ಬ್ಯಾಡ್ಮಿಂಟನ್ ರ‍್ಯಾಂಕಿಂಗ್: ಟಾಪ್-10ಕ್ಕೆ ಮತ್ತೆ ಪ್ರವೇಶಿಸಿದ ಸಾತ್ವಿಕ್-ಚಿರಾಗ್
ಸಾತ್ವಿಕ್, ಚಿರಾಗ್ | PC : X \ @KhelNow
ಹೊಸದಿಲ್ಲಿ, ಜು.29: ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿ ಫೈನಲ್ ನಲ್ಲಿ ಕಾಣಿಸಿಕೊಂಡಿರುವ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಮಂಗಳವಾರ ಬಿಡುಗಡೆಯಾದ ಬಿಡಬ್ಲ್ಯುಎಫ್ ರ‍್ಯಾಂಕಿಂಗ್ ನ ಪುರುಷರ ಡಬಲ್ಸ್ ವಿಭಾಗದಲ್ಲಿ ಮೂರು ಸ್ಥಾನ ಭಡ್ತಿ ಪಡೆದು 10ನೇ ಸ್ಥಾನ ಪಡೆದಿದ್ದಾರೆ. ಭಾರತದ ಇತರ ಆಟಗಾರರು ಕೂಡ ತಮ್ಮ ರ‍್ಯಾಂಕಿಂಗ್ ನಲ್ಲಿ ಸುಧಾರಣೆ ಕಂಡಿದ್ದಾರೆ.
ವಿಶ್ವದ ಮಾಜಿ ನಂ.1 ಜೋಡಿ ಸಾತ್ವಿಕ್-ಚಿರಾಗ್ ಅವರ ಪಯಣವು ಚೀನಾ ಓಪನ್ ಟೂರ್ನಿಯಲ್ಲಿ ಸೆಮಿ ಫೈನಲ್ ನಲ್ಲಿ ಅಂತ್ಯವಾಗಿತ್ತು. ಸೆಮಿ ಫೈನಲ್ ನಲ್ಲಿ ಮಲೇಶ್ಯಯದ ಜೋಡಿ ಆ್ಯರೊನ್ ಚಿಯಾ ಹಾಗೂ ಸೊಹ್ ವೂ ಯಿಕ್ ಎದುರು 13-21, 17-21 ಅಂತರದಿಂದ ಸೋತಿದ್ದಾರೆ.
ಸಿಂಗಾಪುರ ಓಪನ್ ಹಾಗೂ ಇಂಡಿಯಾ ಓಪನ್ ನಂತರ ಈ ಋತುವಿನಲ್ಲಿ ಸಾತ್ವಿಕ್-ಚಿರಾಗ್ ಮೂರನೇ ಬಾರಿ ಸೆಮಿ ಫೈನಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಕಳೆದ ವರ್ಷ ಥಾಯ್ಲೆಂಡ್ ಓಪನ್ ಜಯಿಸಿದ ನಂತರ ಸಾತ್ವಿಕ್-ಚಿರಾಗ್ ಜೋಡಿ ವಿಶ್ವದ ನಂ.1 ರ‍್ಯಾಂಕಿಂಗ್ಗೆ ಏರಿತ್ತು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಲಕ್ಷ್ಯ ಸೇನ್ ರ‍್ಯಾಂಕಿಂಗ್ ನಲ್ಲಿ 2 ಸ್ಥಾನ ಭಡ್ತಿ ಪಡೆದಿದ್ದು, 54,442 ಅಂಕದೊಂದಿಗೆ 17ನೇ ರ‍್ಯಾಂಕಿಗೆ ತಲುಪಿದ್ದಾರೆ. ಚೀನಾದ ಝೆನ್ಕ್ಸಿಯಾಂಗ್ ವಾಂಗ್ ಗಿಂತ ಸ್ವಲ್ಪ ಮುಂದಿದ್ದಾರೆ.
ಎಚ್.ಎಸ್. ಪ್ರಣಯ್ ಕೂಡ ಎರಡು ಸ್ಥಾನ ಮೇಲಕ್ಕೇರಿದ್ದು, 40,336 ಅಂಕದೊಂದಿಗೆ ವಿಶ್ವದ ನಂ.33ನೇ ಸ್ಥಾನಕ್ಕೇರಿದ್ದಾರೆ.
ಯುವ ಪ್ರತಿಭೆ ಉನ್ನತಿ ಹೂಡಾ ಚೀನಾ ಓಪನ್ ನ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಪಿ.ವಿ. ಸಿಂಧು ವಿರುದ್ದ ರೋಚಕ ಜಯ ಸಾಧಿಸಿದ ನಂತರ ಮಹಿಳೆಯರ ಸಿಂಗಲ್ಸ್ ನಲ್ಲಿ ನಾಲ್ಕು ಸ್ಥಾನ ಮೇಲಕ್ಕೇರಿ 31ನೇ ರ‍್ಯಾಂಕಿಗೆ ತಲುಪಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.
17ರ ಹರೆಯದ ಉನ್ನತಿ ಅವರು ಸಿಂಧು ಅವರನ್ನು ಒಂದು ಗಂಟೆ, 13 ನಿಮಿಷಗಳ ಕಾಲ ನಡೆದಿದ್ದ ಹೋರಾಟದಲ್ಲಿ 21-16, 19-21, 21-13 ನೇರ ಗೇಮ್ ಗಳ ಅಂತರದಿಂದ ಮಣಿಸಿದ್ದರು. ಆದರೆ ಕ್ವಾರ್ಟರ್ ಫೈನಲ್ ನಲ್ಲಿ ಜಪಾನಿನ ಅಕಾನೆ ಯಮಗುಚಿ ವಿರುದ್ಧ ಸೋತಿದ್ದರು.
ಪಿ.ವಿ. ಸಿಂಧು ಅವರು ಮಹಿಳೆಯರ ಸಿಂಗಲ್ಸ್ ನಲ್ಲಿ 15ನೇ ರ‍್ಯಾಂಕ್ ಪಡೆಯುವುದರೊಂದಿಗೆ ಭಾರತದ ಗರಿಷ್ಠ ರ‍್ಯಾಂಕಿನ ಆಟಗಾರ್ತಿ ಎಂಬ ಸ್ಥಾನಮಾನವನ್ನು ಉಳಿಸಿಕೊಂಡಿದ್ದಾರೆ.
ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭಾರತದ ಅಗ್ರ ಜೋಡಿ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಅವರು 11ನೇ ಸ್ಥಾನ ಉಳಿಸಿಕೊಂಡಿದ್ದಾರೆ. ತನಿಶಾ ಕ್ರಾಸ್ಟೊ ಹಾಗೂ ಅಶ್ವಿನಿ ಪೊನ್ನಪ್ಪ ಅವರು ಎರಡು ಸ್ಥಾನ ಭಡ್ತಿ ಪಡೆದು 45ನೇ ರ‍್ಯಾಂಕ್ ತಲುಪಿದ್ದಾರೆ.