×
Ad

T20 ವಿಶ್ವಕಪ್ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ

ರಿಕೆಲ್ಟನ್, ಟ್ರಿಸ್ಟನ್ ಸ್ಟಬ್ಸ್‌ಗೆ ಸ್ಥಾನವಿಲ್ಲ!

Update: 2026-01-02 21:45 IST

Photo Credit ; PTI 

ಕೇಪ್‌ಟೌನ್, ಜ.2: ಮುಂಬರುವ T20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ದಕ್ಷಿಣ ಆಫ್ರಿಕಾ ತನ್ನ ತಂಡವನ್ನು ಶುಕ್ರವಾರ ಪ್ರಕಟಿಸಿದ್ದು, ಕೆಲವು ಪ್ರಮುಖ ಹಾಗೂ ಅಚ್ಚರಿಯ ನಿರ್ಧಾರಗಳನ್ನು ಕೈಗೊಂಡಿದೆ.

ಯುವ ವೇಗದ ಬೌಲರ್ ಕ್ವೆನಾ ಮಫಾಕ ಹಾಗೂ ಅಗ್ರ ಸರದಿಯ ಬ್ಯಾಟರ್ ಜೇಸನ್ ಸ್ಮಿತ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಆದರೆ ಬ್ಯಾಟರ್‌ಗಳಾದ ರಯಾನ್ ರಿಕೆಲ್ಟನ್ ಹಾಗೂ ಟ್ರಿಸ್ಟನ್ ಸ್ಟಬ್ಸ್‌ಗೆ ಸ್ಥಾನ ನಿರಾಕರಿಸಲಾಗಿದೆ.

ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡಿದ್ದ ಜೇಸನ್ ಸ್ಮಿತ್‌ರನ್ನು ಆಯ್ಕೆಗೆ ಪರಿಗಣಿಸಲಾಗಿದೆ. T20 ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಸ್ಮಿತ್ ಅವರು ಸ್ಟಬ್ಸ್‌ರನ್ನು ಹಿಂದಿಕ್ಕಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 2024ರ T20 ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗಿದ್ದ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಟಬ್ಸ್ ಇದ್ದರು.

2024ರಲ್ಲಿ ಟಿ–20 ಕ್ರಿಕೆಟ್‌ ಗೆ ಕಾಲಿಟ್ಟಿರುವ ಸ್ಮಿತ್ ಅವರು 128.30 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಸದ್ಯ ಅವರು ದಕ್ಷಿಣ ಆಫ್ರಿಕಾ ಟಿ–20 ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಕೇಪ್‌ಟೌನ್ ತಂಡದ ಪರ ಆಡುತ್ತಿದ್ದಾರೆ. ನವೆಂಬರ್‌ನಲ್ಲಿ ನಡೆದ T20 ಚಾಲೆಂಜ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದ ಸ್ಮಿತ್ ಅವರು ಕೇವಲ 19 ಎಸೆತಗಳಲ್ಲಿ ಔಟಾಗದೆ 68 ರನ್ ಗಳಿಸಿ ಡಾಲ್ಫಿನ್ಸ್ ತಂಡವನ್ನು ಪ್ಲೇಆಫ್‌ಗೆ ತಲುಪುವಲ್ಲಿ ನೆರವಾಗಿದ್ದರು.

ಅಗ್ರ ಸರದಿ ಆಟಗಾರರಿಂದ ತುಂಬಿ ತುಳುಕುತ್ತಿರುವ ದಕ್ಷಿಣ ಆಫ್ರಿಕಾ ತಂಡದಲ್ಲಿ ರಿಕೆಲ್ಟನ್ ಸ್ಥಾನ ಪಡೆಯಲಿಲ್ಲ. ನಾಯಕ ಮರ್ಕ್ರಮ್ ಹಾಗೂ ವಿಕೆಟ್‌ಕೀಪರ್-ಬ್ಯಾಟರ್ ಕ್ವಿಂಟನ್ ಡಿಕಾಕ್ ಅಗ್ರ ಸರದಿಯ ಪ್ರಮುಖ ಆಯ್ಕೆಗಳಾಗಿದ್ದಾರೆ.

‘‘ನಾವು ಇತ್ತೀಚೆಗೆ ಆತಿಥೇಯ ಭಾರತ ವಿರುದ್ಧ ಉಪಖಂಡದ ಪಿಚ್‌ಗಳಲ್ಲಿ ಆಡಿದ್ದೇವೆ. ವಿಶ್ವಕಪ್‌ಗೆ ಮುನ್ನ ಅದೇ ವಾತಾವರಣದಲ್ಲಿ ಆಡಿರುವ ಅನುಭವ ನಮಗೆ ಲಾಭವಾಗಲಿದೆ’’ ಎಂದು ದಕ್ಷಿಣ ಆಫ್ರಿಕಾ ಮುಖ್ಯ ಕೋಚ್ ಶುಕ್ರಿ ಕೊನ್ರಾಡ್ ಹೇಳಿದರು.

ಗಾಯದಿಂದಾಗಿ ಭಾರತದ ಪ್ರವಾಸದಿಂದ ವಂಚಿತರಾಗಿದ್ದ ಸ್ಟಾರ್ ವೇಗದ ಬೌಲರ್ ಕಾಗಿಸೊ ರಬಾಡ T20 ತಂಡಕ್ಕೆ ಮರಳಿದ್ದಾರೆ. 2024ರ T20 ವಿಶ್ವಕಪ್‌ ನಲ್ಲಿ ಗರಿಷ್ಠ ವಿಕೆಟ್ ಪಡೆದಿದ್ದ ಅನ್ರಿಚ್ ನೋಟ್ಜೆ ಕೂಡ ತಂಡಕ್ಕೆ ಪುನರಾಗಮನ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾ ತಂಡವು ‘ಡಿ’ ಗುಂಪಿನಲ್ಲಿ ಅಫ್ಘಾನಿಸ್ತಾನ, ಕೆನಡಾ, ನ್ಯೂಝಿಲ್ಯಾಂಡ್ ಹಾಗೂ ಯುಎಇ ತಂಡಗಳೊಂದಿಗೆ ಸ್ಥಾನ ಪಡೆದಿದೆ. ಫೆಬ್ರವರಿ 9ರಂದು ಅಹ್ಮದಾಬಾದ್‌ನಲ್ಲಿ ಕೆನಡಾ ವಿರುದ್ಧ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

ಮಾಜಿ ಆಲ್‌ರೌಂಡರ್ ಅಲ್ಬಿ ಮಾರ್ಕೆಲ್ ತಂಡಕ್ಕೆ ವಿಶೇಷ ಸಲಹೆಗಾರನಾಗಿ ಸೇರ್ಪಡೆಯಾಗಲಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ:

ಏಡೆನ್ ಮರ್ಕ್ರಮ್ (ನಾಯಕ), ಕಾರ್ಬಿನ್ ಬಾಷ್, ಡೆವಾಲ್ಡ್ ಬ್ರೆವಿಸ್, ಕ್ವಿಂಟನ್ ಡಿಕಾಕ್, ಟೋನಿ ಡಿ ರೆರ್ಝಿ, ಡೊನೊವನ್ ಫೆರೇರ, ಮಾರ್ಕೊ ಜಾನ್ಸನ್, ಜಾರ್ಜ್ ಲಿಂಡ್, ಕೇಶವ ಮಹಾರಾಜ್, ಕ್ವೆನಾ ಮಫಾಕ, ಡೇವಿಡ್ ಮಿಲ್ಲರ್, ಲುಂಗಿ ಗಿಡಿ, ಅನ್ರಿಚ್ ನೋಟ್ಜೆ, ಕಾಗಿಸೊ ರಬಾಡ, ಜೇಸನ್ ಸ್ಮಿತ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News