×
Ad

ದ್ವಿತೀಯ ಟೆಸ್ಟ್: ವಿಂಡೀಸ್ ವಿರುದ್ಧ ಆಸ್ಟ್ರೇಲಿಯ 286 ರನ್‌ ಗೆ ಆಲೌಟ್

Update: 2025-07-04 20:40 IST

PC :  X 

ಸೈಂಟ್ ಜಾರ್ಜ್: ವೇಗದ ಬೌಲರ್ ಅಲ್ಝಾರಿ ಜೋಸೆಫ್(4-61) ನೇತೃತ್ವದ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡದ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯ ತಂಡವು ದ್ವಿತೀಯ ಟೆಸ್ಟ್ ಪಂದ್ಯದ ತನ್ನ ಮೊದಲ ಇನಿಂಗ್ಸ್‌ನಲ್ಲಿ 66.5 ಓವರ್‌ಗಳಲ್ಲಿ 286 ರನ್ ಗಳಿಸಿ ಸರ್ವಪತನಗೊಂಡಿತು.

ಮೊದಲ ದಿನದಾಟವಾದ ಗುರುವಾರ ಟಾಸ್ ಜಯಿಸಿದ ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆಸ್ಟ್ರೇಲಿಯ ತಂಡ ಮತ್ತೊಮ್ಮೆ ಅಗ್ರ ಸರದಿಯ ಕುಸಿತಕ್ಕೆ ಒಳಗಾಯಿತು. ಆಗ ನಾಯಕನ ನಿರ್ಧಾರವನ್ನು ವಿಕೆಟ್‌ಕೀಪರ್ ಅಲೆಕ್ಸ್ ಕ್ಯಾರಿ(63 ರನ್, 81 ಎಸೆತ, 10 ಬೌಂಡರಿ, 1 ಸಿಕ್ಸರ್)ಹಾಗೂ ಬೀಯು ವೆಬ್‌ಸ್ಟರ್(60 ರನ್, 115 ಎಸೆತ, 6 ಬೌಂಡರಿ, 1 ಸಿಕ್ಸರ್)ಸಮರ್ಥಿಸಿಕೊಂಡರೆ, ಉಳಿದವರು ಕೈಚೆಲ್ಲಿದರು.

ಇನಿಂಗ್ಸ್ ಆರಂಭಿಸಿದ ಉಸ್ಮಾನ್ ಖ್ವಾಜಾ(16 ರನ್)ಹಾಗೂ ಸ್ಯಾಮ್ ಕಾನ್‌ಸ್ಟಾಸ್ ಮೊದಲ ವಿಕೆಟ್‌ಗೆ 47 ರನ್ ಸೇರಿಸಿ ಸಾಧಾರಣ ಆರಂಭ ಒದಗಿಸಿದರು. 2 ರನ್ ಗಳಿಸಿದ ತಕ್ಷಣ ಖ್ವಾಜಾ 6,000 ಟೆಸ್ಟ್ ರನ್ ಪೂರೈಸಿದರು. ಆದರೆ ಖ್ವಾಜಾ ಹಾಗೂ ಕಾನ್‌ಸ್ಟಾಸ್ ಬೆನ್ನುಬೆನ್ನಿಗೆ ಔಟಾದರು. ಸರಣಿಯಲ್ಲಿ ಸತತ 2ನೇ ಬಾರಿ ಖ್ವಾಜಾ ಅವರು ಅಲ್ಝಾರಿಗೆ ವಿಕೆಟ್ ಒಪ್ಪಿಸಿದರು. ಹಿರಿಯ ಬ್ಯಾಟರ್ ಸ್ಟೀವನ್ ಸ್ಮಿತ್(3 ರನ್)ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆಗ ಆಸ್ಟ್ರೇಲಿಯ ತಂಡ 50 ರನ್‌ಗೆ 3ನೇ ವಿಕೆಟ್ ಕಳೆದುಕೊಂಡಿತು.

4ನೇ ವಿಕೆಟ್‌ಗೆ 43 ರನ್ ಸೇರಿಸಿದ ಕ್ಯಾಮರೂನ್ ಗ್ರೀನ್(26 ರನ್, 37 ಎಸೆತ)ಹಾಗೂ ಟ್ರಾವಿಸ್ ಹೆಡ್(29 ರನ್, 43 ಎಸೆತ)ಇನಿಂಗ್ಸ್ ರಿಪೇರಿಗೆ ಯತ್ನಿಸಿದರು. ಆದರೆ ಗ್ರೀನ್ ಹಾಗೂ ಹೆಡ್ ಕೆಲವೇ ಓವರ್‌ ಗಳ ಅಂತರದಲ್ಲಿ ಪೆವಿಲಿಯನ್‌ಗೆ ವಾಪಸಾದರು.

6ನೇ ವಿಕೆಟ್‌ಗೆ 112 ರನ್ ಜೊತೆಯಾಟ ನಡೆಸಿದ ಅಲೆಕ್ಸ್ ಕ್ಯಾರಿ ಹಾಗೂ ವೆಬ್‌ಸ್ಟರ್ ಅವರು ಆಸ್ಟ್ರೇಲಿಯಕ್ಕೆ ಆಸರೆಯಾದರು. ಈ ಮೂಲಕ ತಂಡದ ಸ್ಕೋರನ್ನು 200ರ ಗಡಿ ದಾಟಿಸಿದರು. ಕ್ಯಾರಿ ವಿಕೆಟನ್ನು ಪಡೆದ ಲೀವ್ಸ್ ಈ ಜೋಡಿಯನ್ನು ಬೇರ್ಪಡಿಸಿ ವಿಂಡೀಸ್‌ಗೆ ಮೇಲುಗೈ ಒದಗಿಸಿದರು.

10 , 46 ಹಾಗೂ 51 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದ ಕ್ಯಾರಿ 68 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 55 ರನ್ ಗಳಿಸಿದ್ದಾಗ ಮತ್ತೊಮ್ಮೆ ಜೀವದಾನ ಪಡೆದಿದ್ದ ಕ್ಯಾರಿ , ಆಸ್ಟ್ರೇಲಿಯದ ಪರ ಸರ್ವಾಧಿಕ ಸ್ಕೋರ್ ಗಳಿಸಿದರು.

ಪದೇ ಪದೇ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿದ್ದು, ಆಸ್ಟ್ರೇಲಿಯ ತಂಡ 67ನೇ ಓವರ್‌ ನಲ್ಲಿ ಆಲೌಟಾದ ನಂತರ ವಿಂಡೀಸ್ ತನ್ನ ಮೊದಲ ಇನಿಂಗ್ಸ್ ಆರಂಭಿಸಲು ಸಾಧ್ಯವಾಗಲಿಲ್ಲ.

ವೆಸ್ಟ್‌ಇಂಡೀಸ್ ಪರ ಅಲ್ಝಾರಿ ಜೋಸೆಫ್ ಯಶಸ್ವಿ ಪ್ರದರ್ಶನ ನೀಡಿದರೆ, ಜೇಡನ್ ಸೀಲ್ಸ್(2-45), ಜಸ್ಟಿನ್ ಗ್ರೀವ್ಸ್(1-35), ಆ್ಯಂಡರ್ಸನ್ ಫಿಲಿಪ್(1-46) ಹಾಗೂ ಜೋಸೆಫ್ (1-63) ಉಳಿದ 5 ವಿಕೆಟ್‌ಗಳನ್ನು ಕಬಳಿಸಿದರು. ವೆಬ್‌ಸ್ಟರ್ ಅವರು 60 ರನ್ ಗಳಿಸಿದ್ದಾಗ ರನೌಟಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News