ರೋವಿಂಗ್ ಸಿಂಗಲ್ ಸ್ಕಲ್ಸ್ | ಪದಕ ಸುತ್ತಿನಿಂದ ಹೊರಬಿದ್ದ ಬಲರಾಜ್ ಪನ್ವರ್
ಬಲರಾಜ್ ಪನ್ವರ್ | PC : PTI
ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ, ರೋವಿಂಗ್ ಸ್ಪರ್ಧೆಯಲ್ಲಿ ಭಾರತದ ಏಕೈಕ ಸ್ಪರ್ಧಿ ಬಲರಾಜ್ ಪನ್ವರ್ ಮಂಗಳವಾರ ಪದಕ ಸುತ್ತಿನಿಂದ ಹೊರಬಿದ್ದಿದ್ದಾರೆ. ಅವರು ಪುರುಷರ ಸಿಂಗಲ್ ಸ್ಕಲ್ಸ್ ವಿಭಾಗದ ಹೀಟ್ ಕ್ವಾರ್ಟರ್‌ಪೈನಲ್‌ನಲ್ಲಿ ಐದನೇ ಸ್ಥಾನ ಗಳಿಸಿದರು. ಇನ್ನು ಅವರು ಕೆಳ ಸ್ಥಾನಗಳಿಗಾಗಿ ಸ್ಪರ್ಧಿಸಲಿದ್ದಾರೆ.
25 ವರ್ಷದ ಬಲರಾಜ್ ಕ್ವಾರ್ಟರ್‌ಫೈನಲ್ಸ್ ಹೀಟ್ 4ರಲ್ಲಿ 7 ನಿಮಿಷ ಮತ್ತು 5.10 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಅವರು ಇನ್ನು 13ರಿಂದ 24ನೇ ಸ್ಥಾನಗಳನ್ನು ನಿರ್ಧರಿಸುವ ಸೆಮಿಫೈನಲ್ಸ್ ಸಿ/ಡಿಯಲ್ಲಿ ಸ್ಪರ್ಧಿಸಲಿದ್ದಾರೆ.
ತಟಸ್ಥ ಅತ್ಲೀಟ್ ಯೌಹೇನಿ ಝಲಾಟಿ 6 ನಿಮಿಷ ಮತ್ತು 49.27 ಸೆಕೆಂಡ್‌ನಲ್ಲಿ ಗುರಿ ತಲುಪಿ ಕ್ವಾರ್ಟರ್‌ಫೈನಲ್ಸ್ ಹೀಟ್ 4ನ್ನು ಗೆದ್ದರು. ಲಿತುವೇನಿಯದ ಜೀಡ್ರಿಯಸ್ ಬೈಲಿಯಾಸ್ಕಸ್ (6 ನಿಮಿಷ 51.80 ಸೆಕೆಂಡ್) ಎರಡನೇ ಸ್ಥಾನ ಪಡೆದರೆ, ಜಪಾನ್‌ನ ರಯುಟ ಅರಕವ (6 ನಿಮಿಷ 54.17 ಸೆಕೆಂಡ್) ಮೂರನೇ ಸ್ಥಾನ ಪಡೆದರು.
ರವಿವಾರ ನಡೆದ ತನ್ನ ರೆಪಿಶಾಷ್ ಸುತ್ತಿನ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದು ಬಲರಾಜ್ ಕ್ವಾರ್ಟರ್‌ಫೈನಲ್ ತಲುಪಿದ್ದರು. ಅವರು ಶನಿವಾರ ನಡೆದ ತನ್ನ ಮೊದಲ ಸುತ್ತಿನ ಹೀಟ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. ಆ ಮೂಲಕ ರೆಪಿಶಾಷ್ ಸುತ್ತಿಗೆ ಅರ್ಹತೆ ಪಡೆದಿದ್ದರು.