ಒಂದೇ ಟೆಸ್ಟ್ ಸರಣಿಯಲ್ಲಿ ಗರಿಷ್ಠ ರನ್ ಗಳಿಸಿದ ಭಾರತದ ನಾಯಕ ಶುಭಮನ್ ಗಿಲ್
ಶುಭಮನ್ ಗಿಲ್ | PTI
ಲಂಡನ್, ಜು.31: ಭಾರತ ಕ್ರಿಕೆಟ್ ತಂಡದ ನಾಯಕನಾಗಿ ಇಂಗ್ಲೆಂಡ್ ತಂಡದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಮಿಂಚಿರುವ ಶುಭಮನ್ ಗಿಲ್ ಬ್ಯಾಟಿಂಗ್ ನಲ್ಲೂ ತನ್ನ ಪರಾಕ್ರಮ ಮೆರೆದಿದ್ದಾರೆ. 47 ವರ್ಷಗಳ ಹಳೆಯ ದಾಖಲೆಯೊಂದನ್ನು ಮುರಿದು ದಾಖಲೆಯ ಪುಸ್ತಕದಲ್ಲಿ ತನ್ನ ಹೆಸರು ಅಚ್ಚೊತ್ತಿದ್ದಾರೆ.
ಸರಣಿಯಲ್ಲಿ 1-2 ಹಿನ್ನಡೆಯೊಂದಿಗೆ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವನ್ನಾಡಲು ಭಾರತ ತಂಡವು ದ ಓವಲ್ ಗೆ ಆಗಮಿಸಿದೆ. ಸರಣಿ ಡ್ರಾಗೊಳಿಸಲು ಈ ಪಂದ್ಯವನ್ನು ಗೆಲ್ಲುವ ಅಗತ್ಯವಿದೆ. ಆದರೆ ತಂಡವು ಸವಾಲಿನ ಪರಿಸ್ಥಿತಿಯಲ್ಲಿದೆ. ಸರಣಿಯುದ್ದಕ್ಕೂ ಗಿಲ್ ಅವರ ವೈಯಕ್ತಿಕ ಫಾರ್ಮ್ ಅಮೋಘವಾಗಿದೆ. ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸುತ್ತಿರುವ ಗಿಲ್ ಅವರು ಸರಣಿಯಲ್ಲಿ ಈ ತನಕ 737 ರನ್ ಗಳಿಸಿದ್ದಾರೆ. ಒಂದೇ ಟೆಸ್ಟ್ ಸರಣಿಯಲ್ಲಿ ಗರಿಷ್ಠ ರನ್ ಗಳಿಸಿದ ಭಾರತೀಯ ನಾಯಕನೆಂಬ ಕೀರ್ತಿಗೆ ಭಾಜನರಾದರು. ಕ್ರಿಕೆಟ್ ದಂತಕತೆ ಸುನೀಲ್ ಗವಾಸ್ಕರ್ ದಾಖಲೆಯನ್ನು ಪತನಗೊಳಿಸಿದರು.
ಈ ಹಿಂದೆ ಲೆಜೆಂಡರಿ ಸುನೀಲ್ ಗವಾಸ್ಕರ್ ಅವರು 1978-79ರ ಟೆಸ್ಟ್ ಸರಣಿಯಲ್ಲಿ ವೆಸ್ಟ್‌ಇಂಡೀಸ್ ತಂಡದ ವಿರುದ್ಧ ಒಟ್ಟು 732 ರನ್ ಗಳಿಸಿದ್ದರು.
ಗುರುವಾರ ಕೊನೆಯ ಟೆಸ್ಟ್ ಪಂದ್ಯದ ತನ್ನ ಮೊದಲ ಇನಿಂಗ್ಸ್ ನಲ್ಲಿ ಗಿಲ್ ಈ ದಾಖಲೆ ನಿರ್ಮಿಸಿದರು. ಸರಣಿಯಲ್ಲಿ ಈ ತನಕ ಒಟ್ಟು 4 ಶತಕಗಳನ್ನು ಗಳಿಸುವ ಮೂಲಕ ತನ್ನ ಸ್ಥಿರ ಪ್ರದರ್ಶನ ಮುಂದುವರಿಸಿದರು.
ತೀವ್ರ ಪೈಪೋಟಿಯಿಂದ ಕೂಡಿದ್ದ ಸರಣಿಯಲ್ಲಿ ಗಿಲ್ ಅವರ ಬ್ಯಾಟಿಂಗ್ ಪ್ರಾಬಲ್ಯಯು ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಭಾರತ ತಂಡದ ಯುವ ನಾಯಕನಾಗಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಗಿಲ್ ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಅವರು ಸೀಮಿತ ಓವರ್ ಕ್ರಿಕೆಟ್ ಸರಣಿಯಲ್ಲಿ ಈಗಲೂ ಈ ದಾಖಲೆಯನ್ನು ಹೊಂದಿದ್ದಾರೆ. ಕೊಹ್ಲಿ 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ 558 ರನ್ ಹಾಗೂ 2021ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 231 ರನ್ ಗಳಿಸಿದ್ದರು.