×
Ad

ಸಚಿನ್ ತೆಂಡುಲ್ಕರ್‌ರೊಂದಿಗೆ ವಿರಾಟ್ ಕೊಹ್ಲಿ ಹೋಲಿಕೆಗೆ ನಿರಾಕರಿಸಿದ ಸುನೀಲ್ ಗವಾಸ್ಕರ್

Update: 2025-02-28 21:04 IST

  ವಿರಾಟ್ ಕೊಹ್ಲಿ , ಸಚಿನ್ ತೆಂಡುಲ್ಕರ್‌ | PTI 

ಹೊಸದಿಲ್ಲಿ: ಬ್ಯಾಟಿಂಗ್ ದಂತಕತೆಗಳಾದ ಸಚಿನ್ ತೆಂಡುಲ್ಕರ್ ಹಾಗೂ ವಿರಾಟ್ ಕೊಹ್ಲಿ ಅವರನ್ನು ಹೋಲಿಕೆ ಮಾಡಲು ನಿರಾಕರಿಸಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್,‘‘ನಾನು ಎಂದಿಗೂ ಯುಗಗಳನ್ನು ಹೋಲಿಸಲಾರೆ’’ಎಂದರು.

‘ಡ್ರೆಸ್ಸಿಂಗ್ ರೂಮ್’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿರುವ ಗವಾಸ್ಕರ್ ಬಳಿ, ಸಚಿನ್ ಅವರನ್ನು ಕೊಹ್ಲಿ ಅವರೊಂದಿಗೆ ಹೋಲಿಸುವ ಕುರಿತು ನಿಮ್ಮ ಅಭಿಪ್ರಾಯ ಏನು? ಎಂದು ಪ್ರಶ್ನಿಸಲಾಯಿತು.

ಇಂತಹ ಹೋಲಿಕೆಗಳು ‘ಉಪಖಂಡದ ದೌರ್ಬಲ್ಯ’ ಎಂದು ಕರೆದ ಗವಾಸ್ಕರ್, ವಿಭಿನ್ನ ಯುಗಗಳು ವಿಭಿನ್ನ ಸವಾಲುಗಳನ್ನು ಪ್ರಸ್ತುತಪಡಿಸುತ್ತವೆ. ಪರಸ್ಪರ ಹೋಲಿಕೆ ತರ್ಕಬದ್ದವಲ್ಲ ಎಂದರು.

‘‘ನಾನು ಯುಗಗಳನ್ನು ಎಂದಿಗೂ ಹೋಲಿಸುವುದಿಲ್ಲ. ನಿಮಗೆ ತಿಳಿದಿರುವಂತೆ ಪಂದ್ಯದ ಪರಿಸ್ಥಿತಿಗಳು ವಿಭಿನ್ನವಾಗಿವೆ, ಪಿಚ್‌ಗಳು ವಿಭಿನ್ನ, ಎದುರಾಳಿಗಳು ವಿಭಿನ್ನವಾಗಿವೆ. ಆದ್ದರಿಂದ ಕ್ರಿಕೆಟಿಗರನ್ನು ಪರಸ್ಪರ ಹೋಲಿಸುವುದು ತುಂಬಾ ಕಷ್ಟ. ಪರಸ್ಪರ ಹೋಲಿಸುವುದು ಉಪಖಂಡದ ದೌರ್ಬಲ್ಯ ಎಂದು ನಾನು ಕರೆಯುವೆ. ನಾವು ಯಾವಾಗಲೂ ಆಟಗಾರರನ್ನು ಹೋಲಿಸುತ್ತಿರುತ್ತೇವೆ. ರಿಕಿ ಪಾಂಟಿಂಗ್ ಅವರು ಗ್ರೆಗ್ ಚಾಪೆಲ್‌ಗಿಂತ ಉತ್ತಮ ಆಟಗಾರನೇ? ಎಂದು ಯಾರಾದರೂ ಕೇಳಿದ್ದನ್ನು ನೀವು ಎಂದಾದರೂ ನೋಡಿದ್ದೀರಾ..ಯಾರೂ ಹಾಗೆ ಕೇಳಿಲ್ಲ.. ಉಪಖಂಡದಲ್ಲಿ ಮಾತ್ರ ಆಟಗಾರರನ್ನು ಪರಸ್ಪರ ಹೋಲಿಸಲಾಗುತ್ತದೆ. ನಾವು ಯಾವಾಗಲೂ ಹೋಲಿಕೆ ಮಾಡುತ್ತಲೇ ಇರುತ್ತೇವೆ’’ ಎಂದು ಗವಾಸ್ಕರ್ ಹೇಳಿದರು.

ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕೊಹ್ಲಿ ಅವರು ಪಾಕಿಸ್ತಾನದ ವಿರುದ್ಧ ಭಾರತದ ಪರ ಔಟಾಗದೆ 100 ರನ್ ಗಳಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ತೆಂಡುಲ್ಕರ್‌ಗಿಂತ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ.

ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತೆಂಡುಲ್ಕರ್ ಒಟ್ಟು 100 ಶತಕಗಳನ್ನು ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 49 ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ 51 ಶತಕಗಳನ್ನು ಗಳಿಸಿದ್ದಾರೆ. ಒಟ್ಟು 34,357 ರನ್ ಗಳಿಸಿದ್ದಾರೆ.

ಸದ್ಯ ವಿರಾಟ್ ಕೊಹ್ಲಿ ಏಕದಿನದಲ್ಲಿ 51, ಟೆಸ್ಟ್‌ನಲ್ಲಿ 30 ಹಾಗೂ ಟಿ-20ಯಲ್ಲಿ 1 ಸಹಿತ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 82 ಶತಕಗಳನ್ನು ಗಳಿಸಿದ್ದು, ಒಟ್ಟು 27,503 ರನ್ ಗಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News