×
Ad

Ranji | 206 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಸರ್ಫರಾಝ್ ಖಾನ್

ಹೈದರಾಬಾದ್ ವಿರುದ್ಧ ಮುಂಬೈ 560 ರನ್

Update: 2026-01-23 23:27 IST

ಸರ್ಫರಾಝ್ ಖಾನ್ | Photo Credit : PTI

ಮುಂಬೈ, ಜ.23: ಮುಂಬೈ ಕ್ರಿಕೆಟ್ ತಂಡದ ಬ್ಯಾಟರ್ ಸರ್ಫರಾಝ್ ಖಾನ್ ಶುಕ್ರವಾರ ರಣಜಿ ಟ್ರೋಫಿ ‘ಡಿ’ ಗುಂಪಿನ ಪಂದ್ಯದಲ್ಲಿ ಹೈದರಾಬಾದ್ ತಂಡದ ವಿರುದ್ಧ 206 ಎಸೆತಗಳಲ್ಲಿ ದ್ವಿಶತಕ ದಾಖಲಿಸಿದರು. ಇದು ಅವರ ವೃತ್ತಿಜೀವನದ ಪ್ರಥಮ ದರ್ಜೆ ಕ್ರಿಕೆಟ್‌ ನಲ್ಲಿ ಐದನೇ ದ್ವಿಶತಕವಾಗಿದೆ. ಈ ಮೂಲಕ ಅಜಿತ್ ಅಗರ್ಕರ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಗೆ ಸ್ಪಷ್ಟ ಸಂದೇಶ ರವಾನಿಸಿದರು.

ಸರ್ಫರಾಝ್ ಅವರ ದ್ವಿಶತಕ ಹಾಗೂ ನಾಯಕ ಸಿದ್ದೇಶ್ ಲಾಡ್ (104 ರನ್, 179 ಎಸೆತ) ಶತಕ, ಸುವೇದ್ ಪಾರ್ಕರ್ (75 ರನ್, 98 ಎಸೆತ) ಅರ್ಧಶತಕದ ನೆರವಿನಿಂದ ಮುಂಬೈ ತಂಡವು ಎರಡನೇ ದಿನದಾಟದ ಅಂತ್ಯಕ್ಕೆ ತನ್ನ ಮೊದಲ ಇನಿಂಗ್ಸ್‌ ನಲ್ಲಿ 560 ರನ್ ಕಲೆ ಹಾಕಿದೆ.

ಹೈದರಾಬಾದ್ ಪರ ರಕ್ಷಣ್ ರೆಡ್ಡಿ (4-107) ಯಶಸ್ವಿ ಪ್ರದರ್ಶನ ನೀಡಿದರು.

ಸರ್ಫರಾಝ್ ಇದಕ್ಕೂ ಮೊದಲು ತನ್ನ 17ನೇ ಪ್ರಥಮ ದರ್ಜೆ ಶತಕ ಹಾಗೂ 2025-26ರ ಋತುವಿನ ಮೊದಲ ಶತಕವನ್ನು ಸಿಡಿಸಿದ್ದರು. 2019-20ರ ನಂತರ ಕೇವಲ ಅಮನ್‌ದೀಪ್ ಖರೆ ಹಾಗೂ ಅನುಸ್ತುಪ್ ಮಜುಂದಾರ್ ಮಾತ್ರ ರಣಜಿಯಲ್ಲಿ ಸರ್ಫರಾಝ್‌ ಗಿಂತ ಹೆಚ್ಚು ಶತಕಗಳನ್ನು ಸಿಡಿಸಿದ್ದಾರೆ.

ಸರ್ಫರಾಝ್ 219 ಎಸೆತಗಳಲ್ಲಿ 227 ರನ್ ಗಳಿಸಿ ಔಟಾದರು. 103.65ರ ಸ್ಟ್ರೈಕ್‌ರೇಟ್‌ನಲ್ಲಿ 19 ಬೌಂಡರಿ ಹಾಗೂ 9 ಸಿಕ್ಸರ್‌ಗಳನ್ನು ಸಿಡಿಸಿದರು. ಭಾರತ ತಂಡದ ಸಹ ಆಟಗಾರ ಮುಹಮ್ಮದ್ ಸಿರಾಜ್ ವಿರುದ್ಧ ಕೇವಲ 39 ಎಸೆತಗಳಲ್ಲಿ 45 ರನ್ ಗಳಿಸಿದರು.

ಸರ್ಫರಾಝ್ ಸದ್ಯ ಅತ್ಯುತ್ತಮ ಫಾರ್ಮ್‌ ನಲ್ಲಿದ್ದಾರೆ. 2025-26ರ ಸಾಲಿನ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಪಂಜಾಬ್ ತಂಡದ ವಿರುದ್ಧ 15 ಎಸೆತಗಳಲ್ಲಿ ಅರ್ಧಶತಕವನ್ನು ಸಿಡಿಸಿದ್ದರು. ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ ಗಳಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದರು. ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಆರು ಇನಿಂಗ್ಸ್‌ಗಳಲ್ಲಿ 75.75ರ ಸರಾಸರಿಯಲ್ಲಿ 190.56ರ ಸ್ಟ್ರೈಕ್‌ರೇಟ್‌ ನಲ್ಲಿ ಒಟ್ಟು 303 ರನ್ ಗಳಿಸಿ ಮುಂಬೈ ಪರ ಗರಿಷ್ಠ ರನ್ ಸ್ಕೋರರ್ ಆಗಿದ್ದರು.

ಸರ್ಫರಾಝ್ 2024ರ ನವೆಂಬರ್‌ ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಕೊನೆಯ ಬಾರಿ ಆಡಿದ್ದರು. ಆ ನಂತರ ದೇಶೀಯ ಕ್ರಿಕೆಟ್‌ನಲ್ಲಿ ರನ್ ಹೊಳೆ ಹರಿಸುತ್ತಲೇ ಇದ್ದಾರೆ. 2025-26ರ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಏಳು ಪಂದ್ಯಗಳಲ್ಲಿ 329 ರನ್ ಗಳಿಸಿರುವ ಸರ್ಫರಾಝ್, ಮುಂಬೈ ತಂಡದ ಪರ ಎರಡನೇ ಗರಿಷ್ಠ ರನ್ ಸ್ಕೋರರ್ ಆಗಿದ್ದರು.

2026ರ ಐಪಿಎಲ್ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೂಲ ಬೆಲೆ 75 ಲಕ್ಷ ರೂ.ಗೆ ಸರ್ಫರಾಝ್ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News