ಆರೋಗ್ಯ ಸ್ಥಿತಿಯ ಕುರಿತು ಮಾಹಿತಿ ಹಂಚಿಕೊಂಡ ಶ್ರೇಯಸ್ ಅಯ್ಯರ್
Photo credit: PTI
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯ ತಂಡದ ನಡುವಿನ ಮೂರನೆ ಮತ್ತು ಅಂತಿಮ ಏಕದಿನ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಗಾಯಗೊಂಡು, ಆಂತರಿಕ ರಕ್ತಸ್ರಾವಕ್ಕೀಡಾಗಿ ಸಿಡ್ನಿಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ಭಾರತ ತಂಡದ ಆಟಗಾರ ಶ್ರೇಯಸ್ ಅಯ್ಯರ್, “ನಾನು ಪ್ರಸ್ತುತ ಚೇತರಿಕೆಯ ಪ್ರಕ್ರಿಯೆಯಲ್ಲಿದ್ದೇನೆ” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ತಮ್ಮ ಆರೋಗ್ಯ ಸ್ಥಿತಿಯ ಕುರಿತು ಮಾಹಿತಿ ಹಂಚಿಕೊಂಡಿರುವ ಶ್ರೇಯಸ್ ಅಯ್ಯರ್, “ನಾನು ಪ್ರಸ್ತುತ ಚೇತರಿಕೆಯ ಹಾದಿಯಲ್ಲಿದ್ದೇನೆ. ದಿನಗಳೆದಂತೆ ಸುಧಾರಿಸಿಕೊಳ್ಳುತ್ತಿದ್ದೇನೆ. ನನಗೆ ಶುಭಾಶಯ ಕೋರಿದವರಿಗೆ ಮತ್ತು ಬೆಂಬಲ ನೀಡಿದವರಿಗೆ ನಾನು ತುಂಬಾ ಆಭಾರಿಯಾಗಿದ್ದೇನೆ.” ಎಂದು ತಮ್ಮ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಶನಿವಾರ ನಡೆದ ಮೂರನೆಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯ ಬ್ಯಾಟರ್ ಅಲೆಕ್ಸ್ ಕ್ಯಾರಿ ಹೊಡೆದ ಚೆಂಡನ್ನು ಕ್ಯಾಚ್ ಹಿಡಿಯುವ ಪ್ರಯತ್ನದಲ್ಲಿ ಶ್ರೇಯಸ್ ಅಯ್ಯರ್ ಗಾಯಗೊಂಡಿದ್ದರು. ಬ್ಯಾಕ್ ವರ್ಡ್ ಪಾಯಿಂಟ್ ನಲ್ಲಿ ಅವರು ಅದ್ಭುತ ಕ್ಯಾಚ್ ಹಿಡಿದರಾದರೂ, ಪಕ್ಕೆಲುಬು ಗಾಯಕ್ಕೆ ಒಳಗಾಗಿದ್ದರು. ಬಳಿಕ ಅವರನ್ನು ಸಿಡ್ನಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಗಿತ್ತು.