗ್: 3ನೇ ಸ್ಥಾನಕ್ಕೇರಿದ ರೋಹಿತ್ ಶರ್ಮಾ

Update: 2025-03-12 20:44 IST

 ರೋಹಿತ್ ಶರ್ಮಾ |  PTI 

 

ಹೊಸದಿಲ್ಲಿ: ದುಬೈನಲ್ಲಿ ನಡೆದಿದ್ದ 2025ರ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ರೋಚಕ ಜಯ ಸಾಧಿಸಿರುವ ಭಾರತ ಕ್ರಿಕೆಟ್ ತಂಡದ ಆಟಗಾರರು ಬುಧವಾರ ಬಿಡುಗಡೆಯಾಗಿರುವ ಐಸಿಸಿ ಏಕದಿನ ಆಟಗಾರರ ರ‍್ಯಾಂಕಿಂಗ್ ನಲ್ಲಿ ಹೊಸ ಅಲೆ ಎಬ್ಬಿಸಿದ್ದಾರೆ.

ಕಿವೀಸ್ ತಂಡದ ವಿರುದ್ಧ 4 ವಿಕೆಟ್ಗಳ ಅಂತರದಿಂದ ಜಯಶಾಲಿಯಾಗಿರುವ ಭಾರತ ತಂಡವು ತನ್ನ 3ನೇ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಜಯಿಸಿತ್ತು. ಫೈನಲ್ ಗೆ ತಲುಪಿರುವ ಭಾರತ ಹಾಗೂ ನ್ಯೂಝಿಲ್ಯಾಂಡ್ ತಂಡದ ಆಟಗಾರರು ರ‍್ಯಾಂಕಿಂಗ್ ನಲ್ಲಿ ಏರಿಕೆ ಕಂಡಿದ್ದಾರೆ.

ಪಂದ್ಯಾವಳಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿದ ನಂತರ ಶುಭಮನ್ ಗಿಲ್ ಏಕದಿನ ಬ್ಯಾಟರ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಹಿರಿಯ ನಾಯಕ ರೋಹಿತ್ ಶರ್ಮಾ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ. ಪಂದ್ಯಾವಳಿಯಲ್ಲಿ ಒಟ್ಟು 218 ರನ್ ಗಳಿಸಿದ್ದ ವಿರಾಟ್ ಕೊಹ್ಲಿ, 5ನೇ ರ‍್ಯಾಂಕಿಗೆ ತಲುಪಿದ್ದಾರೆ.

ನ್ಯೂಝಿಲ್ಯಾಂಡ್ನ ಅಗ್ರ ಸರದಿಯ ಮೂವರು ಬ್ಯಾಟರ್ಗಳು ಕೂಡ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ಸ್ಥಿರ ಪ್ರದರ್ಶನದ ನೀಡಿರುವ ಡ್ಯಾರಿಲ್ ಮಿಚೆಲ್ ಒಂದು ಸ್ಥಾನ ಮೇಲಕ್ಕೇರಿ 6ನೇ ಸ್ಥಾನವನ್ನು, ರಚಿನ್ ರವೀಂದ್ರ 14 ಸ್ಥಾನ ಭಡ್ತಿ ಪಡೆದು 14ನೇ ಸ್ಥಾನ ಪಡೆದಿದ್ದಾರೆ. ಗ್ಲೆನ್ ಫಿಲಿಪ್ಸ್ ಆರು ಸ್ಥಾನ ಭಡ್ತಿ ಪಡೆದು 24ನೇ ರ‍್ಯಾಂಕಿಗೆ ಲಗ್ಗೆ ಇಟ್ಟಿದ್ದಾರೆ.

ಬೌಲಿಂಗ್ ರ‍್ಯಾಂಕಿಂಗ್ ನಲ್ಲಿ ನ್ಯೂಝಿಲ್ಯಾಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ಎಡಗೈ ಸ್ಪಿನ್ನರ್ ಸ್ಯಾಂಟ್ನರ್ ಫೈನಲ್ನಲ್ಲಿ 2 ಸಹಿತ ಒಟ್ಟು 9 ವಿಕೆಟ್ಗಳನ್ನು ಪಡೆದಿದ್ದರು. ಆರು ಸ್ಥಾನಗಳಲ್ಲಿ ಭಡ್ತಿ ಪಡೆದು ಏಕದಿನ ಬೌಲಿಂಗ್ ರ‍್ಯಾಂಕಿಂಗ್ ನಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಶ್ರೀಲಂಕಾದ ಮಹೀಶ್ ತೀಕ್ಷಣ ಮೊದಲ ಸ್ಥಾನದಲ್ಲಿದ್ದಾರೆ.

ಕಿವೀಸ್ನ ಇನ್ನೋರ್ವ ಆಟಗಾರ ಮೈಕಲ್ ಬ್ರೆಸ್ವೆಲ್ 10 ಸ್ಥಾನ ಮೇಲಕ್ಕೇರಿ 18ನೇ ರ‍್ಯಾಂಕ್ ಪಡೆದಿದ್ದಾರೆ.

ಭಾರತದ ಅವಳಿ ಸ್ಪಿನ್ನರ್ಗಳು ಗಮನ ಸೆಳೆದಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಅಭಿಯಾನದ ವೇಳೆ 7 ವಿಕೆಟ್ಗಳನ್ನು ಪಡೆದಿದ್ದ ಕುಲದೀಪ್ ಯಾದವ್ ಮೂರು ಸ್ಥಾನ ಭಡ್ತಿ ಪಡೆದು 3ನೇ ಸ್ಥಾನಕ್ಕೇರಿದರು. ಭಾರತ ಟೂರ್ನಿಯಲ್ಲಿ ಅಜೇಯ ಓಟವನ್ನು ಕಾಯ್ದುಕೊಳ್ಳಲು ನೆರವಾಗಿದ್ದ ರವೀಂದ್ರ ಜಡೇಜ 10ನೇ ಸ್ಥಾನ ತಲುಪಿದ್ದಾರೆ.

ಏಕದಿನ ಆಲ್ರೌಂಡರ್ ರ‍್ಯಾಂಕಿಂಗ್ ನಲ್ಲಿ ಅಫ್ಘಾನಿಸ್ತಾನದ ಅಝ್ಮತುಲ್ಲಾ ಉಮರ್ಝೈ ತನ್ನ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿ ನ್ಯೂಝಿಲ್ಯಾಂಡ್ ತಂಡ ಫೈನಲ್ ಗೆ ತಲುಪುವಲ್ಲಿ ಮಹತ್ವದ ಕೊಡುಗೆ ನೀಡಿದ್ದ ಸ್ಯಾಂಟ್ನರ್ 4ನೇ ಸ್ಥಾನ, ಬ್ರೆಸ್ವೆಲ್ 7ನೇ ಸ್ಥಾನ ಹಾಗೂ ರವೀಂದ್ರ 8ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News