Saudi Pro League | ಕ್ರಿಸ್ಟಿಯಾನೊ ರೊನಾಲ್ಡೊರ 957ನೇ ಗೋಲು ವ್ಯರ್ಥ; ಅಲ್-ಎತ್ತಿಫಾಕ್ ವಿರುದ್ಧ ಡ್ರಾ ಮಾಡಿಕೊಂಡ ಅಲ್-ನಸ್ರ್
10 ಪಂದ್ಯಗಳ ನಿರಂತರ ಗೆಲುವಿನ ಓಟ ಅಂತ್ಯ!
ಕ್ರಿಸ್ಟಿಯಾನೊ ರೊನಾಲ್ಡೊ | Photo Credit : PTI
ರಿಯಾದ್: ಸೌದಿ ಪ್ರೊ ಲೀಗ್ ನಲ್ಲಿ ಅಲ್-ನಸ್ರ್ ತನ್ನ ಗೆಲುವಿನ ಸರಣಿಗೆ ತಡೆ ಎದುರಿಸಿದೆ. ಅಲ್-ಎತ್ತಿಫಾಕ್ ವಿರುದ್ಧ ನಡೆದ ಪಂದ್ಯದಲ್ಲಿ 2–2 ಅಂತರದ ಡ್ರಾಗೆ ತೃಪ್ತಿಪಡಬೇಕಾಯಿತು. ಇದರೊಂದಿಗೆ ಲೀಗ್ ನಲ್ಲಿ ಅಲ್-ನಸ್ರ್ ಗಳಿಸಿದ್ದ 10 ಪಂದ್ಯಗಳ ನಿರಂತರ ಗೆಲುವಿನ ಓಟ ಅಂತ್ಯಗೊಂಡಿದೆ.
ಪಂದ್ಯದ ಆರಂಭಿಕ ಹಂತದಲ್ಲೇ ಅಲ್-ನಸ್ರ್ ರಕ್ಷಣಾ ವಿಭಾಗ ಸಂಕಷ್ಟಕ್ಕೆ ಸಿಲುಕಿತು. ಎಡಭಾಗದ ಡಿಫೆಂಡರ್ ಸಾದ್ ಫಹಾದ್ ವಿರುದ್ಧದ ಸವಾಲಿಗೆ ರೆಫರಿ ಆರಂಭದಲ್ಲಿ ರೆಡ್ ಕಾರ್ಡ್ ತೋರಿಸಿದರೂ, VAR(Video Assistant Referee) ಪರಿಶೀಲನೆಯ ಬಳಿಕ ನಿರ್ಧಾರ ಬದಲಾಗಿದ್ದು ಯೆಲ್ಲೋ ಕಾರ್ಡ್ ಗೆ ಸೀಮಿತವಾಯಿತು. ಇದರಿಂದ ಅಲ್-ನಸ್ರ್ ಸಂಪೂರ್ಣ ಪಂದ್ಯವನ್ನು 10 ಆಟಗಾರರೊಂದಿಗೆ ಆಡಬೇಕಾದ ಪರಿಸ್ಥಿತಿಯಿಂದ ತಪ್ಪಿಸಿಕೊಂಡಿತು.
ಆದರೂ ಮೊದಲ ಗೋಲು ಅಲ್-ಎತ್ತಿಫಾಕ್ ಪಾಲಾಯಿತು. ವೇಗದ ಪ್ರತಿದಾಳಿಯಲ್ಲಿ ಜಾರ್ಜಿನಿಯೊ ವಿಜ್ನಾಲ್ಡಮ್ ದೂರದಿಂದ ನಿಖರ ಶಾಟ್ ಮೂಲಕ ಗೋಲು ದಾಖಲಿಸಿದರು. ಹಿನ್ನಡೆಯಾದ ಬಳಿಕ ಅಲ್-ನಸ್ರ್ ಚೆಂಡಿನ ಮೇಲೆ ಹಿಡಿತ ಸಾಧಿಸಿದರೂ, ಮೊದಲಾರ್ಧದಲ್ಲಿ ಸಮಬಲ ಸಾಧಿಸಲು ವಿಫಲವಾಯಿತು.
ಎರಡನೇ ವಿರಾಮದ ತಕ್ಷಣವೇ ಅಲ್-ನಸ್ರ್ ಗೆ ಫಲ ಸಿಕ್ಕಿತು. ಜೋವೊ ಫೆಲಿಕ್ಸ್ ಅವರ ನಿಖರ ಶಾಟ್ ಮೂಲಕ ಸ್ಕೋರ್ 1–1 ಆಯಿತು. ಬಳಿಕ ಫೆಲಿಕ್ಸ್ ಅವರ ಪ್ರಯತ್ನ ಕ್ರಿಸ್ಟಿಯಾನೊ ರೊನಾಲ್ಡೊ ದೇಹಕ್ಕೆ ತಾಗಿ ಗೋಲ್ ಆಯಿತು. ಇದರಿಂದ ಅಲ್-ನಸ್ರ್ 2–1 ಮುನ್ನಡೆ ಸಾಧಿಸಿತು. ಈ ಗೋಲಿನೊಂದಿಗೆ ರೊನಾಲ್ಡೊ ತಮ್ಮ ವೃತ್ತಿಜೀವನದ ಒಟ್ಟು ಗೋಲುಗಳ ಸಂಖ್ಯೆಯನ್ನು 957ಕ್ಕೆ ಏರಿಸಿದರು.
ಆದರೆ ಅಲ್-ನಸ್ರ್ ಮುನ್ನಡೆ ಹೆಚ್ಚು ಕಾಲ ಉಳಿಯಲಿಲ್ಲ. ಅಲ್-ಎತ್ತಿಫಾಕ್ ಹಿಮ್ಮೆಟ್ಟದೆ ಮತ್ತೆ ದಾಳಿ ನಡೆಸಿ, ವಿಜ್ನಾಲ್ಡಮ್ ಸಮಯೋಚಿತ ಓಟದೊಂದಿಗೆ ಎರಡನೇ ಗೋಲು ದಾಖಲಿಸಿ ಸಮಬಲ ಸಾಧಿಸಿದರು. ಅಂತಿಮವಾಗಿ ಪಂದ್ಯ 2–2 ಡ್ರಾದಲ್ಲಿ ಮುಕ್ತಾಯವಾಯಿತು.
ಪಂದ್ಯಾನಂತರ ಪ್ರತಿಕ್ರಿಯಿಸಿದ ರೊನಾಲ್ಡೊ, “ನಾವು ಸರಿಯಾದ ಹಾದಿಯಲ್ಲಿದ್ದೇವೆ. ಮುಂದಿನ ದಿನಗಳಲ್ಲಿ ಏನು ಮಾಡಬೇಕೆಂದು ನಮಗೆ ತಿಳಿದಿದೆ,” ಎಂದು ಹೇಳಿದರು. ಸೌದಿ ಪ್ರೊ ಲೀಗ್ ಪ್ರಶಸ್ತಿಯತ್ತ ಅಲ್-ನಸ್ರ್ ತನ್ನ ಪೈಪೋಟಿಯನ್ನು ಮುಂದುವರಿಸಿದೆ.