×
Ad

ಐಸಿಸಿ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್ ನಲ್ಲಿ ಅಗ್ರಸ್ಥಾನ; ಇತಿಹಾಸ ಸೃಷ್ಟಿಸಿದ ರೋಹಿತ್ ಶರ್ಮಾ

Update: 2025-10-29 20:53 IST

ರೋಹಿತ್ ಶರ್ಮಾ | Photo Credit :  PTI 

ದುಬೈ, ಅ. 29: ಬುಧವಾರ ಬಿಡುಗಡೆಗೊಂಡ ಐಸಿಸಿ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್ ನಲ್ಲಿ ಭಾರತದ ರೋಹಿತ್ ಶರ್ಮಾ ಅಗ್ರ ಸ್ಥಾನವನ್ನು ಪಡೆದಿದ್ದಾರೆ. ಇದರೊಂದಿಗೆ, ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್ ನಲ್ಲಿ ಮೊದಲ ಸ್ಥಾನ ಪಡೆದ ಅತ್ಯಂತ ಹಿರಿಯ ಭಾರತೀಯ ಆಟಗಾರ ಎಂಬ ದಾಖಲೆಯನ್ನು ಅವರು ನಿರ್ಮಿಸಿದ್ದಾರೆ.

38 ವರ್ಷ 182 ದಿನಗಳ ರೋಹಿತ್ ಶರ್ಮಾ ಎರಡು ಸ್ಥಾನಗಳನ್ನು ಜಿಗಿದು ತನ್ನ ಕ್ರೀಡಾ ಜೀವನದಲ್ಲೇ ಮೊದಲ ಬಾರಿಗೆ ನಂಬರ್ ವನ್ ಏಕದಿನ ಬ್ಯಾಟರ್ ಆದರು. ಅವರು ಮೊದಲ ಸ್ಥಾನದಲ್ಲಿದ್ದ ಭಾರತೀಯ ನಾಯಕ ಶುಭಮನ್ ಗಿಲ್ ರನ್ನು ಮೂರನೇ ಸ್ಥಾನಕ್ಕೆ ತಳ್ಳಿದರು. ಅಫ್ಘಾನಿಸ್ತಾನದ ಇಬ್ರಾಹೀಮ್ ಝದ್ರಾನ್ ಎರಡನೇ ಸ್ಥಾನದಲ್ಲಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯಲ್ಲಿ ಅವರ ಉಜ್ವಲ ನಿರ್ವಹಣೆಯ ಆಧಾರದಲ್ಲಿ ನಂಬರ್ ವನ್ ಸ್ಥಾನ ಅವರನ್ನು ಅರಸಿ ಬಂತು. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ, ಅವರು ಗರಿಷ್ಠ ರನ್ ಗಳಿಕೆದಾರರೂ ಆದರು. ಅವರನ್ನು ಸರಣಿಶ್ರೇಷ್ಠ ಪ್ರಶಸ್ತಿಯೂ ಅರಸಿ ಬಂತು. ಅವರು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 101ರ ಸರಾಸರಿಯಲ್ಲಿ 202 ರನ್ ಗಳನ್ನು ಗಳಿಸಿದರು.

ಆಸ್ಟ್ರೇಲಿಯ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅಜೇಯ 74 ರನ್ ಗಳನ್ನು ಬಾರಿಸುವ ಮೂಲಕ ಫಾರ್ಮ್ ಗೆ ಮರಳಿರುವ ವಿರಾಟ್ ಕೊಹ್ಲಿ, ಐಸಿಸಿ ಏಕದಿನ ಬ್ಯಾಟರ್ ಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದರು.

ಶ್ರೇಯಸ್ ಅಯ್ಯರ್ ಆಸ್ಟ್ರೇಲಿಯ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲಿಲ್ಲ. ಆದರೂ, ಅವರು ಈ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ತನ್ನ ನಿವೃತ್ತಿ ಬಗ್ಗೆ ಎಲ್ಲೆಡೆ ಚರ್ಚೆ ಆರಂಭವಾಗಿರುವ ಹೊತ್ತಿನಲ್ಲೇ, ರೋಹಿತ್ ಶರ್ಮಾ ಪುಟಿದೆದ್ದಿದ್ದಾರೆ. ಶುಭಮನ್ ಗಿಲ್ ಆಸ್ಟ್ರೇಲಿಯ ವಿರುದ್ಧದ ಸರಣಿಗೆ ಮುಂಚಿತವಾಗಿ ಏಕದಿನ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾರಿಂದ ವಹಿಸಿಕೊಂಡಿದ್ದರು. ಹಾಗಾಗಿ, ರೋಹಿತ್ ಶರ್ಮಾ ಶೀಘ್ರದಲ್ಲೇ ಏಕದಿನ ಕ್ರಿಕೆಟ್ನಿಂದ ನಿವೃತ್ತಿಗೊಳ್ಳಬಹುದು ಎಂಬುದಾಗಿ ಕ್ರಿಕೆಟ್ ಪರಿಣತರು ಮತ್ತು ಅಭಿಮಾನಿಗಳು ನಿರೀಕ್ಷಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News