ಸಚಿನ್ ತೆಂಡುಲ್ಕರ್ ಬಿಸಿಸಿಐ ನೂತನ ಅಧ್ಯಕ್ಷ : ವದಂತಿಗೆ ಲೆಜೆಂಡರಿ ಬ್ಯಾಟರ್ ಸ್ಪಷ್ಟನೆ
ಸಚಿನ್ ತೆಂಡುಲ್ಕರ್ | PTI
ಮುಂಬೈ, ಸೆ.12: ತಾನು ಬಿಸಿಸಿಐ ಅಧ್ಯಕ್ಷನಾಗುತ್ತೇನೆ ಎಂಬ ವರದಿಯನ್ನು ಭಾರತೀಯ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ತೆಂಡುಲ್ಕರ್ ಅವರ ಮ್ಯಾನೇಜ್‌ಮೆಂಟ್ ಕಂಪೆನಿಯು ಗುರುವಾರ ಈ ಕುರಿತು ಸ್ಪಷ್ಟನೆ ನೀಡಿದೆ.
ಸ್ಪಷ್ಟ ಶಬ್ದಗಳಲ್ಲಿ ಸ್ಪಷ್ಟನೆ ನೀಡಿರುವ ಎಸ್‌ಆರ್‌ಟಿ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಪ್ರೈ.ಲಿ., ಸಚಿನ್ ತೆಂಡುಲ್ಕರ್ ಅವರನ್ನು ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಪರಿಣಿಸಲಾಗುತ್ತದೆ ಇಲ್ಲವೇ ನಾಮನಿದೇರ್ಶನ ಮಾಡಲಾಗುತ್ತದೆ ಎಂಬ ಕುರಿತು ಕೆಲವು ವರದಿಗಳು ಹಾಗೂ ವದಂತಿಗಳು ಹರಿದಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇಂತಹ ಯಾವುದೇ ಬೆಳವಣಿಗೆ ನಡೆದಿಲ್ಲ. ಇಂತಹ ವದಂತಿಗಳಿಂದ ದೂರ ಇರುವಂತೆ ಎಲ್ಲರಲ್ಲೂ ವಿನಂತಿಸಿಕೊಳ್ಳುತ್ತೇವೆ ಎಂದು ಹೇಳಿದೆ.
ಸೆ.28ರಂದು ನಿಗದಿಯಾಗಿರುವ ಬಿಸಿಸಿಐನ ವಾರ್ಷಿಕ ಮಹಾಸಭೆಗಿಂತ ಮೊದಲು ಬಿಸಿಸಿಐ ಅಧ್ಯಕ್ಷ ಹಾಗೂ ಐಪಿಎಲ್ ಚೇರ‌್ಮನ್ ಸಹಿತ ಹಲವಾರು ಹುದ್ದೆಗಳಿಗಾಗಿ ಚುನಾವಣೆಗಳು ನಡೆಯಲಿದೆ ಎಂಬ ದಟ್ಟ ವದಂತಿಯ ನಡುವೆ ಈ ಸ್ಪಷ್ಟನೆ ಬಂದಿದೆ.
ರೋಜರ್ ಬಿನ್ನಿ ನಿರ್ಗಮನದ ನಂತರ ಬಿಸಿಸಿಐ ಅಧ್ಯಕ್ಷ ಹುದ್ದೆ ಖಾಲಿಯಾಗಿದೆ. ಬಿನ್ನಿ ಈ ತಿಂಗಳಾರಂಭದಲ್ಲಿ 70ನೇ ವಯಸ್ಸಿಗೆ ಕಾಲಿಟ್ಟ ನಂತರ ತನ್ನ ಹುದ್ದೆ ತ್ಯಜಿಸಿದ್ದರು. ಐಪಿಎಲ್ ಚೇರ‌್ಮನ್ ಅರುಣ್ ಧುಮಾಲ್ ಆಡಳಿತಾತ್ಮಕ ಹುದ್ದೆಯಲ್ಲಿ ಆರು ವರ್ಷ ಪೂರೈಸಿದ ಕಾರಣ ಕಡ್ಡಾಯವಾಗಿ ಕೂಲಿಂಗ್ ಆಫ್ ಅವಧಿಗೆ ಒಳಪಡಲಿದ್ದಾರೆ.
ಬಿನ್ನಿ 2022ರ ಅಕ್ಟೋಬರ್‌ನಲ್ಲಿ ಬಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರು ಬಿಸಿಸಿಐನ ಮಹಾಸಭೆಯ ತನಕ ಮುಂದುವರಿಯಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಇದೀಗ ಬಿಸಿಸಿಐ ಅಧ್ಯಕ್ಷ ಹುದ್ದೆ ತೆರವಾಗಿರುವ ಕಾರಣ ಊಹಾಪೋಹಗಳು ಹೆಚ್ಚಾಗಿವೆ.