×
Ad

ನಾನು ಟೆಸ್ಟ್ ಕ್ರಿಕೆಟ್‌ ನಿಂದ ನಿವೃತ್ತಿಯಾಗಿದ್ದಕ್ಕೆ ತಂದೆಗೆ ಬೇಸರವಾಗಿದೆ: ರೋಹಿತ್ ಶರ್ಮಾ

Update: 2025-06-06 21:16 IST

 ರೋಹಿತ್ ಶರ್ಮಾ | PTI 

ಮುಂಬೈ: ನಾನು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವುದಕ್ಕೆ ತಂದೆ ಗುರುನಾಥ್ ಶರ್ಮಾ ಬೇಸರಗೊಂಡಿದ್ದಾರೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಬಹಿರಂಗಪಡಿಸಿದ್ದಾರೆ.

ಅತ್ಯಂತ ಪ್ರಮುಖ ಇಂಗ್ಲೆಂಡ್ ಪ್ರವಾಸಕ್ಕಿಂತ ಮೊದಲು ರೋಹಿತ್ ಶರ್ಮಾ ಅವರು ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ ನಿಂದ ದಿಢೀರನೆ ನಿವೃತ್ತಿಯಾಗಿದ್ದರು. ದಿಗ್ಗಜ ಆಟಗಾರ 67 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 40.57ರ ಸರಾಸರಿಯಲ್ಲಿ ಒಟ್ಟು 4,301 ರನ್ ಗಳಿಸಿದ್ದರು.

ಇತ್ತೀಚೆಗೆ ಚೇತೇಶ್ವರ ಪೂಜಾರ ಅವರ ಪತ್ನಿ ಪೂಜಾ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ರೋಹಿತ್, ‘‘ನನ್ನ ತಂದೆ ಟೆಸ್ಟ್ ಕ್ರಿಕೆಟ್‌ ನ ದೊಡ್ಡ ಅಭಿಮಾನಿ. ನಾನು ಅತಿ ಹೆಚ್ಚು ಸಮಯ ಆಡಿದ ಇನಿಂಗ್ಸ್ ಬಗ್ಗೆ ದೀರ್ಘ ಚರ್ಚೆ ನಡೆಸುತ್ತಿದ್ದರು. ಆದ್ದರಿಂದ ನಾನು ಟೆಸ್ಟ್‌ನಿಂದ ನಿವೃತ್ತಿಯಾದಾಗ ಅವರು ನಿರಾಶೆಗೊಂಡರು’’ ಎಂದು ಹೇಳಿದ್ದಾರೆ.

‘‘ನನ್ನ ತಂದೆ ನಾನು ಕೆಂಪು ಚೆಂಡಿನಲ್ಲಿ ಬಹಳಷ್ಟು ಕ್ರಿಕೆಟ್ ಆಡಿದ್ದನ್ನ ನೋಡಿದ್ದಾರೆ. ಹೀಗಾಗಿ ಅವರು ಕೆಂಪು ಚೆಂಡಿನ ಕ್ರಿಕೆಟ್ ಅನ್ನು ತುಂಬಾ ಇಷ್ಟಪಡುತ್ತಾರೆ. ಅವರು ಹೊಸ ಯುಗದ ಕ್ರಿಕೆಟ್ ಇಷ್ಟಪಡುತ್ತಿರಲಿಲ್ಲ. ನಾನು ಏಕದಿನ ಕ್ರಿಕೆಟ್‌ ನಲ್ಲಿ 264 ರನ್ ಗಳಿಸಿದ್ದಾಗ ಯಾವುದೇ ಉತ್ಸಾಹ ತೋರದೆ ಉತ್ತಮವಾಗಿ ಆಡಿದ್ದೀಯಾ ಎಂದಿದ್ದರು. ನಾನು ನನ್ನ ನಿವೃತ್ತಿಯನ್ನು ಪ್ರಕಟಿಸಿದಾಗ ಅವರು ಸ್ವಲ್ಪ ನಿರಾಶೆಗೊಂಡರು. ಆದರೆ ಇದೇ ವೇಳೆ ಸಂತೋಷಪಟ್ಟರು. ನಾನು ಇಂದು ಈ ಮಟ್ಟಕ್ಕೆ ಬೆಳೆಯಲು ಅವರು ದೊಡ್ಡ ಪಾತ್ರ ವಹಿಸಿದ್ದಾರೆ. ಅವರ ಸಹಾಯವಿಲ್ಲದೆ ಅದು ಎಂದಿಗೂ ಸಾಧ್ಯವಾಗುತ್ತಿರಲಿಲ್ಲ’’ಎಂದು ರೋಹಿತ್ ಅಭಿಪ್ರಾಯಪಟ್ಟರು.

2025ರ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದ ರೋಹಿತ್ 15 ಪಂದ್ಯಗಳಲ್ಲಿ 4 ಅರ್ಧಶತಕಗಳ ಸಹಿತ ಒಟ್ಟು 418 ರನ್ ಗಳಿಸಿದ್ದರು. ತಂಡದ ಪರ 2ನೇ ಗರಿಷ್ಠ ಸ್ಕೋರ್ ಗಳಿಸಿದ್ದರು. 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರೋಹಿತ್ ಕೇವಲ 8 ರನ್‌ಗೆ ಔಟಾಗಿದ್ದರು.

ರೋಹಿತ್ ಆಗಸ್ಟ್‌ನಲ್ಲಿ ನಡೆಯಲಿರುವ ಬಾಂಗ್ಲಾದೇಶ ಪ್ರವಾಸದಲ್ಲಿ ಏಕದಿನ ಕ್ರಿಕೆಟ್ ಪಂದ್ಯ ಆಡಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News