ಸಿಂಗಾಪುರ ಓಪನ್: ಭಾರತದ ಸವಾಲಿಗೆ ಸಾತ್ವಿಕ್-ಚಿರಾಗ್ ಸಾರಥ್ಯ
PC : PTI
ಸಿಂಗಾಪುರ: ಭಾರತದ ಖ್ಯಾತ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಮಂಗಳವಾರ ಆರಂಭವಾಗಲಿರುವ ಸಿಂಗಾಪುರ ಓಪನ್ ಸೂಪರ್-750 ಟೂರ್ನಮೆಂಟ್‌ನಲ್ಲಿ ಸ್ಟಾರ್ ಆಟಗಾರರನ್ನು ಹೊಂದಿರುವ ಭಾರತೀಯ ಬ್ಯಾಡ್ಮಿಂಟನ್ ತಂಡದ ಸವಾಲನ್ನು ಮುನ್ನಡೆಸಲಿದ್ದಾರೆ.
ವಿಶ್ವದ ಮಾಜಿ ನಂ.1 ಜೋಡಿ ಸಾತ್ವಿಕ್-ಚಿರಾಗ್ ಮಾರ್ಚ್‌ನಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ನಲ್ಲಿ ಕೊನೆಯ ಬಾರಿ ಆಡಿದ್ದರು. ಚಿರಾಗ್ ಗೆ ಬೆನ್ನುನೋವು ಕಾಣಿಸಿಕೊಂಡ ನಂತರ 2ನೇ ಸುತ್ತಿನಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದರು. ಸಾತ್ವಿಕ್ ಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕಾರಣ ಈಜೋಡಿ ಸುದಿರ್‌ಮನ್ ಕಪ್ ಟೂರ್ನಿಯಲ್ಲಿ ಆಡಿರಲಿಲ್ಲ.
ಇದೀಗ ಸಂಪೂರ್ಣ ಫಿಟ್ ಆಗಿರುವ ಭಾರತೀಯ ತಂಡವು ಕಳೆದ ವರ್ಷ ಮಲೇಶ್ಯ ಓಪನ್ ಹಾಗೂ ಇಂಡಿಯಾ ಓಪನ್ ಟೂರ್ನಿಯಲ್ಲಿ ಸೆಮಿ ಫೈನಗೆ ಗೆ ತಲುಪಿದ್ದರು. ಮಲೇಶ್ಯದ ಚೂಂಗ್ ಹಾನ್ ಜಿಯಾನ್ ಹಾಗೂ ಮುಹಮ್ಮದ್ ಹೈಕಾಲ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದಾರೆ.
ಕಳೆದ ವಾರ ಮಲೇಶ್ಯ ಮಾಸ್ಟರ್ಸ್ ಟೂರ್ನಿಯಲ್ಲಿ ಫೈನಗಿಲ್ ಗೆ ತಲುಪಿದ್ದ ಕಿಡಂಬಿ ಶ್ರೀಕಾಂತ್ ಅವರು ಈ ಬಾರಿ ಸ್ಪರ್ಧಿಸುತ್ತಿಲ್ಲ.
ಎಚ್.ಎಸ್. ಪ್ರಣಯ್ ಡೆನ್ಮಾರ್ಕ್‌ನ ರಸ್ಮಸ್ ಗೆಮ್ಕೆ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದ್ದಾರೆ. ಕಳೆದ ವರ್ಷ ಚಿಕುನ್ ಗುನ್ಯಾದೊಂದಿಗೆ ಹೋರಾಟ ನಡೆಸಿದ ನಂತರ ಪ್ರಣಯ್ ಕಳೆದ ವಾರ ಜಪಾನಿನ ಕೆಂಟಾ ನಿಶಿಮೊಟೊ ವಿರುದ್ಧ ಭರವಸೆಯ ಪ್ರದರ್ಶನ ನೀಡಿದ್ದರು. ಆದರೆ 2ನೇ ಸುತ್ತಿನಲ್ಲಿ ಯುಶಿ ಟನಕಾ ವಿರುದ್ಧ ಸೋತಿದ್ದರು.
ತನ್ನ ಫಿಟ್ನೆಸ್ ಬಗ್ಗೆ ಟೀಕಿಸುತ್ತಿರುವವರ ಬಾಯಿ ಮುಚ್ಚಿಸಲು ಎದುರು ನೋಡುತ್ತಿರುವ ಲಕ್ಷ್ಯ ಸೇನ್ ಮೊದಲ ಸುತ್ತಿನಲ್ಲಿ ಲಿನ್ ಚುನ್-ಯಿ ಅವರನ್ನು ಎದುರಿಸಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸೆಮಿ ಫೈನಲ್ ತಲುಪಿದ ನಂತರ 23ರ ಹರೆಯದ ಸೇನ್ ತನ್ನ ಫಾರ್ಮ್ ಕಂಡುಕೊಳ್ಳುವಲ್ಲಿ ಪರದಾಡುತ್ತಿದ್ದಾರೆ. ಸೇನ್ ಈ ವರ್ಷ 4 ಬಾರಿ ಮೊದಲಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ.
*ಮಹಿಳೆಯರ ಸಿಂಗಲ್ಸ್‌ಗೆ ಸಿಂಧು ನೇತೃತ್ವ
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪಿ.ವಿ. ಸಿಂಧು ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. 29ರ ಹರೆಯದ ಸಿಂಧು ಕಳೆದ ವರ್ಷ ಫೆಬ್ರವರಿಯಲ್ಲಿ ಗುವಾಹಟಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಗಾಯಗೊಂಡಿದ್ದರು. ಹೀಗಾಗಿ ಏಶ್ಯ ಟೀಮ್ ಚಾಂಪಿಯನ್ ಶಿಪ್ ನಿಂದ ಹೊರಗುಳಿದಿದ್ದರು.
ಮಾಜಿ ವಿಶ್ವ ಚಾಂಪಿಯನ್ ಸಿಂಧು ಮೊದಲ ಸುತ್ತಿನಲ್ಲಿ ಕೆನಡಾದ ವೆನ್ ಯು ಝಾಂಗ್ ರನ್ನು ಎದುರಿಸಲಿದ್ದಾರೆ.
ಅನ್ಮೋಲ್ ಖರ್ಬ್ ಚೀನಾದ ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಚೆನ್ ಯು ಫೀ ಅವರನ್ನು, ಆಕರ್ಷಿ ಕಶ್ಯಪ್ 3ನೇ ಶ್ರೇಯಾಂಕದ ಹಾನ್ ಯುಇ ಅವರನ್ನು ಎದುರಿಸಲಿದ್ದಾರೆ.
ಮಾಳವಿಕಾ ಬನ್ಸೋಡ್ ಅವರು ಥಾಯ್ಲೆಂಡ್ ನ ಸುಪನಿದಾ ಕಟೆಥಾಂಗ್ ಹಾಗೂ ರಕ್ಷಿತಾ ರಾಮ್‌ರಾಜ್ ಅವರು ದಕ್ಷಿಣ ಕೊರಿಯಾದ ಕಿಮ್ ಗಾ ಯುನ್ ರಿಂದ ಕಠಿಣ ಸವಾಲು ಎದುರಿಸಲಿದ್ದಾರೆ.
ಭಾರತದ ಅಗ್ರ ರ‍್ಯಾಂಕಿನ ಮಹಿಳೆಯರ ಡಬಲ್ಸ್ ಜೋಡಿ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಅವರು ಚೈನೀಸ್ ತೈಪೆಯ ಚಾಂಗ್ ಚಿಂಗ್ ಹಾಗೂ ಯಾಂಗ್ ಚಿಂಗ್ ಟುನ್ ರನ್ನು ಎದುರಿಸಲಿದ್ದಾರೆ.