Punjab ಪರ ಆಡಲು ಶುಭಮನ್ ಗಿಲ್ ಸಜ್ಜು
ಶುಭಮನ್ ಗಿಲ್ | Photo Credit : PTI
ಚಂಡಿಗಡ, ಜ.1: ಭಾರತದ ಸ್ಟಾರ್ ಬ್ಯಾಟರ್ ಶುಭಮನ್ ಗಿಲ್ ವಿಜಯ್ ಹಝಾರೆ ಟ್ರೋಫಿ ಟೂರ್ನಮೆಂಟ್ ನಲ್ಲಿ ಪಂಜಾಬ್ ತಂಡದ ಪರ ಮುಂಬರುವ ಸುತ್ತಿನ ಪಂದ್ಯಗಳಲ್ಲಿ ಆಡಲು ಸಂಪೂರ್ಣ ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.
ಭಾರತದ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕನಾಗಿರುವ 26ರ ವಯಸ್ಸಿನ ಗಿಲ್ ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ರನ್ ಬರ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ವಾರ ಪ್ರಕಟವಾದ ಭಾರತದ ಟಿ-20 ವಿಶ್ವಕಪ್ ತಂಡ ಹಾಗೂ ನ್ಯೂಝಿಲ್ಯಾಂಡ್ ವಿರುದ್ಧದ ಟಿ-20 ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ.
ಜೈಪುರದಲ್ಲಿ ಸಿಕ್ಕಿಂ ಹಾಗೂ ಗೋವಾ ತಂಡಗಳ ವಿರುದ್ಧ ಜನವರಿ 3 ಹಾಗೂ 6ರಂದು ಪಂಜಾಬ್ ತಂಡದ ಪಂದ್ಯಗಳಲ್ಲಿ ಗಿಲ್ ಆಡಲಿದ್ದಾರೆ ಎಂದು ‘ಕ್ರಿಕ್‌ಬಝ್’ ವರದಿ ಮಾಡಿದೆ.
ಹಿರಿಯ ಆಲ್‌ರೌಂಡರ್ ರವೀಂದ್ರ ಜಡೇಜ ಅವರು ಸರ್ವಿಸಸ್ ಹಾಗೂ ಗುಜರಾತ್ ತಂಡಗಳ ವಿರುದ್ಧ ಜನವರಿ 6 ಹಾಗೂ 8ರಂದು ನಡೆಯಲಿರುವ ಪಂದ್ಯಗಳಲ್ಲಿ ತಾನು ಆಡಲಿದ್ದೇನೆ ಎಂದು ಸೌರಾಷ್ಟ್ರ ತಂಡಕ್ಕೆ ಮಾಹಿತಿ ನೀಡಿದ್ದಾರೆ.
ವಿಕೆಟ್‌ಕೀಪರ್-ಬ್ಯಾಟರ್ ಕೆ.ಎಲ್. ರಾಹುಲ್ ಜನವರಿ 3 ಹಾಗೂ 6ರಂದು ತ್ರಿಪುರಾ ಹಾಗೂ ರಾಜಸ್ಥಾನ ತಂಡಗಳ ವಿರುದ್ಧ ಕರ್ನಾಟಕ ತಂಡದ ಪರ ಆಡುವ ನಿರೀಕ್ಷೆ ಇದೆ. ಇದು ಅಧಿಕೃತವಾಗಿ ಇನ್ನೂ ಖಚಿತವಾಗಿಲ್ಲ.
ಜನವರಿ 11ರಿಂದ ಆರಂಭವಾಗಲಿರುವ ನ್ಯೂಝಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಗಿಲ್, ಜಡೇಜ ಹಾಗೂ ರಾಹುಲ್ ಅವರು ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ.
ಪಂಜಾಬ್ ಪ್ರಕಟಿಸಿರುವ ತಂಡದಲ್ಲಿ ಗಿಲ್ ಅವರಿದ್ದರು. ಆದರೆ ಮೊದಲ ನಾಲ್ಕು ಪಂದ್ಯಗಳಲ್ಲಿ ಅವರು ಲಭ್ಯ ಇರಲಿಲ್ಲ.