×
Ad

ಗೋವಾ ವಿರುದ್ಧ ಅಬ್ಬರಿಸಿದ್ದ ಸರ್ಫರಾಝ್ ಖಾನ್ ಪರ ಅಶ್ವಿನ್ ಬ್ಯಾಟಿಂಗ್

Update: 2026-01-01 21:12 IST

ಸರ್ಫರಾಝ್ ಖಾನ್ |  Photo Credit : PTI  

ಹೊಸದಿಲ್ಲಿ, ಜ. 1: ದೇಶೀಯ ಕ್ರಿಕೆಟ್‌ನಲ್ಲಿ ಸರ್ಫರಾಝ್ ಖಾನ್ ತಮ್ಮ ಉತ್ತಮ ಫಾರ್ಮ್ ಮುಂದುವರಿಸಿದ್ದಾರೆ. ಸರ್ಫರಾಝ್ ಪರ ಬ್ಯಾಟ್ ಬೀಸಿರುವ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, 2026ರ ಆವೃತ್ತಿಯ ಐಪಿಎಲ್‌ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಸರ್ಫರಾಝ್ ನಿಯಮಿತ ಬ್ಯಾಟರ್ ಆಗಬೇಕೆಂದು ಆಗ್ರಹಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅಶ್ವಿನ್, ‘‘ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ-20 ಟೂರ್ನಿಯಲ್ಲಿ ಔಟಾಗದೆ 100 (47 ಎಸೆತ), 52 (40 ಎಸೆತ), 64 (25 ಎಸೆತ), 73 ರನ್ (22 ಎಸೆತ) ಗಳಿಸಿರುವ ಸರ್ಫರಾಝ್ ಬುಧವಾರ ವಿಜಯ್ ಹಝಾರೆ ಏಕದಿನ ಟೂರ್ನಿಯಲ್ಲಿ 14 ಸಿಕ್ಸರ್‌ಗಳ ಸಹಿತ 75 ಎಸೆತಗಳಲ್ಲಿ 157 ರನ್ ಗಳಿಸಿ ಅಬ್ಬರಿಸಿದ್ದಾರೆ.

ಸ್ವೀಪ್ಸ್ ಹಾಗೂ ಸ್ಲಾಗ್ ಸ್ವೀಪ್ಸ್‌ಗಳ ಮೂಲಕ ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳ ಮೇಲೆ ಸವಾರಿ ಮಾಡಿದ್ದಾರೆ. ಅವರು ಕದವನ್ನು ತಟ್ಟಿಲ್ಲ, ಕದವನ್ನು ತೆರೆದಿದ್ದಾರೆ. ಸಿಎಸ್‌ಕೆ ತಂಡವು ಸರ್ಫರಾಝ್ ಅವರ ಉತ್ತಮ ಫಾರ್ಮ್ ಅನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ಆಡುವ 11ರ ಬಳಗದಲ್ಲಿ ಅವರಿಗೆ ಸ್ಥಾನ ಕಲ್ಪಿಸಬೇಕು.

ಈ ಋತುವಿನಲ್ಲಿ ಸಿಎಸ್‌ಕೆ ತಂಡ ಬ್ಯಾಟಿಂಗ್ ವಿಭಾಗದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. 2026ರ ಐಪಿಎಲ್‌ಗಾಗಿ ಕಾತರದಿಂದಿದ್ದೇನೆ’’ ಎಂದು ಬರೆದಿದ್ದಾರೆ.

ಮುಂಬೈನ ಬಲಗೈ ಬ್ಯಾಟರ್ ಸರ್ಫರಾಝ್ ಅವರು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ-20 ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣಕ್ಕೆ ಅಬುಧಾಬಿಯಲ್ಲಿ ನಡೆದಿದ್ದ ಐಪಿಎಲ್ ಮಿನಿ ಹರಾಜಿನಲ್ಲಿ ಸಿಎಸ್‌ಕೆ ತಂಡವು 75 ಲಕ್ಷ ರೂ. ನೀಡಿ ಕೊನೆಯ ಕ್ಷಣದಲ್ಲಿ ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು.

ಈಗ ನಡೆಯುತ್ತಿರುವ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಗೋವಾ ತಂಡದ ವಿರುದ್ಧ ಸರ್ಫರಾಝ್ ಖಾನ್ ಕೇವಲ 75 ಎಸೆತಗಳಲ್ಲಿ 9 ಬೌಂಡರಿ ಹಾಗೂ 14 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಕೇವಲ 56 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದ್ದರು. ಈ ಹಿನ್ನೆಲೆಯಲ್ಲಿ ಅಶ್ವಿನ್ ಅವರು ಸರ್ಫರಾಝ್ ಬೆಂಬಲಕ್ಕೆ ನಿಂತಿದ್ದಾರೆ.

ಅಶ್ವಿನ್ ಅವರು ಇತ್ತೀಚೆಗೆ ಕೊನೆಗೊಂಡಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸರ್ಫರಾಝ್ ಅವರ ಪ್ರದರ್ಶನವನ್ನು ಎತ್ತಿ ತೋರಿಸಿದ್ದು, ಈ ಟೂರ್ನಿಯಲ್ಲಿ ಸರ್ಫರಾಝ್ ಅವರು 65.80ರ ಸರಾಸರಿಯಲ್ಲಿ 203.08ರ ಸ್ಟ್ರೈಕ್‌ರೇಟ್‌ನಲ್ಲಿ ಏಳು ಪಂದ್ಯಗಳಲ್ಲಿ ಒಟ್ಟು 329 ರನ್ ಕಲೆ ಹಾಕಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News