×
Ad

ವಿಶ್ವಕಪ್‌ ಗಿಂತ ಮೊದಲು 27 ಪಂದ್ಯಗಳನ್ನಾಡಲಿದ್ದಾರೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ

Update: 2025-05-14 21:22 IST

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ | PC : PTI 

ಹೊಸದಿಲ್ಲಿ: ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇಬ್ಬರೂ ಟೆಸ್ಟ್ ಕ್ರಿಕೆಟ್‌ ನಿಂದ ನಿವೃತ್ತಿಯಾಗಿದ್ದು, 2027ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ ಗೆ ಮುನ್ನ ಉಭಯ ಆಟಗಾರರು 27 ಪಂದ್ಯಗಳನ್ನು ಆಡಲಿದ್ದಾರೆ.

ಎಲ್ಲ ಮಾದರಿಯಲ್ಲಿ ಭಾರತೀಯ ಕ್ರಿಕೆಟ್‌ ನಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿರುವ ಲೆಜೆಂಡರಿ ಕ್ರಿಕೆಟಿಗರಾದ ರೋಹಿತ್ ಹಾಗೂ ವಿರಾಟ್ ಇನ್ನು ಮುಂದೆ ದಕ್ಷಿಣ ಆಫ್ರಿಕಾ, ಝಿಂಬಾಬ್ವೆ ಹಾಗೂ ನಮೀಬಿಯಾದಲ್ಲಿ 2027ರ ಅಕ್ಟೋಬರ್-ನವೆಂಬರ್‌ ನಲ್ಲಿ ನಡೆಯಲಿರುವ ಮುಂಬರುವ ಏಕದಿನ ವಿಶ್ವಕಪ್‌ನತ್ತ ಮಾತ್ರ ಗಮನ ಹರಿಸಲಿದ್ದಾರೆ.

ವಿಶ್ವಕಪ್ ಟೂರ್ನಿಗಿಂತ ಮೊದಲು ಭಾರತ ತಂಡವು ವಿವಿಧ 8 ದೇಶಗಳ ವಿರುದ್ಧ 9 ದ್ವಿಪಕ್ಷೀಯ ಸರಣಿಗಳಲ್ಲಿ 27 ಏಕದಿನ ಪಂದ್ಯಗಳನ್ನು ಆಡಲಿದೆ. ಇಬ್ಬರೂ ಹಿರಿಯ ಆಟಗಾರರಿಗೆ ತಮ್ಮ ಕೊನೆಯ ವಿಶ್ವಕಪ್ ಟೂರ್ನಿಗಾಗಿ ತಯಾರಿ ನಡೆಸಲು ಸಾಕಷ್ಟು ಕಾಲಾವಕಾಶ ಇದೆ.

ವಿರಾಟ್ ಕೊಹ್ಲಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಟೆಸ್ಟ್ ಕ್ರಿಕೆಟಿನಿಂದ ನಿವೃತ್ತಿಯಾಗಿದ್ದರು. ಟೆಸ್ಟ್ ಕ್ರಿಕೆಟ್‌ ನಲ್ಲಿ 123 ಪಂದ್ಯಗಳಲ್ಲಿ 46.85ರ ಸರಾಸರಿಯಲ್ಲಿ 9,230 ರನ್ ಗಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಕೊಹ್ಲಿ ಅವರು ಟಿ-20 ಕ್ರಿಕೆಟ್‌ನಿಂದಲೂ ನಿವೃತ್ತಿಯಾಗಿದ್ದರು. ಆದರೆ ಏಕದಿನ ಕ್ರಿಕೆಟ್‌ ನಲ್ಲಿ ಮುಂದುವರಿಯುವುದಾಗಿ ಘೋಷಿಸಿದ್ದರು. ಭಾರತದಲ್ಲಿ 2023ರಲ್ಲಿ ನಡೆದಿದ್ದ 50 ಓವರ್ ಕ್ರಿಕೆಟ್‌ ನಲ್ಲಿ ಕೊಹ್ಲಿ ಗರಿಷ್ಠ ರನ್ ಸ್ಕೋರರ್ ಆಗಿದ್ದರು.

2024ರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡ ಪ್ರಶಸ್ತಿ ಗೆಲ್ಲುವಲ್ಲಿ ನೇತೃತ್ವವಹಿಸಿದ ನಂತರ ರೋಹಿತ್ ಶರ್ಮಾ ಟಿ-20 ಕ್ರಿಕೆಟ್‌ನಿಂದ ದೂರ ಸರಿದಿದ್ದರು.

‘‘ನಾನು ಏಕದಿನ ಮಾದರಿಯ ಕ್ರಿಕೆಟ್‌ ನಲ್ಲಿ ಆಡುವುದನ್ನು ಮುಂದುವರಿಸುವೆ’’ಎಂದು ಇತ್ತೀಚೆಗೆ ಹೇಳಿರುವ ರೋಹಿತ್, ತನ್ನ ಅಂತಿಮ ವಿಶ್ವಕಪ್ ಅಭಿಯಾನದಲ್ಲಿ ಭಾಗವಹಿಸುವ ಕುರಿತು ಸುಳಿವು ನೀಡಿದ್ದರು.

ಈಗ ಇಬ್ಬರು ದಿಗ್ಗಜರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದು, ಮುಂಬರುವ ಏಕದಿನ ಸರಣಿಯಲ್ಲಿ ಯುವ ಅಟಗಾರರು ಈ ಇಬ್ಬರ ಅನುಭವವನ್ನು ಹೆಚ್ಚು ನೆಚ್ಚಿಕೊಂಡಿದ್ದಾರೆ.

ಟೀಮ್ ಇಂಡಿಯಾವು ಮುಂಬರುವ ವಿಶ್ವಕಪ್ ಟೂರ್ನಿಗಿಂತ ಮೊದಲು ಸ್ವದೇಶದಲ್ಲಿ 6 ಸರಣಿಗಳು ಹಾಗೂ ವಿದೇಶದಲ್ಲಿ 3 ಸರಣಿಗಳನ್ನು ಆಡಲಿದೆ. ಇದು ವಿಭಿನ್ನ ವಾತಾವರಣಗಳಲ್ಲಿ ವಿವಿಧ ಎದುರಾಳಿಯನ್ನು ಎದುರಿಸುವುದಕ್ಕೆ ಅವಕಾಶ ಕಲ್ಪಿಸಲಿದೆ.

ಫಿಟ್ನೆಸ್ ಹಾಗೂ ಫಾರ್ಮ್ ಕಾಯ್ದುಕೊಂಡು, ಒತ್ತಡವನ್ನು ನಿಭಾಯಿಸಲು ಶಕ್ತರಾದರೆ ಕೊಹ್ಲಿ ಹಾಗೂ ರೋಹಿತ್ ನಿಗದಿತ 27 ಪಂದ್ಯಗಳಲ್ಲಿ ಬಹುತೇಕ ಪಂದ್ಯವನ್ನು ಆಡಬಹುದು.

ಮುಂದಿನ ಎರಡು ವರ್ಷಗಳು ಪರಿವರ್ತನೆಯ ಕಾಲವಾಗಿರುವ ಜೊತೆಗೆ ಪರಂಪರೆಯ ಕಾಲವೂ ಆಗಿರುತ್ತದೆ. ಭಾರತದ ಇಬ್ಬರು ಶ್ರೇಷ್ಠ ಆಧುನಿಕ ಏಕದಿನ ಬ್ಯಾಟರ್‌ಗಳು ದಕ್ಷಿಣ ಆಫ್ರಿಕಾದಲ್ಲಿ ವಿಶ್ವಕಪ್ ವೈಭವದಲ್ಲಿ ಕೊನೆಯ ಬಾರಿ ಆಡಲು ಸಿದ್ಧರಾಗುತ್ತಿದ್ದಾರೆ.

►ಸಂಪೂರ್ಣ ವೇಳಾಪಟ್ಟಿ:

-ಆಗಸ್ಟ್ 2025: ಬಾಂಗ್ಲಾದೇಶ(ವಿದೇಶಿ ಸರಣಿ)

ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ನಡೆಯಲಿರುವ 3 ಏಕದಿನ ಪಂದ್ಯಗಳಲ್ಲಿ ಆಡುವ ಮೂಲಕ ಭಾರತವು ಚಾಂಪಿಯನ್ಸ್ ಟ್ರೋಫಿ ಗೆಲುವಿನ ನಂತರ 50 ಓವರ್ ಕ್ರಿಕೆಟಿಗೆ ವಾಪಸಾಗಲಿದೆ.

-ಅಕ್ಟೋಬರ್-ನವೆಂಬರ್ 2025-ಆಸ್ಟ್ರೇಲಿಯ(ವಿದೇಶಿ ಸರಣಿ)

2023ರ ವಿಶ್ವಕಪ್ ಫೈನಲಿಸ್ಟ್‌ಗಳ ನಡುವೆ 3 ಏಕದಿನ ಪಂದ್ಯಗಳು ನಡೆಯಲಿವೆ.

-ನವೆಂಬರ್-ಡಿಸೆಂಬರ್ 2025-ದಕ್ಷಿಣ ಆಫ್ರಿಕಾ(ಸ್ವದೇಶಿ ಸರಣಿ)

ಭಾರತೀಯ ಪಿಚ್‌ನಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ 3 ಏಕದಿನ ಪಂದ್ಯಗಳು

-ಜನವರಿ 2026-ನ್ಯೂಝಿಲ್ಯಾಂಡ್(ಸ್ವದೇಶ)

2025ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ ನಲ್ಲಿ ತನ್ನ ವಿರುದ್ಧ ಸೋತಿರುವ ತಂಡದ ವಿರುದ್ಧ ಭಾರತ 3 ಏಕದಿನ ಪಂದ್ಯವನ್ನಾಡಲಿದೆ.

-ಜೂನ್ 2026-ಅಫ್ಘಾನಿಸ್ತಾನ(ಸ್ವದೇಶ)

ಶಕ್ತಿಶಾಲಿ ಸ್ಪಿನ್ ದಾಳಿ ಹೊಂದಿರುವ ಅಫ್ಘಾನಿಸ್ತಾನದ ವಿರುದ್ಧ 3 ಏಕದಿನ ಪಂದ್ಯಗಳು

-ಜುಲೈ 2026: ಇಂಗ್ಲೆಂಡ್(ವಿದೇಶಿ ಸರಣಿ)

ಇಂಗ್ಲೆಂಡ್‌ನ ಸವಾಲಿನ ಪಿಚ್‌ನಲ್ಲಿ ವಿಶ್ವಕಪ್ ಟೂರ್ನಿಗಿಂತ ಮೊದಲು ಪ್ರಮುಖ ವಿದೇಶಿ ಸರಣಿಯಲ್ಲಿ 3 ಏಕದಿನ ಪಂದ್ಯಗಳು

-ಸೆಪ್ಟಂಬರ್-ಅಕ್ಟೋಬರ್ 2026: ವೆಸ್ಟ್‌ಇಂಡೀಸ್(ಸ್ವದೇಶ)

ಉಪ ಖಂಡದ ಪಿಚ್‌ನಲ್ಲಿ ವೆಸ್ಟ್‌ಇಂಡೀಸ್ ತಂಡದಿಂದ 3 ಏಕದಿನ ಪಂದ್ಯಗಳು

-ಅಕ್ಟೋಬರ್-ನವೆಂಬರ್ 2026: ನ್ಯೂಝಿಲ್ಯಾಂಡ್(ಸ್ವದೇಶ)

3 ಏಕದಿನ ಪಂದ್ಯಗಳನ್ನಾಡಲು ನ್ಯೂಝಿಲ್ಯಾಂಡ್ ತಂಡಕ್ಕೆ ಭಾರತ ವಾಪಸ್

-ಡಿಸೆಂಬರ್ 2026-ಶ್ರೀಲಂಕಾ(ಸ್ವದೇಶ)

2024ರಲ್ಲಿ ಶ್ರೀಲಂಕಾ ವಿರುದ್ಧ ತನ್ನ 0-2 ಅಂತರದ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ತಂಡ 3 ಏಕದಿನ ಪಂದ್ಯಗಳಲ್ಲಿ ಯತ್ನಿಸುವ ಸಾಧ್ಯತೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News