ಸೆ.13ರಂದು ಬೆಂಗಳೂರಿನಲ್ಲಿ ರೋಹಿತ್ ಶರ್ಮಾ ಫಿಟ್ನೆಸ್ ಟೆಸ್ಟ್?
ರೋಹಿತ್ ಶರ್ಮಾ | PTI
ಮುಂಬೈ, ಆ.29: ಭಾರತೀಯ ಕ್ರಿಕೆಟ್ ನ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಸೆಪ್ಟಂಬರ್ 13ರಂದು ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ(ಸಿಒಇ) ತನ್ನ ಫಿಟ್ನೆಸ್ ಟೆಸ್ಟ್‌ಗಾಗಿ ಹಾಜರಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
‘‘ಹೌದು, ರೋಹಿತ್ ಅವರು ಫಿಟ್ನೆಸ್ ಟೆಸ್ಟ್ ಗಾಗಿ ಸೆಪ್ಟಂಬರ್ 13ರಂದು ಬಿಸಿಸಿಐನ ಸಿಒಇಗೆ ತೆರಳಲಿದ್ದಾರೆ. ಅಲ್ಲಿ ಅವರು ಎರಡು-ಮೂರು ದಿನಗಳ ಕಾಲ ಇರಲಿದ್ದು, ನವೆಂಬರ್ ನಲ್ಲಿ ನಡೆಯಲಿರುವ ಆಸ್ಟ್ರೇಲಿಯ ವಿರುದ್ಧದ ಸೀಮಿತ ಓವರ್ ಕ್ರಿಕೆಟ್ ಸರಣಿಗೆ ತನ್ನ ತಯಾರಿ ನಡೆಸಲಿದ್ದಾರೆ.
ಬೆಂಗಳೂರಿನ ಸಿಒಇನಲ್ಲಿ ಸೆ.11ರಿಂದ 15ರ ತನಕ ದುಲೀಪ್ ಟ್ರೋಫಿ ಫೈನಲ್ ಪಂದ್ಯವನ್ನು ಆಡಲಾಗುತ್ತದೆ. ರೋಹಿತ್ ಶರ್ಮಾ ಫಿಟ್ನೆಸ್ ಟೆಸ್ಟ್ ಗೆ ಒಳಗಾಗಲಿದ್ದು, ಬೆಂಗಳೂರಿನಲ್ಲಿರುವ ಮೈದಾನದಲ್ಲಿ ತರಬೇತಿ ನಡೆಸಲಿದ್ದಾರೆ’’ ಎಂದು ಮೂಲಗಳು ತಿಳಿಸಿವೆ.
ಪ್ರಮುಖ ಬೆಳವಣಿಗೆಯೊಂದರಲ್ಲಿ ಮುಂಬೈ ಬ್ಯಾಟರ್ ರೋಹಿತ್ ಯೋ-ಯೋ ಟೆಸ್ಟ್ ಅಲ್ಲದೆ, ಸಿಒಇನಲ್ಲಿ ಹೊಸತಾಗಿ ಪರಿಚಯಿಸಲ್ಪಟ್ಟಿರುವ ಬ್ರೊಂಕೊ ಟೆಸ್ಟ್ ಗೂ ಒಳಗಾಗಲಿದ್ದಾರೆ.
ರೋಹಿತ್ ಅವರು ವಿರಾಟ್ ಕೊಹ್ಲಿ ಜೊತೆಗೆ ಆಸ್ಟ್ರೇಲಿಯ ‘ಎ’ ವಿರುದ್ಧ ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿ ಸೆ.30, ಅಕ್ಟೋಬರ್ 3 ಹಾಗೂ 5ರಂದು ಭಾರತ ‘ಎ’ ತಂಡದ ಪರವಾಗಿ ಮೂರು ದಿನಗಳ ಏಕದಿನ ಸರಣಿಯನ್ನು ಆಡುವ ಸಾಧ್ಯತೆಯಿದೆ. ಈ ಸರಣಿಯು ಆಸ್ಟ್ರೇಲಿಯ ವಿರುದ್ಧ್ದ ಪರ್ತ್ ನಲ್ಲಿ ಅಕ್ಟೋಬರ್ 19ರಿಂದ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಗೆ ಪೂರ್ವ ತಯಾರಿಯಾಗಬಹುದು.