ವಿಶ್ವಕಪ್ ಅರ್ಹತಾ ಪಂದ್ಯಾವಳಿ: ದಾಖಲೆ ಸರಿಗಟ್ಟಿದ ರೊನಾಲ್ಡೊ
ಕ್ರಿಸ್ಟಿಯಾನೊ ರೊನಾಲ್ಡೊ | PC : X
ಹೊಸದಿಲ್ಲಿ, ಸೆ. 10: ಬುಡಾಪೆಸ್ಟ್ ನಲ್ಲಿ ಮಂಗಳವಾರ ರಾತ್ರಿ ಹಂಗರೀ ವಿರುದ್ಧ ನಡೆದ ವಿಶ್ವಕಪ್ ಅರ್ಹತಾ ಪಂದ್ಯವೊಂದರಲ್ಲಿ ಪೋರ್ಚುಗಲ್ ತಂಡವು 3-2 ಅಂತರದಿಂದ ವಿಜಯ ಗಳಿಸಿದೆ. ಪೋರ್ಚುಗಲ್ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ 58ನೇ ನಿಮಿಷದಲ್ಲಿ ಗೋಲು ಬಾರಿಸಿದ್ದು, ಇದು ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಅವರ 39ನೇ ಗೋಲಾಗಿದೆ. ಇದರೊಂದಿಗೆ ಅವರು ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಗರಿಷ್ಠ ಗೋಲುಗಳನ್ನು ಗಳಿಸಿರುವ ಗ್ವಾಟೆಮಾಲಾದ ಕಾರ್ಲೋಸ್ ರೂಯಿಝ್ ರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಕೆಲವು ದಿನಗಳ ಹಿಂದೆ ನಡೆದ ಆರ್ಮೇನಿಯ ವಿರುದ್ಧದ ವಿಶ್ವಕಪ್ ಅರ್ಹತಾ ಪಂದ್ಯವನ್ನು ಪೋರ್ಚುಗಲ್ 5-0 ಅಂತರದಿಂದ ಗೆದ್ದಿತ್ತು. ಆ ಪಂದ್ಯದಲ್ಲಿ 40 ವರ್ಷದ ರೊನಾಲ್ಡೊ 2 ಗೋಲುಗಳನ್ನು ಬಾರಿಸಿದ್ದರು. ಈಗ ಅವರು ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಲಿಯೊನೆಲ್ ಮೆಸ್ಸಿಗಿಂತ 3 ಗೋಲುಗಳಿಂದ ಮುಂದಿದ್ದಾರೆ. ಮೆಸ್ಸಿ ಒಟ್ಟು 36 ಗೋಲುಗಳನ್ನು ಬಾರಿಸಿದ್ದಾರೆ.
ಹಂಗರೀ ಸುಲಭದ ಎದುರಾಳಿ ಆಗಿರಲಿಲ್ಲ. ಬರ್ನಬಸ್ ವಾರ್ಗ ಮೊದಲ ಗೋಲು ಸೇರಿದಂತೆ 2 ಗೋಲುಗಳನ್ನು ಬಾರಿಸಿದರು. ಹಾಗಾಗಿ, ಪಂದ್ಯದ ಆರಂಭದಿಂದಲೂ ಗೋಲುಗಳ ಅಂತರ ಬೆಳೆಯದಂತೆ ನೋಡಿಕೊಳ್ಳುವ ಒತ್ತಡಕ್ಕೆ ಪೋರ್ಚುಗಲ್ ಆಟಗಾರರು ಒಳಗಾದರು. ಪೋರ್ಚುಗಲ್ ನ ಬರ್ನಾಡೊ ಸಿಲ್ವ ಬಾರಿಸಿದ ಗೋಲಿನಿಂದಾಗಿ ಅಂಕಪಟ್ಟಿ ಸಮವಾಯಿತು. ಬಳಿಕ ರೊನಾಲ್ಡೊ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿ ತಂಡಕ್ಕೆ 2-1ರ ಮುನ್ನಡೆ ದೊರಕಿಸಿದರು. ಬಳಿಕ ಜೋವೊ ಕನ್ಸೇಲೊ ಪೋರ್ಚುಗಲ್‌ನ 3ನೇ ಗೋಲನ್ನು ಸಿಡಿಸಿದರು.
ಪೋರ್ಚುಗಲ್ ಎರಡು ಪಂದ್ಯಗಳಿಂದ ಆರು ಅಂಕಗಳನ್ನು ಗಳಿಸಿದೆ.