ಆಸ್ಟ್ರೇಲಿಯದ ವಿರುದ್ಧ ದಕ್ಷಿಣ ಆಫ್ರಿಕಾ ಏಕದಿನ ತಂಡಕ್ಕೆ ಮಫಾಕ ಸೇರ್ಪಡೆ
PC : PTI
ಕೇರ್ನ್ಸ್ (ಆಸ್ಟ್ರೇಲಿಯ), ಆ. 18: ಆಸ್ಟ್ರೇಲಿಯ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಗಾಗಿ ದಕ್ಷಿಣ ಆಫ್ರಿಕಾವು ತನ್ನ ತಂಡಕ್ಕೆ 19 ವರ್ಷದ ವೇಗಿ ಕ್ವೇನ್ ಮಫಾಕರನ್ನು ಸೇರ್ಪಡೆಗೊಳಿಸಿದೆ. ಸರಣಿಯ ಮೊದಲ ಪಂದ್ಯವು ಆಸ್ಟ್ರೇಲಿಯದ ಕೇರ್ನ್ಸ್ ನಲ್ಲಿ ಮಂಗಳವಾರ ನಡೆಯಲಿದೆ.
ಆಸ್ಟ್ರೇಲಿಯ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಕರ್ಷಕ ಪ್ರದರ್ಶನ ನೀಡಿದ ಬಳಿಕ, 17 ಸದಸ್ಯರ ಏಕದಿನ ತಂಡಕ್ಕೂ ಮಫಾಕರನ್ನು ಸೇರಿಸಲಾಗಿದೆ. ಟಿ20 ಸರಣಿಯಲ್ಲಿ ಎಡಗೈ ವೇಗಿ ಮಫಾಕ ಒಂಭತ್ತು ವಿಕೆಟ್ಗಳನ್ನು ಉರುಳಿಸಿ ಸರಣಿಯ ಗರಿಷ್ಠ ವಿಕೆಟ್ ಗಳಿಕೆದಾರರಾದರು.
ಮಫಾಕ ಈ ಹಿಂದೆ ಕೊನೆಯ ಬಾರಿ ಅಂತರರಾಷ್ಟ್ರೀಯ ಏಕದಿನ ಪಂದ್ಯವೊಂದನ್ನು ಆಡಿದ್ದು ಕಳೆದ ವರ್ಷದ ಡಿಸೆಂಬರ್ ನಲ್ಲಿ. ಅವರು ಈವರೆಗೆ ಎರಡು ಏಕದಿನ ಪಂದ್ಯಗಳನ್ನು ಆಡಿದ್ದಾರೆ.
ಈ ನಡುವೆ, ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿಯಲ್ಲಿ ಅತ್ಯುತ್ತಮ ಫಾರ್ಮ್ ನಲ್ಲಿ ಇದ್ದ ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೆವಿಸ್ ಮಂಗಳವಾರ ತನ್ನ ಚೊಚ್ಚಲ ಅಂತರರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡುವ ನಿರೀಕ್ಷೆಯಿದೆ.
ಟಿ20 ಸರಣಿಯಲ್ಲಿ ಬ್ರೆವಿಸ್ ಗರಿಷ್ಠ ರನ್ ಗಳಿಕೆದಾರನಾಗಿದ್ದಾರೆ. ಅವರು ಕೇವಲ ಮೂರು ಪಂದ್ಯಗಳಲ್ಲಿ 180 ರನ್ ಗಳನ್ನು ಗಳಿಸಿದ್ದಾರೆ. ಇದರಲ್ಲಿ ಎರಡನೇ ಪಂದ್ಯದಲ್ಲಿ ಬಾರಿಸಿದ ಅಜೇಯ 125 ರನ್ ಸೇರಿದೆ. ಇದು ಟಿ20 ಮಾದರಿಯಲ್ಲಿ ದಕ್ಷಿಣ ಆಫ್ರಿಕಾ ಆಟಗಾರನೊಬ್ಬ ಬಾರಿಸಿದ ಗರಿಷ್ಠ ಮೊತ್ತವಾಗಿದೆ.
*ದಕ್ಷಿಣ ಆಫ್ರಿಕಾ ಏಕದಿನ ತಂಡ
ಟೆಂಬಾ ಬವುಮ (ನಾಯಕ), ಕಾರ್ಬಿನ್ ಬೋಶ್, ಮ್ಯಾಥ್ಯೂ ಬ್ರೀಝ್ಕೆ, ಡೆವಾಲ್ಡ್ ಬ್ರೆವಿಸ್, ನಾಂಡ್ರಿ ಬರ್ಗರ್, ಟೋನಿ ಡಿ ರೆರ್ಝಿ, ಏಡನ್ ಮರ್ಕ್ರಮ್, ಕ್ವೇನ್ ಮಫಾಕ, ಸೆನುರನ್ ಮುತ್ತುಸ್ವಾಮಿ, ಕೇಶವ ಮಹಾರಾಜ್, ವಿಯಾನ್ ಮುಲ್ಡರ್, ಲುಂಗಿ ಗಿಡಿ, ಲುವಾನ್ ಡ್ರೆ ಪ್ರಿಟೋರಿಯಸ್, ಕಾಗಿಸೊ ರಬಾಡ, ರಯಾನ್ ರಿಕಲ್ಟನ್, ಟ್ರೈಸ್ಟನ್ ಸ್ಟಬ್ಸ್, ಪ್ರೆನೆಲನ್ ಸುಬ್ರಯೆನ್.