ಮಹಿಳೆಯರ ಐಸಿಸಿ ಟಿ20 ರ‍್ಯಾಂಕಿಂಗ್; ಅಗ್ರ-10ರಲ್ಲಿ ಸ್ಥಾನ ಪಡೆದ ಶೆಫಾಲಿ ವರ್ಮಾ
ಶೆಫಾಲಿ ವರ್ಮಾ | PC : @TheShafaliVerma
ಹೊಸದಿಲ್ಲಿ: ಭಾರತದ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಮಂಗಳವಾರ ಬಿಡುಗಡೆಯಾಗಿರುವ ಮಹಿಳೆಯರ ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ಟಾಪ್-10 ಬ್ಯಾಟರ್ ಗಳ ಪಟ್ಟಿಗೆ ಮರಳಿದ್ದಾರೆ.
ಇಂಗ್ಲೆಂಡ್ ತಂಡದ ವಿರುದ್ಧದ 5 ಪಂದ್ಯಗಳ ಟ್ವೆಂಟಿ20 ಸರಣಿಯಲ್ಲಿ ಶೆಫಾಲಿ ಅವರು 158.56ರ ಸ್ಟ್ರೈಕ್ ರೇಟ್ ನಲ್ಲಿ ಒಟ್ಟು 176 ರನ್ ಗಳಿಸಿದ್ದರು. ಸಹ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ ನಂತರ 2ನೇ ಗರಿಷ್ಠ ರನ್ ಸ್ಕೋರರ್ ಆಗಿದ್ದರು.
ಬ್ಯಾಟಿಂಗ್ ಆರಂಭಿಸುತ್ತಿರುವ 21ರ ಹರೆಯದ ಶೆಫಾಲಿ ಅವರು ಭಾರತ ಕೊನೆಯ ಎಸೆತದಲ್ಲಿ ಸೋತ ಪಂದ್ಯದಲ್ಲಿ ಅಗ್ರ ಸ್ಕೋರರ್(75 ರನ್)ಆಗಿದ್ದರು. ಇದೀಗ ಅವರು 655 ಅಂಕದೊಂದಿಗೆ 4 ಸ್ಥಾನ ಭಡ್ತಿ ಪಡೆದು 9ನೇ ಸ್ಥಾನ ಪಡೆದರು.
ಭಾರತೀಯ ತಂಡವು ಸರಣಿಯನ್ನು 3-2 ಅಂತರದಿಂದ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಇನ್ನೋರ್ವ ಆಟಗಾರ್ತಿ ಅರುಂಧತಿ ರೆಡ್ಡಿ ಆರು ವಿಕೆಟ್ ಗಳನ್ನು ಪಡೆದಿದ್ದು, ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ 4 ಸ್ಥಾನ ಭಡ್ತಿ ಪಡೆದು 39ನೇ ರ‍್ಯಾಂಕಿಗೆ ತಲುಪಿದ್ದಾರೆ. ಆಲ್‌ರೌಂಡರ್ ಗಳ ರ‍್ಯಾಂಕಿಂಗ್‌ನಲ್ಲಿ 26 ಸ್ಥಾನಗಳನ್ನು ಪಡೆದು 80ನೇ ರ‍್ಯಾಂಕಿನಲ್ಲಿದ್ದಾರೆ.
ಭಾರತದ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ 23 ರನ್ ಗೆ 3 ವಿಕೆಟ್ ಗಳನ್ನು ಪಡೆದಿದ್ದ ಇಂಗ್ಲೆಂಡ್ ಸ್ಪಿನ್ನರ್ ಚಾರ್ಲಿ ಡೀನ್ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ. 8 ಸ್ಥಾನ ಮೇಲಕ್ಕೇರಿ ನಶ್ರಾ ಸಂಧು ಹಾಗೂ ಜಾರ್ಜಿಯಾ ವರೇಹ್ಯಾಮ್‌ರೊಂದಿಗೆ 6ನೇ ಸ್ಥಾನ ಹಂಚಿಕೊಂಡಿದ್ದಾರೆ.
ಒಟ್ಟು 151 ರನ್ ಗಳಿಸಿ ಇಂಗ್ಲೆಂಡ್ ನ ಟಾಪ್ ಸ್ಕೋರರ್ ಎನಿಸಿಕೊಂಡಿದ್ದ ಸೋಫಿಯಾ ಡಂಕ್ಲೆ 9 ಅಂಕ ಗಳಿಸಿ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ 19ನೇ ಸ್ಥಾನಕ್ಕೇರಿದ್ದಾರೆ.