×
Ad

ಶ್ರೀಲಂಕಾ ಗೆಲುವಿಗೆ 358 ರನ್ ಗಳ ಬೃಹತ್ ಗುರಿ ನೀಡಿದ ಭಾರತ

Update: 2023-11-02 18:10 IST

Photo: cricketworldcup.com

ಮುಂಬೈ: ಇಲ್ಲಿನ ವಾಂಖೇಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ ಗೆಲುವಿಗೆ ಭಾರತ 358 ರನ್ ಗಳ ಬೃಹತ್ ಗುರಿ ನೀಡಿದೆ.

ಶುಬ್ ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಭರ್ಜರಿ ಜೊತೆಯಾಟ ಹಾಗೂ ಶ್ರೇಯಸ್ ಐಯ್ಯರ್ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್ ಗಲ್ಲಿ ಭಾರತ ತಂಡ 357 ರನ್ ಪೇರಿಸಿತು. ಲಂಕಾ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ದಿಲ್ಶನ್ ಮಧುಶಂಕ 5 ವಿಕೆಟ್ ಪಡೆದು ಮಿಂಚಿದರು.

ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಬೌಲಿಂಗ್ ಆಯ್ದುಕೊಂಡು ಭಾರತಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿತು. ಇತ್ತ ಬ್ಯಾಟಿಂಗ್ ಗೆ ಇಳಿದ ಭಾರತಕ್ಕೆ ಲಂಕಾದ ದಿಲ್ಶನ್ ಮಧುಶಂಕ ಆರಂಭಿಕ ಆಘಾತ ನೀಡಿದರು, ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ನಾಯಕ ರೋಹಿತ ಶರ್ಮಾ ಕೇವಲ 4 ರನ್ ಗೆ ಬೌಲ್ಡ್ ಆದರು. ರೋಹಿತ್ ವಿಕೆಟ್ ಪತನದ ಬಳಿಕ ಒಂದಾದ ಶುಬ್ ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಜೋಡಿ ಲಂಕಾ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು. 179 ರನ್ ಗಳ ಭರ್ಜರಿ ಜೊತೆಯಾಟ ನಿರ್ವಹಿಸಿದ್ದ ಈ ಜೋಡಿ ಪರಸ್ಪರ ಶತಕ ಸಿಡಿಸುವ ಅಂಚಿನಲ್ಲಿ ಎಡವಿದರು. ಲಂಕಾ ವಿರುದ್ಧ ಶುಬ್ ಮನ್ ಗಿಲ್ 11 ಬೌಂಡರಿ 2 ಸಿಕ್ಸರ್ ಸಹಿತ 92 ರನ್ ಬಾರಿಸಿದರೆ ವಿರಾಟ್ ಕೊಹ್ಲಿ 11 ಬೌಂಡರಿ ಸಹಾಯದಿಂದ 88 ರನ್ ಗಳಿಸಿ ಕ್ರಮವಾಗಿ ಇಬ್ಬರೂ ಬ್ಯಾಟರ್ ಗಳು ಮದುಶಂಕ ಬೌಲಿಂಗ್ ನಲ್ಲಿ ಪೆವಿಲಿಯನ್ ಸೇರಿಕೊಂಡರು. ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ದಾಖಲೆಯ ಶತಕಕ್ಕೆ ಕಾದಿದ್ದ ಅಭಿಮಾನಿಗಳು , ಶತಕದಂಚಿನಲ್ಲಿ ಎಡವಿದ ವಿರಾಟ್ ವಿಕೆಟ್ ಪತನ ಸ್ಟೇಡಿಯಂನಲ್ಲಿ ನೆರದಿದ್ದ ಅಭಿಮಾನಿಗಳನ್ನು ತೀವ್ರ ನಿರಾಸೆ ಗೊಳಿಸಿತು. ಕೊಹ್ಲಿ- ಗಿಲ್ ಜೋಡಿ ವಿಕೆಟ್ ಪತನದ ಬಳಿಕ ಭಾರತದ ಪರ ದೊಡ್ಡ ಜೊತೆಯಾಟ ಸೃಷ್ಟಿ ಆಗಲಿಲ್ಲ. ಕೆಎಲ್ ರಾಹುಲ್ 21 ರನ್ ಗೆ ಚಮೀರ ಗೆ ವಿಕೆಟ್ ನೀಡಿದರೆ ಸೂರ್ಯಕುಮಾರ್ ಯಾದವ್ 12 ರನ್ ಗೆ ಮದುಶಂಕಗೆ ವಿಕೆಟ್ ಒಪ್ಪಿಸಿದರು. ಮಧ್ಯಮ ಓವರ್ ನಲ್ಲಿ ತಂಡದ ಪರ ಏಕಾಂಗಿ ಭರ್ಜರಿ ಬ್ಯಾಟಿಂಗ್ ಪದರ್ಶಿಸಿದ ಶ್ರೇಯಸ್ ಐಯ್ಯರ್ 3 ಬೌಂಡರಿ 6 ಸಿಕ್ಸರ್ ಸಹಿತ 88 ರನ್ ಬಾರಿಸಿದರು. ಕೊನೆಯಲ್ಲಿ ಸ್ಟೋಟಕ ಆಟವಾಡಿದ ರವೀಂದ್ರ ಜಡೇಜ 34 ರನ್ ಪೇರಿಸಿ ತಂಡ ಮುನ್ನೂರ ಐವತ್ತು ದಾಟುವಂತೆ ಮಾಡಿದರು. ಮುಹಮ್ಮದ್ ಶಮಿ 2 , ಬುಮ್ರಾ 1 ರನ್ ಸೇರಿಸಿದರು.

ಭಾರತದ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ದಿಲ್ಶನ್ ಮಧುಶಂಕ 5 ವಿಕೆಟ್ ಕಬಳಿಸಿ ಭಾರತ ಕಟ್ಟಿ ಹಾಕುವ ಪ್ರಯತ್ನ ಮಾಡಿದರೆ. ಗಾಯದ ಕಾರಣ ತಂಡದಿಂದ ಹೊರಗಿಳಿದಿದ್ದ ದುಶ್ಮಂತ ಚಮೀರ ಒಂದು ವಿಕೆಟ್ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News