ಭಾರತ ಕ್ರಿಕೆಟ್ ತಂಡದ ನಾಯಕನಾಗಿ ವಿದೇಶಿ ಟೆಸ್ಟ್ ಸರಣಿಯಲ್ಲಿ 300ಕ್ಕೂ ಅಧಿಕ ರನ್ ಐತಿಹಾಸಿಕ ಸಾಧನೆ ಮಾಡಿದ ಶುಭಮನ್ ಗಿಲ್
ಶುಭಮನ್ ಗಿಲ್ | PC : X
ಬರ್ಮಿಂಗ್ ಹ್ಯಾಮ್: ಭಾರತ ಕ್ರಿಕೆಟ್ ತಂಡದ ನಾಯಕನಾದ ನಂತರ ಶುಭಮನ್ ಗಿಲ್ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ್ದು, ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್ ಪಂದ್ಯದ ವೇಳೆ ತನ್ನ 7ನೇ ಶತಕ ಸಿಡಿಸಿ ತಂಡವನ್ನು ಸುಸ್ಥಿತಿಗೆ ತಲುಪಿದರು.
ಭಾರತ ತಂಡವು ಮಧ್ಯಮ ಸರದಿಯಲ್ಲಿ ಕುಸಿತ ಕಂಡಾಗ ಗಿಲ್ ಅವರು ಆಕರ್ಷಕ ಶತಕ ಗಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಸತತ 2ನೇ ಪಂದ್ಯದಲ್ಲಿ ಶತಕ ಗಳಿಸಿ ಮಿಂಚಿದ್ದಾರೆ. ರವೀಂದ್ರ ಜಡೇಜ ಜೊತೆಗೂಡಿ 5ನೇ ವಿಕೆಟ್ ನಲ್ಲಿ ದ್ವಿಶತಕದ ಜೊತೆಯಾಟ ನಡೆಸಿದ್ದಾರೆ. ಈ ವೇಳೆ ಗಿಲ್ ಅವರು ಇತಿಹಾಸದ ಪುಸ್ತಕದಲ್ಲಿ ತನ್ನ ಹೆಸರು ಅಚ್ಚೊತ್ತಿದ್ದಾರೆ.
ಕೇವಲ 25ನೇ ವಯಸ್ಸಿನಲ್ಲಿ ವಿದೇಶಿ ಟೆಸ್ಟ್ ಸರಣಿಯಲ್ಲಿ 300ಕ್ಕೂ ಅಧಿಕ ರನ್ ಗಳಿಸಿದ ಭಾರತ ತಂಡದ ಮೊದಲ ನಾಯಕನಾಗಿ ಹೊರಹೊಮ್ಮಿದ್ದಾರೆ. ಈ ಇನಿಂಗ್ಸ್‌ನ ಮೂಲಕ ಎಲೈಟ್ ಕ್ಲಬ್ ನಲ್ಲಿ ಸ್ಥಾನ ಪಡೆದಿದ್ದಾರೆ. 26ನೇ ವಯಸ್ಸಿಗೆ ಕಾಲಿಡುವ ಮೊದಲು ಟೆಸ್ಟ್ ಕ್ರಿಕೆಟ್ ನಲ್ಲಿ 150ಕ್ಕೂ ಅಧಿಕ ರನ್ ಗಳಿಸಿ ಭಾರತದ 3ನೇ ನಾಯಕನಾಗಿದ್ದಾರೆ. ಇದರೊಂದಿಗೆ ಎಂಎಕೆ ಪಟೌಡಿ(2 ಬಾರಿ 150 ರನ್)ಹಾಗೂ ಸಚಿನ್ ತೆಂಡುಲ್ಕರ್ ಅವರಿದ್ದ ವಿಶೇಷ ಕ್ಲಬ್‌ಗೆ ಸೇರಿದ್ದಾರೆ.