ಸಾತ್ವಿಕ್- ಚಿರಾಗ್ ಜೋಡಿ ಮೊದಲ ಸುತ್ತಿನಲ್ಲೇ ಹೊರಗೆ
ಸಾತ್ವಿಕ್- ಚಿರಾಗ್
ಬೀಜಿಂಗ್ : ಕಾಮನ್ವೆಲ್ತ್ ಗೇಮ್ಸ್ ಪುರುಷರ ಡಬಲ್ಸ್ ಚಾಂಪಿಯನ್ಗಳಾದ ಸಾತ್ವಿಕ್ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಚೀನಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.
ಎರಡನೇ ವಿಶ್ವ ರ್ಯಾಂಕಿಂಗ್ನ ಭಾರತೀಯ ಜೋಡಿಯನ್ನು ಬುಧವಾರ 13ನೇ ರ್ಯಾಂಕಿಂಗ್ನ ಇಂಡೋನೇಶ್ಯದ ಮುಹಮ್ಮದ್ ಶೋಹಿಬುಲ್ ಫಿಕ್ರಿ ಮತ್ತು ಮೌಲಾನಾ ಬಗಸ್ 21-17, 11-21, 21-17 ಗೇಮ್ಗಳಿಂದ ಮಣಿಸಿದರು.
ಪಂದ್ಯವು ಒಂದು ಗಂಟೆ 8 ನಿಮಿಷಗಳಲ್ಲಿ ಮುಕ್ತಾಯಗೊಂಡಿತು. ಭಾರತೀಯ ಮಿಶ್ರ ಡಬಲ್ಸ್ ಜೋಡಿ ಸಿಕ್ಕಿ ರೆಡ್ಡಿ ಮತ್ತು ರೋಹನ್ ಕಪೂರ್ ಕೂಡ ಮೊದಲ ಸುತ್ತಿನಲ್ಲೇ ಪಂದ್ಯಾವಳಿಯಿಂದ ಹೊರಬಿದ್ದರು. ಅವರನ್ನು ಮಲೇಶ್ಯದ ಜೋಡಿ ಚೆನ್ ಟಾಂಗ್ ಜೈ ಮತ್ತು ಟೋಹ್ ಈ ವೇ 21-15, 21-16 ಗೇಮ್ಗಳಿಂದ ಸೋಲಿಸಿದರು.
ಈ ಸೋಲುಗಳೊಂದಿಗೆ, ಪಂದ್ಯಾವಳಿಯ ಭಾರತೀಯ ಸವಾಲು ಅಂತ್ಯಗೊಂಡಿದೆ. ಭಾರತದ ಯಾವುದೇ ಸ್ಪರ್ಧಿಗೆ ಎರಡನೇ ಸುತ್ತು ಪ್ರವೇಶಿಲು ಸಾಧ್ಯವಾಗಿಲ್ಲ.
ಮಂಗಳವಾರ, ವಿಶ್ವ ಚಾಂಪಿಯನ್ಶಿಪ್ ಕಂಚಿನ ಪದಕ ವಿಜೇತ ಎಚ್.ಎಸ್. ಪ್ರಣಯ್ ಪುರುಷರ ಸಿಂಗಲ್ಸ್ನಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು. ಅವರನ್ನು ಮಲೇಶ್ಯದ ಎಂಗ್ ಝೆ ಯೊಂಗ್ ಮೂರು ಗೇಮ್ಗಳಲ್ಲಿ ಸೋಲಿಸಿದ್ದರು.
ಹಾಲಿ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಲಕ್ಷ್ಯ ಸೇನ್ ಕೂಡ ಪುರುಷರ ಸಿಂಗಲ್ಸ್ನಲ್ಲಿ ಡೆನ್ಮಾರ್ಕ್ನ ಆ್ಯಂಡರ್ಸ್ ಆ್ಯಂಟನ್ಸೆನ್ ವಿರುದ್ಧ ಸೋತು ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.