ದ್ವಿತೀಯ ಟೆಸ್ಟ್: ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ
PC : BCCI
ಬರ್ಮಿಂಗ್‌ಹ್ಯಾಮ್: ಭಾರತೀಯ ಕ್ರಿಕೆಟ್ ತಂಡವು ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ಶುಕ್ರವಾರ ತನ್ನ ಮೊದಲ ನೆಟ್ ಪ್ರಾಕ್ಟೀಸ್ ನಡೆಸುವ ಮೂಲಕ ಇಂಗ್ಲೆಂಡ್ ತಂಡದ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ತಯಾರಿಯನ್ನು ಆರಂಭಿಸಿದೆ.
ಹೆಡ್ಡಿಂಗ್ಲೆಯಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್‌ಗಳ ಅಂತರದಿಂದ ಸೋತ ನಂತರ ಭಾರತದ ಕ್ರಿಕೆಟ್ ಆಟಗಾರರು ಮೊದಲ ಬಾರಿ ಪ್ರಾಕ್ಟೀಸ್ ನಡೆಸಿದರು. ಮೊದಲ ಪಂದ್ಯವನ್ನು ಗೆದ್ದಿರುವ ಇಂಗ್ಲೆಂಡ್ ತಂಡವು ಐದು ಪಂದ್ಯಗಳ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಗಾಗಿ ನಡೆಯುತ್ತಿರುವ ಟೂರ್ನಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಸಹಿತ ತಂಡದ ಎಲ್ಲ ಸದಸ್ಯರುಗಳು ಮೈದಾನದಲ್ಲಿ ಹಾಜರಿದ್ದರು. ಆದರೆ ಬುಮ್ರಾ ಅವರು ಮೈದಾನದೊಳಗಿನ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸಿಲ್ಲ. ಪ್ರಸಿದ್ಧ ಕೃಷ್ಣ ಅವರು ಬೌಲಿಂಗ್ ಹಾಗೂ ಡ್ರಿಲ್ಸ್‌ನಲ್ಲಿ ಭಾಗವಹಿಸಿರುವುದು ಕಂಡು ಬಂದಿದೆ. ಉಳಿದ ಆಟಗಾರರು ತರಬೇತಿಯಲ್ಲಿ ಭಾಗವಹಿಸಿದ್ದಾರೆ.
ಮುಹಮ್ಮದ್ ಸಿರಾಜ್ ತನ್ನ ಬ್ಯಾಟಿಂಗ್‌ನತ್ತ ಕೆಲಸ ಮಾಡಲು ಹೆಚ್ಚು ಸಮಯ ವ್ಯಯಿಸಿದ್ದಾರೆ. ಕೋಚ್ ಗೌತಮ್ ಗಂಭೀರ್ ಅವರು ವೇಗಿಗಳಾದ ಅರ್ಷದೀಪ್ ಸಿಂಗ್ ಹಾಗೂ ಆಕಾಶ್ ದೀಪ್ ಅವರೊಂದಿಗೆ ಹೆಚ್ಚು ಸಂವಾದ ನಡೆಸಿದರು.
ಶುಭಮನ್ ಗಿಲ್ ಹಾಗೂ ರಿಷಭ್ ಪಂತ್ ಅವರು ನೆಟ್‌ನಲ್ಲಿ ಹೆಚ್ಚು ಬ್ಯಾಟಿಂಗ್ ನಡೆಸಿದರು. ಬುಮ್ರಾ ಹಾಗೂ ಪ್ರಸಿದ್ಧ್ ಹೊರತುಪಡಿಸಿ ಉಳಿದ ಬೌಲರ್‌ಗಳು ಬೌಲಿಂಗ್ ಅಭ್ಯಾಸದತ್ತ ಅಧಿಕ ಸಮಯ ಕಳೆದರು.
ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಸೋತಿರುವ ರೀತಿಯ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದರೂ ಭಾರತೀಯ ಕ್ರಿಕೆಟ್ ಪಾಳಯವು ನಿರಾಳವಾಗಿದ್ದಂತೆ ಕಂಡುಬಂದಿದೆ.
ಭಾರತ ತಂಡ ಈಗ ಪರಿವರ್ತನೆಯ ಘಟ್ಟದಲ್ಲಿದ್ದು ಸೀನಿಯರ್ ಆಟಗಾರರು ಟೀಮ್ ಲೀಡರ್‌ಶಿಪ್ ಹಾಗೂ ಯುವ ಆಟಗಾರರಿಗೆ ತಮ್ಮ ಬೆಂಬಲ ಮುಂದುವರಿಸಿದ್ದಾರೆ.
ಆದರೆ ಎಲ್ಲರ ಕಣ್ಣುಗಳು ಬುಮ್ರಾ ಮೇಲೆ ನೆಟ್ಟಿದೆ. ಹಿರಿಯ ವೇಗದ ಬೌಲರ್ ಮೊದಲ ಟೆಸ್ಟ್ ಪಂದ್ಯದಲ್ಲಿ 44 ಓವರ್ ಬೌಲಿಂಗ್ ಮಾಡಿದ್ದರು. ತನ್ನ ಕೆಲಸದ ಒತ್ತಡವನ್ನು ನಿಭಾಯಿಸಲು ಪ್ರಸಕ್ತ ಸರಣಿಯಲ್ಲಿ ಕೇವಲ 3 ಪಂದ್ಯಗಳಲ್ಲಿ ಆಡುವ ನಿರೀಕ್ಷೆ ಇದೆ.
ಎಜ್‌ಬಾಸ್ಟನ್‌ನಲ್ಲಿ ನಡೆಯಲಿರುವ 2ನೇ ಟೆಸ್ಟ್(ಜುಲೈ 2-6)ಹಾಗೂ ಲಾರ್ಡ್ಸ್(ಜುಲೈ 10-14)ನಲ್ಲಿ ನಡೆಯಲಿರುವ 3ನೇ ಟೆಸ್ಟ್ ಪಂದ್ಯದ ನಡುವೆ ಕೇವಲ 4 ದಿನಗಳ ಅಂತರವಿದೆ. ಹೀಗಾಗಿ ಬರ್ಮಿಂಗ್‌ಹ್ಯಾಮ್‌ನಲ್ಲಿ ಬುಮ್ರಾ ಅವರು ವಿಶ್ರಾಂತಿ ಪಡೆಯಬಹುದು. ಗಂಭೀರ್ ಹಾಗೂ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್‌ಗೆ ಕೆಲಸದ ಒತ್ತಡವನ್ನು ನಿಭಾಯಿಸುವ ಅಗತ್ಯವಿದೆ.
‘‘ಸರಣಿಯ ಪರಿಸ್ಥಿತಿ ಏನೇ ಇರಲಿ, ಬುಮ್ರಾ ಅವರ ಲಭ್ಯತೆಯನ್ನು ದೀರ್ಘಾವಧಿಯ ದೃಷ್ಟಿಕೋನದಿಂದ ನಿರ್ಧರಿಸಲಾಗುತ್ತದೆ’’ಎಂದು ಮೊದಲ ಟೆಸ್ಟ್ ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಗಂಭೀರ್ ಹೇಳಿದ್ದಾರೆ.