×
Ad

ಲಾರ್ಡ್ಸ್‌ನಲ್ಲಿ ಗಂಟೆ ಬಾರಿಸಿ ಪಂದ್ಯಕ್ಕೆ ಚಾಲನೆ ನೀಡಿದ ಸಚಿನ್ ತೆಂಡುಲ್ಕರ್

Update: 2025-07-10 21:23 IST

ಸಚಿನ್ ತೆಂಡುಲ್ಕರ್ | PC : PTI 

ಲಂಡನ್: ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ ಪೈಕಿ ಒಬ್ಬರಾಗಿರುವ ಸಚಿನ್ ತೆಂಡುಲ್ಕರ್‌ರನ್ನು ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಗುರುವಾರ ನಡೆದ ವಿಶೇಷ ಸಮಾರಂಭದಲ್ಲಿ ಗೌರವಿಸಲಾಗಿದೆ. ಬ್ಯಾಟಿಂಗ್ ದಂತಕತೆ ತೆಂಡುಲ್ಕರ್ ಅವರು ಲಾರ್ಡ್ಸ್ ಪೆವಿಲಿಯನ್‌ನಲ್ಲಿರುವ ಗಂಟೆಯನ್ನು ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟಿಗೆ ಚಾಲನೆ ನೀಡಿದರು.

ಎಂಸಿಸಿ ಮ್ಯೂಸಿಯಂನಲ್ಲಿ ತೆಂಡುಲ್ಕರ್ ಅವರು ತಮ್ಮದೇ ಭಾವಚಿತ್ರವನ್ನು ಅನಾವರಣಗೊಳಿಸಿದ ನಂತರ ಅದರ ಪಕ್ಕದಲ್ಲಿ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಈ ಕ್ಷಣವು ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗಿದೆ.

ಕಲಾವಿದ ಸ್ಟುವರ್ಟ್ ಪಿಯರ್ಸನ್ ಅವರು ತೆಂಡುಲ್ಕರ್‌ರ ಭಾವಚಿತ್ರವನ್ನು ಬಿಡಿಸಿದ್ದಾರೆ. ಇದು ಭಾರತೀಯ ಕ್ರಿಕೆಟ್ ಐಕಾನ್ ತೆಂಡುಲ್ಕರ್‌ರ ಶ್ರೇಷ್ಠತೆಯನ್ನು ಸೆರೆ ಹಿಡಿದಿದೆ. ಇದು ಲಾರ್ಡ್ಸ್‌ನಲ್ಲಿ ತೆಂಡುಲ್ಕರ್ ಅವರ 2ನೇ ಭಾವಚಿತ್ರವಾಗಿದೆ.

ಎಂಸಿಸಿ ವಸ್ತುಸಂಗ್ರಹಾಲಯವು ಲಂಡನ್‌ನ ಸೇಂಟ್ ಜಾನ್ಸ್ ವುಡ್‌ನಲ್ಲಿರುವ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿದೆ. ಇದು ವಿಶ್ವದ ಅತ್ಯಂತ ಹಳೆಯ ಕ್ರೀಡಾ ವಸ್ತುಸಂಗ್ರಹಾಲಯಗಳ ಪೈಕಿ ಒಂದಾಗಿದೆ.

ಲಾರ್ಡ್ಸ್ ಪೆವಿಲಿಯನ್‌ನಲ್ಲಿ ಐದು ನಿಮಿಷಗಳ ಕಾಲ ಗಂಟೆಯನ್ನು ಬಾರಿಸುವುದು ಪಂದ್ಯದ ಆರಂಭದ ಸಂಕೇತವಾಗಿದೆ. ಕ್ರಿಕೆಟ್‌ ನಲ್ಲಿ ಅತ್ಯುನ್ನತ ಪರಂಪರೆಯನ್ನು ಹೊಂದಿರುವ ಹೊರತಾಗಿಯೂ ‘ಮಾಸ್ಟರ್ ಬ್ಲಾಸ್ಟರ್’ ತೆಂಡುಲ್ಕರ್ ಇದೇ ಮೊದಲ ಬಾರಿ ಬೆಲ್ ಬಾರಿಸಿದರು.

2007ರಲ್ಲಿ ಗಂಟೆಯನ್ನು ಬಾರಿಸುವ ಸಂಪ್ರದಾಯವನ್ನು ಆರಂಭಿಸಲಾಗಿದ್ದು, ಈ ತನಕ ಹಲವಾರು ಕ್ರಿಕೆಟ್ ದಂತಕತೆಗಳು, ಅಧಿಕಾರಿಗಳು ಹಾಗೂ ಗಣ್ಯರು ಗಂಟೆ ಬಾರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News