ಎಂಸಿಎ ಮ್ಯೂಸಿಯಂಗೆ ವೈಯಕ್ತಿಕ ಕ್ರಿಕೆಟ್ ವಸ್ತುಗಳನ್ನು ಗಿಫ್ಟ್ ನೀಡಿದ ರೋಹಿತ್ ಶರ್ಮಾ
ರೋಹಿತ್ ಶರ್ಮಾ | PC : X \ @rushiii_12
ಮುಂಬೈ, ಆ.23: ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದ ಆವರಣದಲ್ಲಿ ಹೊಸತಾಗಿ ನಿರ್ಮಾಣಗೊಂಡಿರುವ ಶರದ್ ಪವಾರ್ ಕ್ರಿಕೆಟ್ ಮ್ಯೂಸಿಯಂ ಉದ್ಘಾಟಿಸಲು ಮುಂಬೈ ಕ್ರಿಕೆಟ್ ಅಸೋಸಿಯೇಶನ್(ಎಂಸಿಎ)ಎಲ್ಲ ಸಿದ್ಧತೆಗಳನ್ನು ನಡೆಸಿದ್ದು, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ವಸ್ತು ಸಂಗ್ರಹಾಲಯಕ್ಕೆ ತನ್ನ ವೈಯಕ್ತಿಕ ಕ್ರಿಕೆಟ್ ವಸ್ತುಗಳನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ.
ಶರದ್ ಪವಾರ್ ಕ್ರಿಕೆಟ್ ಮ್ಯೂಸಿಯಂ ಆಗಸ್ಟ್ 23ರಂದು ಉದ್ಘಾಟನೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರ ಭೇಟಿಗೆ ಸೆಪ್ಟಂಬರ್ 22ರಿಂದ ಮ್ಯೂಸಿಯಂಗೆ ಮುಕ್ತವಾಗಲಿದೆ.
ಭಾರತ ಕ್ರಿಕೆಟ್ ತಂಡದ 2023ರ ಆವೃತ್ತಿಯ ಏಕದಿನ ವಿಶ್ವಕಪ್ ಅಭಿಯಾನದ ಅಮೂಲ್ಯವಾದ ವೈಯಕ್ತಿಕ ಸ್ಮರಣಿಕೆಗಳನ್ನು ರೋಹಿತ್ ಕೊಡುಗೆ ನೀಡಿದ್ದಾರೆ ಎಂದು ಎಂಸಿಎ ಅಧ್ಯಕ್ಷ ಅಜಿಂಕ್ಯ ನಾಯಕ್ ಬಹಿರಂಗಪಡಿಸಿದ್ದಾರೆ.
‘‘ಭಾರತ ತಂಡದ ನಾಯಕ ರೋಹಿತ್ ಶರ್ಮಾ 2023ರ ಏಕದಿನ ವಿಶ್ವಕಪ್ ನ ಜೆರ್ಸಿ ಹಾಗೂ ಬ್ಯಾಟ್ ಅನ್ನು ಕೊಡುಗೆ ನೀಡಿದ್ದಾರೆ ಹಾಗೂ ಅವುಗಳನ್ನು ಶೀಘ್ರದಲ್ಲೇ ಇಲ್ಲಿ ಪ್ರದರ್ಶನಕ್ಕೆ ಇಡಲಾಗುವುದು’’ ಎಂದು ನಾಯಕ್ ‘ಮಿಡ್ ಡೇ’ ಪತ್ರಿಕೆಗೆ ತಿಳಿಸಿದ್ದಾರೆ.
ತವರಿನಲ್ಲಿ ನಡೆದಿದ್ದ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಭಾರತವನ್ನು ಮುನ್ನಡೆಸಿದ್ದರು. ಅಹ್ಮದಾಬಾದ್ ನಲ್ಲಿ ನಡೆದಿದ್ದ ಫೈನಲ್ ಪಂದ್ಯದ ತನಕವೂ ಭಾರತ ತಂಡವನ್ನು ಅಜೇಯವಾಗಿ ಮುನ್ನಡೆಸಿದ್ದರು. ಫೈನಲ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯದ ವಿರುದ್ಧ 6 ವಿಕೆಟ್‌ಗಳ ಅಂತರದಿಂದ ಸೋಲುಂಡಿತ್ತು. ಭಾರತ ತಂಡವು ಪ್ರಶಸ್ತಿ ವಂಚಿತವಾಗಿದ್ದರೂ ರೋಹಿತ್ ಅವರ ಆಕ್ರಮಣಕಾರಿ ನಾಯಕತ್ವ ಹಾಗೂ ಪ್ರಭಾವಶಾಲಿ ಬ್ಯಾಟಿಂಗ್ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ರೋಹಿತ್ ಅವರ ವಿಶ್ವಕಪ್ ನ ಪ್ರದರ್ಶನವು ಮುಂಬೈ ಕ್ರಿಕೆಟ್ ಪರಂಪರೆಯಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿದೆ.
ಈ ವಸ್ತು ಸಂಗ್ರಹಾಲಯವು ರೋಹಿತ್ ಅವರ ಸ್ಮರಣಿಕೆಗಳನ್ನು ಮಾತ್ರವಲ್ಲದೆ, ಹಲವಾರು ಮುಂಬೈ ಹಾಗೂ ಭಾರತೀಯ ಕ್ರಿಕೆಟ್ ದಿಗ್ಗಜರ ಕೊಡುಗೆಗಳನ್ನು ಕೂಡ ಪ್ರದರ್ಶಿಸಲು ಸಜ್ಜಾಗಿದೆ. ಮೂಲ ಜೆರ್ಸಿಗಳನ್ನು ಪ್ರದರ್ಶಿಸಲು ವಿನ್ಯಾಸಗೊಳಿಸಲಾದ ಮೊದಲ ಮಹಡಿಯಲ್ಲಿ ಡ್ರೆಸ್ಸಿಂಗ್ ರೂಮ್ ನ ಪ್ರತಿಕೃತಿ ಇರುತ್ತದೆ. ಗ್ರಂಥಾಲಯದಲ್ಲಿ ಕ್ರಿಕೆಟ್ ಸಾಹಿತ್ಯದ ಅಪರೂಪದ ಸಂಗ್ರಹ ಇರಲಿದೆ.
ಮ್ಯೂಸಿಯಂನ ಹೊರಗೆ ಮುಂಬೈ ಕ್ರಿಕೆಟ್‌ನ ಅತ್ಯುತ್ತಮ ಕ್ರಿಕೆಟಿಗರ ಪೈಕಿ ಒಬ್ಬರಾಗಿರುವ ಸುನೀಲ್ ಗವಾಸ್ಕರ್ ಅವರ ಪ್ರತಿಮೆಯು ಸಂದರ್ಶಕರನ್ನು ಆಕರ್ಷಿಸಲಿದೆ.