ಭಾರತ-ನ್ಯೂಝಿಲೆಂಡ್ ಏಕದಿನ ಸರಣಿ | ಇಂದೋರ್‌ಗೆ 3 ಲಕ್ಷ ರೂ. ಮೌಲ್ಯದ ವಾಟರ್ ಫಿಲ್ಟರ್ ಕೊಂಡೊಯ್ದ ಶುಭಮನ್ ಗಿಲ್!
ಕಲುಷಿತ ನೀರು ಕುಡಿದು ಹಲವರು ಮೃತಪಟ್ಟ ಬಳಿಕ ಚರ್ಚೆಗೆ ಗ್ರಾಸವಾಗಿದ್ದ ಇಂದೋರ್
ಶುಭಮನ್ ಗಿಲ್ (Photo: PTI)
ಇಂದೋರ್: ಭಾರತ-ನ್ಯೂಝಿಲೆಂಡ್ ಏಕದಿನ ಸರಣಿ 1-1 ಅಂತರದಲ್ಲಿ ಸಮಬಲಗೊಂಡಿರುವುದರಿಂದ ಇಂದೋರ್‌ನಲ್ಲಿ ನಡೆಯಲಿರುವ ಮೂರನೇ ಮತ್ತು ನಿರ್ಣಾಯಕ ಪಂದ್ಯವು ಟೀಮ್ ಇಂಡಿಯಾಕ್ಕೆ ಮಾಡು ಇಲ್ಲವೆ ಮಡಿ ಸ್ಪರ್ಧೆಯಾಗಿ ಮಾರ್ಪಟ್ಟಿದೆ. ಆದರೆ ಈ ಬಾರಿ ಗಮನವು ಕೇವಲ ರನ್‌ಗಳು ಮತ್ತು ವಿಕೆಟ್‌ಗಳ ಮೇಲೆ ಮಾತ್ರ ಸೀಮಿತವಾಗಿಲ್ಲ. ಟೀಂ ಇಂಡಿಯಾ ಆಟಗಾರ ಇಂದೋರ್‌ಗೆ ಕೊಂಡೊಯ್ದ ವಾಟರ್ ಫಿಲ್ಟರ್ ಕೂಡ ಚರ್ಚೆಗೆ ಗ್ರಾಸವಾಗಿದೆ.
ಭಾರತದ ಅತ್ಯಂತ ಸ್ವಚ್ಛ ನಗರ ಎಂಬ ಖ್ಯಾತಿಯನ್ನು ಹೊಂದಿರುವ ಇಂದೋರ್ ಇತ್ತೀಚೆಗೆ ಕಲುಷಿತ ನೀರು ಕುಡಿದ ಹಲವರು ಮೃತಪಟ್ಟ ಬಳಿಕ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದೇ ಇಂದೋರ್‌ನಲ್ಲಿ ಪಂದ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಮುಂಚಿತವಾಗಿ ಟೀಮ್ ಇಂಡಿಯಾ ಮುನ್ನೆಚ್ಚರಿಕೆಗಳನ್ನು ವಹಿಸಿದೆ.
ಟೀಮ್ ಇಂಡಿಯಾ ಆಟಗಾರರಿಗೆ ಇಂದೋರ್‌ನ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಹೋಟೆಲ್‌ಗೆ ಕ್ಯಾಪ್ಟನ್ ಗಿಲ್ ಅವರು 3 ಲಕ್ಷ ರೂಪಾಯಿ ಮೌಲ್ಯದ ಸ್ಪೆಷಲ್ ವಾಟರ್ ಫಿಲ್ಟರ್ ಅನ್ನು ತಂದಿದ್ದಾರೆ. ಇದನ್ನು ಹೋಟೆಲ್ ಕೊಠಡಿಯಲ್ಲಿ ಅಳವಡಿಸಿ ಫಿಲ್ಟರ್ ಆಗಿರುವ ನೀರನ್ನೇ ಶುಭಮನ್ ಗಿಲ್ ಅವರು ಕುಡಿಯುತ್ತಿದ್ದಾರೆ ಎಂದು NDTV ವರದಿ ಮಾಡಿದೆ.
ಈ ಸ್ಪೆಷಲ್ ಫಿಲ್ಟರ್ ʼಆರ್‌ಒʼ ಸಂಸ್ಕರಿಸಿದ ಮತ್ತು ಪ್ಯಾಕ್ ಮಾಡಿದ ಬಾಟಲ್ ನೀರನ್ನು ಪುನಃ ಶುದ್ಧೀಕರಿಸುವ ಸಾಮರ್ಥ್ಯವನ್ನು ಹೊಂದಿದೆ.
ಆದರೆ, ತಂಡದ ಮಾಧ್ಯಮ ವ್ಯವಸ್ಥಾಪಕರು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಇಂದೋರ್‌ನಲ್ಲಿ ಇತ್ತೀಚೆಗೆ ಕಲುಷಿತ ನೀರಿನಿಂದ ಉಂಟಾದ ಪ್ರಾಣ ಹಾನಿ ಅಥವಾ ವೈಯಕ್ತಿಕ ಸುರಕ್ಷತಾ ಪ್ರೋಟೋಕಾಲ್ ಭಾಗವಾಗಿ ಗಿಲ್ ಸ್ಪೆಷಲ್ ವಾಟರ್ ಫಿಲ್ಟರ್ ಕೊಂಡುಹೋಗಿದ್ದಾರಾ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.
ಹೋಟೆಲ್ ಮತ್ತು ಕ್ರೀಡಾಂಗಣ RO ವ್ಯವಸ್ಥೆಗಳನ್ನು ಒಳಗೊಂಡಂತೆ ಸುರಕ್ಷಿತ ಕುಡಿಯುವ ನೀರಿಗಾಗಿ ಹೆಚ್ಚಿನ ವ್ಯವಸ್ಥೆಗಳನ್ನು ಹೊಂದಿದ್ದರೂ, ಭಾರತ ತಂಡ ಹೆಚ್ಚುವರಿ ಎಚ್ಚರಿಕೆಯನ್ನು ಕಾಯ್ದುಕೊಳ್ಳುತ್ತಿದೆ ಎನ್ನುವುದು ಸ್ಪಷ್ಟವಾಗಿದೆ.