×
Ad

ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ರನ್ : 28 ವರ್ಷಗಳ ಹಳೆಯ ದಾಖಲೆ ಪುಡಿಗಟ್ಟಿದ ಸ್ಮೃತಿ ಮಂಧಾನ

Update: 2025-10-09 21:40 IST

ಸ್ಮೃತಿ ಮಂಧಾನ | Photo Credit : PTI

ಹೊಸದಿಲ್ಲಿ, ಅ.9: ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಮಹಿಳೆಯರ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿದ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಐತಿಹಾಸಿಕ ಸಾಧನೆ ಮಾಡಿದರು.

ದಕ್ಷಿಣ ಆಫ್ರಿಕಾ ತಂಡದ ವಿರುದ್ದ ವಿಶಾಖ ಪಟ್ಟಣದಲ್ಲಿ ಗುರುವಾರ ನಡೆದ ಐಸಿಸಿ ಮಹಿಳೆಯರ ವಿಶ್ವಕಪ್ ಪಂದ್ಯದ ವೇಳೆ ಮುಂಬೈ ಆಟಗಾರ್ತಿ ಈ ಮೈಲಿಗಲ್ಲು ತಲುಪಿದರು.

ಇನಿಂಗ್ಸ್‌ನ 8ನೇ ಓವರ್‌ನಲ್ಲಿ ಅಯಾಬೊಂಗಾ ಖಾಕಾ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸಿದ ಮಂಧಾನ ಅವರು ಆಸ್ಟ್ರೇಲಿಯದ ಮಾಜಿ ನಾಯಕಿ ಬೆಲಿಂಡಾ ಕ್ಲಾರ್ಕ್ ಹೆಸರಲ್ಲಿದ್ದ 28 ವರ್ಷಗಳ ಹಳೆಯ ದಾಖಲೆಯೊಂದನ್ನು ಮುರಿದರು. ಕ್ಲಾರ್ಕ್ 1997ರಲ್ಲಿ ಒಟ್ಟು 970 ರನ್ ಗಳಿಸಿದ್ದರು. 2025ರಲ್ಲಿ ಗರಿಷ್ಠ ರನ್ ಗಳಿಸಿದ ಮಂಧಾನ ಈ ದಾಖಲೆಯನ್ನು ಮುರಿದಿದ್ದಾರೆ.

29ರ ಹರೆಯದ ಎಡಗೈ ಆಟಗಾರ್ತಿ ಮಂಧಾನ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯಕ್ಕಿಂತ ಮೊದಲು 959 ರನ್ ಗಳಿಸಿದ್ದರು. 11ನೇ ಓವರ್‌ನಲ್ಲಿ 23 ರನ್ ಗಳಿಸಿ ಔಟಾಗುವ ಮೊದಲು ಮಂಧಾನ ಈ ಮೈಲಿಗಲ್ಲನ್ನು ತಲುಪಿದರು. ಮಂಧಾನ 2025ರ ಋತುವಿನಲ್ಲಿ 57.76ರ ಸರಾಸರಿಯಲ್ಲಿ, 112.22ರ ಸ್ಟ್ರೈಕ್‌ರೇಟ್‌ನಲ್ಲಿ, 4 ಶತಕ ಹಾಗೂ 3 ಅರ್ಧಶತಕಗಳ ಸಹಿತ ಒಟ್ಟು 982 ರನ್ ಗಳಿಸಿದ್ದಾರೆ. 135 ರನ್- ಮಂಧಾನ ಈ ವರ್ಷ ಗಳಿಸಿದ ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ.

ಮಂಧಾನ ಅವರ ಅತ್ಯುತ್ತಮ ಫಾರ್ಮ್ ಈ ತನಕ ವಿಶ್ವಕಪ್‌ನಲ್ಲಿ ಭಾರತದ ಅಜೇಯ ಓಟಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಶ್ರೀಲಂಕಾ ಹಾಗೂ ಪಾಕಿಸ್ತಾನದ ವಿರುದ್ಧ 8 ಹಾಗೂ 23 ರನ್ ಗಳಿಸಿದ್ದರೂ ಮಂಧಾನ ಅವರು ಆರಂಭಿಕ ಆಟಗಾರ್ತಿಯಾಗಿ ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.

ಮಂಧಾನ ಮತ್ತೊಂದು ಮೈಲಿಗಲ್ಲಿನ ಸಮೀಪದಲ್ಲಿದ್ದು, ಏಕದಿನ ಕ್ರಿಕೆಟ್‌ನಲ್ಲಿ 5,000 ರನ್ ಗಳಿಸುವ ಹಾದಿಯಲ್ಲಿದ್ದಾರೆ. ಈ ಸಾಧನೆ ಮಾಡಿದ ಭಾರತದ 2ನೇ ಹಾಗೂ ವಿಶ್ವದ 5ನೇ ಆಟಗಾರ್ತಿಯಾಗಲಿದ್ದಾರೆ.

2017ರಲ್ಲಿ ಭಾರತದ ಆಲ್‌ರೌಂಡರ್ ದೀಪ್ತಿ ಶರ್ಮಾ 20 ಪಂದ್ಯಗಳಲ್ಲಿ ಒಟ್ಟು 787 ರನ್ ಗಳಿಸಿದ್ದರು.

ಮಹಿಳೆಯರ ಏಕದಿನ: ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ರನ್ ಗಳಿಸಿದವರು

ವರ್ಷ ಆಟಗಾರ್ತಿ ದೇಶ ರನ್

2025 ಸ್ಮೃತಿ ಮಂಧಾನ ಭಾರತ 982

1997 ಬೆಲಿಂಡಾ ಕ್ಲಾರ್ಕ್ ಆಸ್ಟ್ರೇಲಿಯ 970

2022 ಲೌರಾ ವೊಲ್ವಾರ್ಟ್ ದ.ಆಫ್ರಿಕಾ 882

1997 ಡೆಬೊರಾ ಹಾಕ್ಲೆ ನ್ಯೂಝಿಲ್ಯಾಂಡ್ 880

2016 ಆ್ಯಮಿ ಸ್ಯಾಟರ್ಥ್‌ವೇಟ್ ನ್ಯೂಝಿಲ್ಯಾಂಡ್ 853

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News