ಶುಐಬ್ ಬಶೀರ್ ಬೌಲಿಂಗ್ ಗೆ ಔಟಾದ ಸಿರಾಜ್: ಚೆನ್ನೈ ಟೆಸ್ಟ್ ನೆನಪಿಸಿದ ಅನಿಲ್ ಕುಂಬ್ಳೆ
PC : X
ಹೊಸದಿಲ್ಲಿ: ಲಾರ್ಡ್ಸ್ ನಲ್ಲಿ ಸೋಮವಾರ ಕೊನೆಗೊಂಡ 3ನೇ ಟೆಸ್ಟ್ ಪಂದ್ಯವು ಐದು ದಿನಗಳ ಕ್ರಿಕೆಟ್ ಎಷ್ಟೊಂದು ಆಕರ್ಷಕವಾಗಿ ಉಳಿದಿದೆ ಎಂಬುದಕ್ಕೆ ಉಜ್ವಲ ನಿದರ್ಶನವಾಗಿದೆ ಎಂದು ಶ್ಲಾಘಿಸಿರುವ ಭಾರತ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಕೊನೆಯ ದಿನದಾಟದ ಅಂತಿಮ ಅವಧಿಯಲ್ಲಿ ಭಾರತದ ಮುಹಮ್ಮದ್ ಸಿರಾಜ್ ಅವರು ಇಂಗ್ಲೆಂಡ್ ಸ್ಪಿನ್ನರ್ ಶುಐಬ್ ಬಶೀರ್ ಗೆ ಔಟಾಗಿರುವ ರೀತಿಯು 1999ರಲ್ಲಿ ಚೆನ್ನೈನಲ್ಲಿ ನಡೆದಿದ್ದ ಭಾರತ-ಪಾಕಿಸ್ತಾನ ನಡುವಿನ ಟೆಸ್ಟ್ ಪಂದ್ಯವನ್ನು ನೆನಪಿಸಿದೆ ಎಂದರು.
ಭಾರತ ತಂಡ ಲಾರ್ಡ್ಸ್ ನಲ್ಲಿ 22 ರನ್ ಅಂತರದಿಂದ ಸೋತ ಹಿನ್ನೆಲೆಯಲ್ಲಿ ಇಂಗ್ಲೆಂಡ್ 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಕುಂಬ್ಳೆ ಅವರು ಈ ತನಕ ನೋಡಿದ ಗುಣಮಟ್ಟದ ಕ್ರಿಕೆಟನ್ನು ಎತ್ತಿ ತೋರಿಸಿದರು.
ಲೀಡ್ಸ್ ನಲ್ಲಿ ನಡೆದಿದ್ದ ಸರಣಿ ಆರಂಭಿಕ ಪಂದ್ಯದಲ್ಲಿ ಸೋತ ನಂತರ ಭಾರತವು 2ನೇ ಟೆಸ್ಟ್ ಪಂದ್ಯದಲ್ಲಿ ಪುಟಿದೆದ್ದಿತ್ತು. ಅತ್ಯುತ್ತಮ ಬೌಲಿಂಗ್, ಚುರುಕಿನ ಫೀಲ್ಡಿಂಗ್ ನಿಂದಾಗಿ ಭಾರತ ತಂಡವು ಕೊನೆಯ ದಿನದಾಟದಲ್ಲಿ ಇಂಗ್ಲೆಂಡ್ ತಂಡವನ್ನು 271 ರನ್‌ನಿಂದ ಆಲೌಟ್ ಮಾಡಿತ್ತು.
ಲಾರ್ಡ್ಸ್ ಟೆಸ್ಟ್‌ನಲ್ಲಿ 22 ರನ್‌ನಿಂದ ರೋಚಕ ಜಯ ದಾಖಲಿಸಿರುವ ಇಂಗ್ಲೆಂಡ್ ತಂಡವು ಸರಣಿಯಲ್ಲಿ ಮತ್ತೊಮ್ಮೆ ಮುನ್ನಡೆ ಪಡೆದಿದೆ.
‘‘ಟೆಸ್ಟ್ ಕ್ರಿಕೆಟ್ ಗೆ ಇದೊಂದು ಉತ್ತಮ ಜಾಹೀರಾತು. ಮೂರು ಪಂದ್ಯಗಳು ಪೈಪೋಟಿಯಿಂದ ಕೂಡಿದ್ದು, ಉಭಯ ತಂಡಗಳು ಗೆಲುವಿಗಾಗಿ ಹೋರಾಡಿವೆ. ಸದ್ಯ ಇಂಗ್ಲೆಂಡ್ 2-1ರಿಂದ ಮುನ್ನಡೆಯಲ್ಲಿದೆ. ಆದರೆ ಭಾರತ ತಂಡವು ಪ್ರತೀ ಸೆಶನ್ ನಲ್ಲೂ ಸರಿಸಮನಾದ ಹೋರಾಟ ನೀಡಿದೆ. ಇದರಿಂದ ಮುಂದಿನ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತವು ಆತ್ಮವಿಶ್ವಾಸ ಪಡೆಯಬೇಕು. ಮೊದಲ ಟೆಸ್ಟ್ ಸೋಲಿನಿಂದ ಭಾರತವು ಈಗಾಗಲೇ ಮರು ಹೋರಾಡಿದೆ. 3ನೇ ಟೆಸ್ಟ್‌ನ ಮೊದಲ ಇನಿಂಗ್ಸ್ ನಲ್ಲಿ ಭೋಜನ ವಿರಾಮಕ್ಕೆ ಮೊದಲು ಪಂತ್ ರನೌಟಾಗಿದ್ದು, ಒಟ್ಟು 60ಕ್ಕೂ ಅಧಿಕ ಎಕ್ಸ್‌ಟ್ರಾ ರನ್ ಗಳು ಹಾಗೂ ಜೇಮಿ ಸ್ಮಿತ್ ಹಾಗೂ ಬ್ರೆಂಡನ್ ಕಾರ್ಸ್ ಮುಕ್ತವಾಗಿ ಸ್ಕೋರ್ ಗಳಿಸಲು ಅವಕಾಶ ನೀಡಿರುವುದು ಸೋಲಿಗೆ ಕಾರಣವಾಗಿರಬಹುದು. ಭಾರತವು ಸರಣಿ ಸಮಬಲಗೊಳಿಸಲು ಬಯಸಿದರೆ ಮುಂದಿನ ಪಂದ್ಯದಲ್ಲಿ ಶ್ರಮಪಡಬೇಕಾಗುತ್ತದೆ’’ ಎಂದು ಕುಂಬ್ಳೆ ‘ಜಿಯೋಹಾಟ್ ಸ್ಟಾರ್’ಗೆ ತಿಳಿಸಿದರು.
ಭಾರತ ತಂಡವು ಸೋಮವಾರ ಲಾರ್ಡ್ಸ್ ನಲ್ಲಿ ಕೊನೆಗೊಂಡ ಟೆಸ್ಟ್‌ನಲ್ಲಿ 4ನೇ ಕನಿಷ್ಠ ಮೊತ್ತದಿಂದ ಸೋಲುಂಡಿದೆ.
1999ರಲ್ಲಿ ಚೆನ್ನೈನಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ 12 ರನ್‌ನಿಂದ ಆಘಾತಕಾರಿ ಸೋಲುಂಡಿದ್ದನ್ನು ನೆನಪಿಸಿದ ಕುಂಬ್ಳೆ ಸ್ವತಃ ಆ ಪಂದ್ಯವನ್ನು ಆಡಿದ್ದರು.
ಲಾರ್ಡ್ಸ್ ನಲ್ಲಿ ಕೊನೆಯ ದಿನದಾಟದಲ್ಲಿ ಶುಐಬ್ ಬಶೀರ್ ಗೆ ಸಿರಾಜ್ ಔಟಾಗಿರುವುದು 1999ರ ಟೆಸ್ಟ್ ಪಂದ್ಯವನ್ನು ನೆನೆಪಿಸಿತು. ಆಗ ಜಾವಗಲ್ ಶ್ರೀನಾಥ್ ಅವರು ಪಾಕಿಸ್ತಾನದ ಆಫ್ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಗೆ ಔಟಾಗಿದ್ದರು.
‘‘ಚೆನ್ನೈನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಭಾರತ ತಂಡವು 12 ರನ್ ಗಳಿಂದ ಸೋತಿರುವ ಟೆಸ್ಟ್ ಪಂದ್ಯವೊಂದು ನನಗೆ ನೆನಪಾಯಿತು. ಆಗ ಕೂಡ ಇದೇ ರೀತಿಯಲ್ಲಿ ಶ್ರೀನಾಥ್ ಔಟಾಗಿದ್ದರು. ಭಾರತದ ಗೆಲುವಿಗೆ ಕೇವಲ 22 ರನ್ ಅಗತ್ಯವಿತ್ತು. ಜಡೇಜ ತಂಡವನ್ನು ಗೆಲುವಿನ ಸನಿಹ ತಲುಪಿಸಲು ಯೋಜನೆ ಹಾಕಿದ್ದರು. ಭಾರತ ತಂಡ ಐತಿಹಾಸಿಕ ಗೆಲುವಿನ ಅವಕಾಶ ಹೊಂದಿತ್ತು. 22 ರನ್ ಗಳಿಂದ ಸೋತಿದ್ದರೂ ಸಾಕಷ್ಟು ಧನಾತ್ಮಕ ಅಂಶ ಪಡೆದುಕೊಂಡಿದೆ’’ ಎಂದು ಕುಂಬ್ಳೆ ಹೇಳಿದರು.
74.5ನೇ ಓವರ್‌ನಲ್ಲಿ ಬಶೀರ್ ಎಸೆದ ಚೆಂಡಿನಲ್ಲಿ ಸಿರಾಜ್ ಔಟಾದರು. ಸಿರಾಜ್ ಔಟಾದ ರೀತಿಗೆ ನಾನ್ ಸ್ಟ್ರೈಕ್ ನಲ್ಲಿದ್ದ ಜಡೇಜ ಅಚ್ಚರಿಪಟ್ಟರು. ಸಿರಾಜ್ ಬಾರಿಸಿದ ಚೆಂಡು ಅವರನ್ನು ವಂಚಿಸಿ ಬೇಲ್ಸ್ ಅನ್ನು ಬೀಳಿಸಿತು.