ಕೊಹ್ಲಿ ದಾಖಲೆ ಸರಿಗಟ್ಟಿದ ಶುಭಮನ್: ನಾಯಕನಾಗಿ 5 ಟೆಸ್ಟ್ ಶತಕ
ಶುಭಮನ್ ಗಿಲ್ (Photo: X/BCCI)
ಹೊಸದಿಲ್ಲಿ, ಅ. 11: ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ನ ಎರಡನೇ ದಿನವಾದ ಶನಿವಾರ ಭಾರತದ ಶುಭಮನ್ ಗಿಲ್ ಸ್ವದೇಶದಲ್ಲಿ ನಾಯಕನಾಗಿ ತನ್ನ ಚೊಚ್ಚಲ ಟೆಸ್ಟ್ ಶತಕವನ್ನು ಬಾರಿಸಿದ್ದಾರೆ. ಅವರು 177 ಎಸೆತಗಳಲ್ಲಿ ಶತಕವನ್ನು ಪೂರೈಸಿದರು.
ಇದು ಈ ವರ್ಷದಲ್ಲಿ ಅವರ ಐದನೇ ಟೆಸ್ಟ್ ಶತಕವೂ ಆಗಿದೆ. ಈ ಮೂಲಕ ಅವರು ಕ್ಯಾಲೆಂಡರ್ ವರ್ಷವೊಂದರಲ್ಲಿ ಐದು ಟೆಸ್ಟ್ ಶತಕಗಳನ್ನು ದಾಖಲಿಸಿದ ಎರಡನೇ ಭಾರತೀಯ ನಾಯಕನಾದರು. ಇದಕ್ಕೂ ಮೊದಲು ವಿರಾಟ್ ಕೊಹ್ಲಿ ಈ ದಾಖಲೆಯನ್ನು ನಿರ್ಮಿಸಿದ್ದಾರೆ.
ಕೊಹ್ಲಿ ಈ ಸಾಧನೆಯನ್ನು ತನ್ನ ಕ್ರೀಡಾ ಜೀವನದಲ್ಲಿ ಎರಡು ಬಾರಿ ಮಾಡಿದ್ದಾರೆ, 2017 ಮತ್ತು 2018ರಲ್ಲಿ . ಗಿಲ್ ಈ ವಿಶಿಷ್ಟ ಕ್ಲಬ್ಗೆ 2025ರಲ್ಲಿ ಸೇರ್ಪಡೆಯಾಗಿದ್ದಾರೆ. ಅವರು ಇಂಗ್ಲೆಂಡ್ ಪ್ರವಾಸದಲ್ಲಿ ನಾಲ್ಕು ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ ಮತ್ತು ದಿಲ್ಲಿಯಲ್ಲಿ ನಾಯಕನಾಗಿ ತನ್ನ ಐದನೇ ಶತಕವನ್ನು ಬಾರಿಸಿದರು.
ಸುನೀಲ್ ಗವಾಸ್ಕರ್, ರೋಹಿತ್ ಶರ್ಮಾ, ಸೌರವ್ ಗಂಗುಲಿ ಮತ್ತು ರಾಹುಲ್ ದ್ರಾವಿಡ್ ಮುಂತಾದ ಹಿಂದಿನ ಘಟಾನುಘಟಿ ನಾಯಕರಿಗೆ ಈ ಸಾಧನೆಯನ್ನು ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ, ಶುಭಮನ್ ಗಿಲ್ ರ ಸಾಧನೆಗೆ ಹೆಚ್ಚಿನ ಮಹತ್ವ ಬಂದಿದೆ.
ಇಂಗ್ಲೆಂಡ್ ಪ್ರವಾಸದಲ್ಲಿ ಶುಭಮನ್ ಗಿಲ್ ಭಾರತ ತಂಡದ ನಾಯಕನ ಸ್ಥಾನವನ್ನು ವಹಿಸಿಕೊಂಡರು. ನಿರ್ಗಮನ ನಾಯಕ ರೋಹಿತ್ ಶರ್ಮಾ ತೆರವುಗೊಳಿಸಿದ ಸ್ಥಾನವನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದರು. ಅವರು ಐದು ಟೆಸ್ಟ್ ಪಂದ್ಯಗಳ ಆ ಸರಣಿಯಲ್ಲಿ 700ಕ್ಕೂ ಅಧಿಕ ರನ್ಗಳನ್ನು ಗಳಿಸಿದರು. ಸರಣಿಯು 2-2ರಲ್ಲಿ ಸಮಬಲಗೊಂಡಿತು.