ಹಾಂಕಾಂಗ್ ಓಪನ್ ಸೂಪರ್-500 ಬ್ಯಾಡ್ಮಿಂಟನ್ ಟೂರ್ನಿ | ಬೆಳ್ಳಿಗೆ ತೃಪ್ತಿಪಟ್ಟ ಸಾತ್ವಿಕ್-ಚಿರಾಗ್ ಶೆಟ್ಟಿ
ಸಾತ್ವಿಕ್ ಸಾಯಿರಾಜ್ | ಚಿರಾಗ್ ಶೆಟ್ಟಿ ( PC : X /BIA_media)
ಹಾಂಕಾಂಗ್, ಸೆ.14: ಭಾರತದ ಅಗ್ರಮಾನ್ಯ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಹಾಂಕಾಂಗ್ ಓಪನ್ ಸೂಪರ್-500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
ರವಿವಾರ 61 ನಿಮಿಷಗಳ ಕಾಲ ನಡೆದ ಪುರುಷರ ಡಬಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.9ನೇ ಜೋಡಿ ಸಾತ್ವಿಕ್-ಚಿರಾಗ್ ಚೀನಾದ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಆಟಗಾರರಾದ ಲಿಯಾಂಗ್ ವೀ ಕೆಂಗ್ ಹಾಗೂ ವಾಂಗ ಚಾಂಗ್ ವಿರುದ್ಧ 21-19, 14-21, 17-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.
ಈ ಸೋಲಿನ ಮೂಲಕ ಸೂಪರ್-500 ಟೂರ್ನಿಯ ಫೈನಲ್‌ನಲ್ಲಿ ಭಾರತದ ಅಜೇಯ ದಾಖಲೆಯು ಅಂತ್ಯಗೊಂಡಿದೆ. ಈ ಹಿಂದಿನ ಎಲ್ಲ 4 ಫೈನಲ್ ಪಂದ್ಯಗಳನ್ನು ಸಾತ್ವಿಕ್-ಚಿರಾಗ್ ಗೆದ್ದುಕೊಂಡಿದ್ದರು.
ಥಾಯ್ಲೆಂಡ್ ಓಪನ್ ನಂತರ ಮೊದಲ ಬಾರಿ ಸಾತ್ವಿಕ್-ಚಿರಾಗ್ ಫೈನಲ್‌ಗೆ ತಲುಪಿದ್ದಾರೆ. ಮೊದಲ ಗೇಮ್ ಅನ್ನು 21-19 ಅಂತರದಿಂದ ಗೆದ್ದುಕೊಂಡು ಉತ್ತಮ ಆರಂಭ ಪಡೆದಿದ್ದರೂ ನಿರ್ಣಾಯಕ ಹಂತದಲ್ಲಿ 11-2 ಮುನ್ನಡೆ ಬಿಟ್ಟುಕೊಟ್ಟು ಸಮಸ್ಯೆಗೆ ಸಿಲುಕಿದರು.
ಭಾರತೀಯರು ಲಿಯಾಂಗ್ ಹಾಗೂ ವಾಂಗ್ ವಿರುದ್ಧ 3-6 ಹೆಡ್-ಟು-ಹೆಡ್ ದಾಖಲೆಯೊಂದಿಗೆ ಈ ಸ್ಪರ್ಧೆಗೆ ಆಗಮಿಸಿದ್ದರು. ಕಳೆದ ತಿಂಗಳು ಪ್ಯಾರಿಸ್ ನಲ್ಲಿ ಲಿಯಾಂಗ್ ಹಾಗೂ ವಾಂಗ್‌ರನ್ನು ಸಾತ್ವಿಕ್-ಚಿರಾಗ್ ಸೋಲಿಸಿದ್ದರು. ಆದರೆ ಇಂದಿನ ಪಂದ್ಯದಲ್ಲಿ ಚೀನಾದ ಜೋಡಿಯನ್ನು ಮಣಿಸುವಲ್ಲಿ ವಿಫಲರಾದರು.
ರನ್ನರ್ ಅಪ್ ಎನಿಸಿಕೊಳ್ಳುವುದರೊಂದಿಗೆ ಸಾತ್ವಿಕ್ ಹಾಗೂ ಚಿರಾಗ್ ತಮ್ಮ ಅಭಿಯಾನವನ್ನು ಸಕಾರಾತ್ಮಕವಾಗಿ ಅಂತ್ಯಗೊಳಿಸಿದ್ದಾರೆ. ಈ ವರ್ಷ ಆರು ಬಾರಿ ಸೆಮಿ ಫೈನಲ್‌ಗೆ ತಲುಪಿ ಸ್ಥಿರ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ.
‘‘ಕಳೆದ ತಿಂಗಳು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಜಯಿಸಿದ ನಂತರ ಇದು ಉತ್ತಮ ವಾರವಾಗಿತ್ತು. ನಾವಿಲ್ಲಿ ಫೈನಲ್ ಪಂದ್ಯವನ್ನು ಆಡಿದ್ದೇವೆ. ನಾವು ಪ್ರಶಸ್ತಿಯನ್ನು ಗೆಲ್ಲಲು ಬಯಸಿದ್ದೆವು. ಆದರೆ ಎಲ್ಲ ಶ್ರೇಯಸ್ಸು ಚೀನಾದ ಆಟಗಾರರಿಗೆ ಸಲ್ಲುತ್ತದೆ. ಅವರು ಉತ್ತಮವಾಗಿ ಆಡಿದರು. ಒಟ್ಟಾರೆ ನಮ್ಮ ಪ್ರದರ್ಶನದಿಂದ ಸಂತೋಷವಾಗಿದೆ’’ ಎಂದು ಚಿರಾಗ್ ಶೆಟ್ಟಿ ಪಂದ್ಯದ ನಂತರ ಪ್ರತಿಕ್ರಿಯಿಸಿದರು.