T20 ತಂಡದ ಉಪ ನಾಯಕ ಶುಭಮನ್ ಗಿಲ್‌ಗೆ ಗಾಯ
ಶುಭಮನ್ ಗಿಲ್ | Photo Credit : PTI
ಹೊಸದಿಲ್ಲಿ, ಡಿ.17: ಭಾರತದ ಟಿ-20 ಕ್ರಿಕೆಟ್ ತಂಡದ ಉಪ ನಾಯಕ ಶುಭಮನ್ ಗಿಲ್ ಕಾಲಿಗೆ ಗಾಯವಾಗಿದ್ದು ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ-20 ಪಂದ್ಯದಿಂದ ವಂಚಿತರಾಗಿದ್ದಾರೆ. ಈ ಬೆಳವಣಿಗೆಯು ಭಾರತೀಯ ಕ್ರಿಕೆಟ್ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ.
ಲಕ್ನೊದಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಬಲಗೈ ಬ್ಯಾಟರ್ ಗಿಲ್ ಅವರಿಗೆ ಗಾಯವಾಗಿದೆ. ಬಿಸಿಸಿಐ ವೈದ್ಯಕೀಯ ತಂಡವು ಗಿಲ್‌ಗೆ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದೆ.
ಅಹ್ಮದಾಬಾದ್‌ನಲ್ಲಿ ನಡೆಯಲಿರುವ ಕೊನೆಯ ಟಿ-20 ಪಂದ್ಯದಿಂದಲೂ ಗಿಲ್ ಹೊರಗುಳಿಯಲಿದ್ದಾರೆಯೇ ಎಂದು ಇನ್ನೂ ಸ್ಪಷ್ಟವಾಗಿಲ್ಲ.
ಹೆಚ್ಚಿನ ತಪಾಸಣೆ ಹಾಗೂ ಸ್ಕ್ಯಾನಿಂಗ್‌ನಲ್ಲಿ ಗಿಲ್ ಯಾವಾಗ ಸ್ಪರ್ಧಾತ್ಮಕ ಕ್ರಿಕೆಟಿಗೆ ವಾಪಸಾಗುತ್ತಾರೆ ಎನ್ನುವುದನ್ನು ಸ್ಪಷ್ಟಪಡಿಸಲಿದೆ.
‘ಬ್ಯಾಟಿಂಗ್ ಅಭ್ಯಾಸದ ವೇಳೆ ಗಿಲ್ ಅವರ ಕಾಲ್ಬೆರಳಿಗೆ ಗಾಯವಾಗಿದೆ. ಇದೀಗ ಅದು ಗಂಭೀರವಾಗಿದ್ದಂತೆ ಕಂಡುಬಂದಿಲ್ಲ. ಹೆಚ್ಚಿನ ತಪಾಸಣೆ ಹಾಗೂ ಸ್ಕ್ಯಾನಿಂಗ್‌ನಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ಅಹ್ಮದಾಬಾದ್‌ನಲ್ಲಿ ಗಿಲ್ ಆಡುವ ಕುರಿತಂತೆ ಶೀಘ್ರವೇ ನಿರ್ಧರಿಸಲಾಗುವುದು’ ಎಂದು ತಂಡದ ಮೂಲಗಳು ತಿಳಿಸಿವೆ.
ಸದ್ಯ ಸರಣಿಯಲ್ಲಿ 2-1 ಮುನ್ನಡೆಯಲ್ಲಿರುವ ಭಾರತ ತಂಡವು ಈಗಾಗಲೇ ಆಲ್‌ರೌಂಡರ್ ಅಕ್ಷರ್ ಪಟೇಲ್ ಸೇವೆಗಳಿಂದ ವಂಚಿತವಾಗಿದೆ. ಪಟೇಲ್ ಬದಲಿಗೆ ಶಹಬಾಝ್ ಅಹ್ಮದ್ ತಂಡಕ್ಕೆ ಸೇರಿದ್ದಾರೆ. ಧರ್ಮಶಾಲಾದಲ್ಲಿ ನಡೆದಿದ್ದ ಮೂರನೇ ಟಿ-20 ಪಂದ್ಯದಿಂದ ಹೊರಗುಳಿದಿದ್ದ ಜಸ್‌ಪ್ರಿತ್ ಬುಮ್ರಾ ಇದೀಗ ವಾಪಸಾಗಿದ್ದಾರೆ.
ಗಿಲ್ ಅನುಪಸ್ಥಿತಿಯಲ್ಲಿ ಕೇರಳದ ಬ್ಯಾಟರ್ ಸಂಜು ಸ್ಯಾಮ್ಸನ್ ಅಗ್ರ ಸರದಿಯಲ್ಲಿ ಹೆಚ್ಚಿನ ಅವಕಾಶ ಪಡೆಯಬಹುದು.