ಮಕಾವು ಓಪನ್: ಸಾತ್ವಿಕ್-ಚಿರಾಗ್ ಶುಭಾರಂಭ
ಸಾತ್ವಿಕ್-ಚಿರಾಗ್ | PC : @KhelNow
ಮಕಾವು, ಜು.29: ಭಾರತದ ಸ್ಟಾರ್ ಶಟ್ಲರ್ ಗಳಾದ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಮಕಾವು ಓಪನ್ ಸೂಪರ್-300 ಟೂರ್ನಿಯಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸುವ ಮೂಲಕ ಶುಭಾರಂಭ ಮಾಡಿದ್ದಾರೆ.
ಏಶ್ಯನ್ ಗೇಮ್ಸ್ ಚಾಂಪಿಯನ್ ಸಾತ್ವಿಕ್-ಚಿರಾಗ್ ಜೋಡಿ ಮಂಗಳವಾರ ಕೇವಲ 36 ನಿಮಿಷಗಳಲ್ಲಿ ಕೊನೆಗೊಂಡ ಮೊದಲ ಸುತ್ತಿನ ಪಂದ್ಯದಲ್ಲಿ ಮಲೇಶ್ಯದ ಲೋ ಹ್ಯಾಂಗ್ ಯೀ ಹಾಗೂ ಎನ್ಐ ಇಂಗ್ ಚಿಯೋಂಗ್ ಅವರನ್ನು 21-13 ಹಾಗೂ 21-15 ನೇರ ಗೇಮ್ ಗಳ ಅಂತರದಿಂದ ಮಣಿಸಿದರು.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅನ್ಮೋಲ್ ಖರ್ಬ್ ಹಾಗೂ ತಸ್ನಿಮ್ ಮಿರ್ ತಮ್ಮ ಅರ್ಹತಾ ಪಂದ್ಯಗಳನ್ನು ಗೆದ್ದ ನಂತರ ಪ್ರಧಾನ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ಅನ್ಮೋಲ್ ಅವರು ಅಝರ್ಬೈಜಾನ್ ನ ಫಾತಿಮಾ ಅಝಹ್ರಾ ಅವರನ್ನು 21-11, 21-13 ಗೇಮ್ ಗಳ ಅಂತರದಿಂದ ಮಣಿಸಿದರು. ಮತ್ತೊಂದೆಡೆ ತಸ್ನಿಮ್ ಅವರು ಥಾಯ್ಲೆಂಡ್ ನ ಟಿಡಾಪ್ರೋನ್ ಕ್ಲೀಬೀಸನ್ರನ್ನು 21-14, 13-21,21-17 ಗೇಮ್ ಗಳ ಅಂತರದಿಂದ ಸೋಲಿಸಿದ್ದಾರೆ.
ತಸ್ನಿಮ್ ಪ್ರಧಾನ ಸುತ್ತಿನ ಮೊದಲ ರೌಂಡ್ ನಲ್ಲಿ ಚೀನಾದ ಅಗ್ರ ಶ್ರೇಯಾಂಕದ ಚೆನ್ ಯು ಫೀ ಅವರನ್ನು ಎದುರಿಸಲಿದ್ದಾರೆ. ಅನ್ಮೋಲ್ ಅವರು ಥಾಯ್ಲೆಂಡ್ ನ 2ನೇ ಶ್ರೇಯಾಂಕದ ಬುಸನನ್ ರನ್ನು ಎದುರಿಸಲಿದ್ದಾರೆ.
ಅಗ್ರ ಶ್ರೇಯಾಂಕದ ಮಹಿಳೆಯರ ಡಬಲ್ಸ್ ಜೋಡಿ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಅವರು ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದಾರೆ. ಒಂದು ಗಂಟೆ ಕಾಲ ನಡೆದ ಪಂದ್ಯದಲ್ಲಿ ಟ್ರೀಸಾ ಹಾಗೂ ಗಾಯತ್ರಿ ಚೈನೀಸ್ ತೈಪೆಯ ಲಿನ್ ಕ್ಸಿಯಾವೊ ಮಿನ್ ಹಾಗೂ ಪೆಂಗ್ ಯು ವೀ ವಿರುದ್ಧ 21-16, 20-22, 15-21 ಅಂತರದಿಂದ ಸೋತಿದ್ದಾರೆ.
ಮತ್ತೊಂದು ಪುರುಷರ ಡಬಲ್ಸ್ ಪಂದ್ಯದಲ್ಲಿ ಡಿಂಕು ಸಿಂಗ್ ಹಾಗೂ ಅಮನ್ ಮುಹಮ್ಮದ್ ಹಾಂಕಾಂಗ್ ನ ಲಾ ಚೆವುಕ್ ಹಿಮ್ ಹಾಗೂ ಯೆವುಂಗ್ ಶಿಂಗ್ರನ್ನು 21-18, 21-17 ಅಂತರದಿಂದ ಸೋಲಿಸಿ ಪ್ರಧಾನ ಸುತ್ತಿಗೆ ಪ್ರವೇಶಿಸಿದ್ದಾರೆ.
ಮುಂದಿನ ಸುತ್ತಿನಲ್ಲಿ ಸಹ ಆಟಗಾರರಾದ ಪೃಥ್ವಿ ಕೃಷ್ಣಮೂರ್ತಿ ರಾಯ್ ಹಾಗೂ ಸಾಯಿ ಪ್ರತೀಕ್ ರನ್ನು ಎದುರಿಸಲಿದ್ದಾರೆ.