ಯು.ಎಸ್. ಓಪನ್: ಸಾರಾ ಇರಾನಿ, ಆಂಡ್ರಿಯ ವವಾಸ್ಸೋರಿಗೆ ಮಿಕ್ಸೆಡ್ ಡಬಲ್ಸ್ ಪ್ರಶಸ್ತಿ
PC : @max_ambesi
ನ್ಯೂಯಾರ್ಕ್, ಆ.21: ಇಗಾ ಸ್ವಿಯಾಟೆಕ್ ಹಾಗೂ ಕಾಸ್ಪರ್ ರೂಡ್ ಅವರನ್ನು ಫೈನಲ್‌ನಲ್ಲಿ ಸೋಲಿಸಿದ ಸಾರಾ ಇರಾನಿ ಹಾಗೂ ಆಂಡ್ರಿಯ ವವಾಸ್ಸೋರಿ ಯು.ಎಸ್. ಓಪನ್ ಮಿಕ್ಸೆಡ್ ಡಬಲ್ಸ್ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಂಡರು.
ಬುಧವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಾರಾ ಹಾಗೂ ಆಂಡ್ರಿಯಾ ಅವರು ಸ್ವಿಯಾಟೆಕ್ ಹಾಗೂ ರೂಡ್ ಅವರನ್ನು 6-3, 5-7, 10-6 ಸೆಟ್ ಗಳ ಅಂತರದಿಂದ ಸೋಲಿಸಿದರು.
ಇದೇ ವೇಳೆ ಪ್ರಧಾನ ಸುತ್ತಿನ ಪಂದ್ಯಾವಳಿ ಆರಂಭವಾಗುವುದಕ್ಕೆ ಮೊದಲೇ ನಡೆದಿದ್ದ ಮಿಶ್ರ ಡಬಲ್ಸ್ ಸ್ಪರ್ಧಾವಳಿಯಲ್ಲಿ 16 ತಂಡಗಳು ಎರಡು ದಿನಗಳ ಕಾಲ ಸೆಣಸಾಡಿದ್ದು, ಅಂತಿಮವಾಗಿ ಇಟಲಿಯ ಜೋಡಿ 1 ಮಿಲಿಯನ್ ಯು.ಎಸ್. ಡಾಲರ್ ಬಹುಮಾನವನ್ನು ಗೆದ್ದುಕೊಂಡಿದೆ. ಯು.ಎಸ್ ಓಪನ್ ಟೂರ್ನಿಯ ಪ್ರಧಾನ ಸುತ್ತು ರವಿವಾರದಿಂದ ಆರಂಭವಾಗಲಿದೆ.
2 ದಿನಗಳ ಕಿರು ಪಂದ್ಯಾವಳಿ ಹಾಗೂ ಬಹುಮಾನ ಮೊತ್ತದ ಹೆಚ್ಚಳವು 6 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಸ್ವಿಯಾಟೆಕ್ ಸಹಿತ ಹಲವು ಸಿಂಗಲ್ಸ್ ಟೆನಿಸ್ ತಾರೆಯರನ್ನು ಸೆಳೆದಿತ್ತು.
ವಿಶ್ವದ ನಂ.2ನೇ ಆಟಗಾರ್ತಿ ಸ್ವಿಯಾಟೆಕ್ ಸೋಮವಾರ ಸಿನ್ಸಿನಾಟಿ ಓಪನ್ ಪ್ರಶಸ್ತಿಗಾಗಿ ಜಾಸ್ಮಿನ್ ಪಯೋಲಿನಿ ವಿರುದ್ಧ 2 ಗಂಟೆಗಳ ತನಕ ಹೋರಾಟ ನೀಡಿದ್ದರು. ಆ ನಂತರ ನ್ಯೂಯಾರ್ಕ್‌ಗೆ ಆಗಮಿಸಿ ನಾರ್ವೆಯ ಆಟಗಾರ ರೂಡ್ ಜೊತೆಗೂಡಿ ಮಿಕ್ಸೆಡ್ ಡಬಲ್ಸ್ ಪಂದ್ಯಾವಳಿಯನ್ನು ಆಡಿದ್ದಾರೆ.
ಸಿನ್ಸಿನಾಟಿ ಓಪನ್‌ನಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದ ಕಾರ್ಲೊಸ್ ಅಲ್ಕರಾಝ್ ಕೂಡ ಈ ಟೂರ್ನಿಯಲ್ಲಿ ಬ್ರಿಟನ್‌ನ ಎಮ್ಮಾ ರಾಡುಕಾನು ಅವರೊಂದಿಗೆ ಸ್ಪರ್ಧಿಸಿದ್ದರು. ಸರ್ಬಿಯದ ಸೂಪರ್ ಸ್ಟಾರ್ ನೊವಾಕ್ ಜೊಕೊವಿಕ್ ಸರ್ಬಿಯದ ಓಲ್ಗಾ ಡ್ಯಾನಿಲೊವಿಕ್ ಅವರೊಂದಿಗೆ ಆಡಿದ್ದರು.
ಇಟಲಿಯ ಇರಾನಿ ಹಾಗೂ ವವಾಸ್ಸೋರಿ ಎರಡು ವರ್ಷಗಳಿಂದ ಮಿಕ್ಸೆಡ್ ಡಬಲ್ಸ್ ಪಂದ್ಯವನ್ನು ಆಡುತ್ತಿದ್ದಾರೆ. ಈ ವರ್ಷ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಮಿಕ್ಸೆಡ್ ಡಬಲ್ಸ್ ಪ್ರಶಸ್ತಿಯನ್ನು ಜಯಿಸಿದ್ದರು.
ಬುಧವಾರವೇ ನಡೆದಿದ್ದ ಸೆಮಿ ಫೈನಲ್ ಪಂದ್ಯದಲ್ಲಿ ಸ್ವಿಯಾಟೆಕ್ ಹಾಗೂ ರೂಡ್ ಜೋಡಿ ಅಗ್ರ ಶ್ರೇಯಾಂಕದ ಜೆಸ್ಸಿಕಾ ಪೆಗುಲಾ ಹಾಗೂ ಜಾಕ್ ಡ್ರೇಪರ್ ರನ್ನು 3-5, 5-3, 10-8 ಅಂತರದಿಂದ ಮಣಿಸಿದರು.ಮತ್ತೊಂದು ಸೆಮಿ ಫೈನಲ್‌ನಲ್ಲಿ ಇರಾನಿ ಹಾಗೂ ವವಾಸ್ಸೋರಿ ಅಮೆರಿಕದ ಜೋಡಿ ಡೇನಿಯಲ್ ಕಾಲಿನ್ಸ್ ಹಾಗೂ ಕ್ರಿಸ್ಟಿಯನ್ ಹ್ಯಾರಿಸನ್‌ರನ್ನು 4-2, 4-2 ನೇರ ಸೆಟ್‌ಗಳ ಅಂತರದಿಂದ ಮಣಿಸುವ ಮೂಲಕ ಫೈನಲ್‌ಗೆ ತಲುಪಿದ್ದರು.
ನಾನು ಹಾಗೂ ಇರಾನಿ ಸಿಂಗಲ್ಸ್ ತಾರೆಯರ ವಿರುದ್ಧ ತಮ್ಮನ್ನು ತಾವು ಸಾಬೀತುಪಡಿಸುವ ಗುರಿಯನ್ನು ಹೊಂದಿದ್ದೆವು ಎಂದು ವವಾಸ್ಸೋರಿ ಹೇಳಿದ್ದಾರೆ.
‘‘ಬೃಹತ್ ಆರ್ಥರ್ ಆಶ್ ಕ್ರೀಡಾಂಗಣದ ಟೆನಿಸ್ ಕೋರ್ಟ್‌ನಲ್ಲಿ ಹೊನಲು ಬೆಳಕಿನಡಿ ಕಿಕ್ಕಿರಿದ ಪ್ರೇಕ್ಷಕರ ಸಮ್ಮುಖದಲ್ಲಿ ಆಡಿದ್ದು ‘ಅದ್ಭುತ’ ಅನುಭವ ನೀಡಿದೆ’’ ಎಂದು 44 ನಿಮಿಷಗಳಲ್ಲಿ ಸೆಮಿ ಫೈನಲ್ ಪಂದ್ಯ ಗೆದ್ದ ನಂತರ ಇರಾನಿ ಪ್ರತಿಕ್ರಿಯಿಸಿದರು.