ಭಾರತ ವಿರುದ್ಧ ಟೆಸ್ಟ್ ಸರಣಿ | ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಪ್ರಕಟ, ಬವುಮಾ ನಾಯಕ
ಬವುಮಾ |Photo Credit : @ICC
ಹೊಸದಿಲ್ಲಿ, ಅ.27: ಭಾರತದಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ಕೇವಲ 3 ವಾರಗಳು ಬಾಕಿ ಇರುವಾಗ ಕ್ರಿಕೆಟ್ ದಕ್ಷಿಣ ಆಫ್ರಿಕಾವು(ಸಿಎಸ್‌ಎ)15 ಸದಸ್ಯರನ್ನು ಒಳಗೊಂಡ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ.
ಇತ್ತೀಚೆಗೆ ಪಾಕಿಸ್ತಾನ ತಂಡದ ವಿರುದ್ಧ ಟೆಸ್ಟ್ ಸರಣಿಯನ್ನು ಆಡಿರುವ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡಲಾಗಿಲ್ಲ. ಈ ಮೂಲಕ ತಂಡದಲ್ಲಿ ಆತ್ಮವಿಶ್ವಾಸ ತುಂಬಲು ನಿರ್ಧರಿಸಲಾಗಿದೆ.
ಈ ವರ್ಷಾರಂಭದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಿರುವ ತಂಡದಲ್ಲಿ ಕೇವಲ 3 ಬದಲಾವಣೆಗಳನ್ನು ಮಾಡಲಾಗಿದೆ. ಗಾಯದಿಂದಾಗಿ ಹಿಂದಿನ ಸರಣಿಯಿಂದ ವಂಚಿತರಾಗಿದ್ದ ಖಾಯಂ ನಾಯಕ ಟೆಂಬಾ ಬವುಮಾ ಮತ್ತೊಮ್ಮೆ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.
ಬವುಮಾ ಜೂನ್ ನಲ್ಲಿ ಆಸ್ಟ್ರೇಲಿಯ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಕೊನೆಯ ಬಾರಿ ಟೆಸ್ಟ್ ಪಂದ್ಯ ಆಡಿದ್ದರು.
ಮೊದಲ ಟೆಸ್ಟ್ ಪಂದ್ಯವು ನವೆಂಬರ್ 14ರಂದು ಕೋಲ್ಕತಾದಲ್ಲಿ ಆರಂಭವಾಗಲಿದೆ. 2ನೇ ಟೆಸ್ಟ್ ಪಂದ್ಯವು ನ.22ರಂದು ಗುವಾಹಟಿಯ ಎಸಿಎ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.
ಆಫ್ ಸ್ಪಿನ್ನರ್ ಪ್ರೆನೆಲನ್ ಸುಬ್ರಯೆನ್ ಹಾಗೂ ವೇಗದ ಬೌಲರ್ ಡೇವಿಡ್ ಬೆಡಿಂಗ್ ಹ್ಯಾಮ್ ತಂಡದಿಂದ ಹೊರಗುಳಿದಿದ್ದು, ಬೆಡಿಂಗ್ ಹ್ಯಾಮ್ ಅವರು ಬವುಮಾಗೆ ದಾರಿ ಮಾಡಿಕೊಟ್ಟಿದ್ದಾರೆ.
ಉಪ ಖಂಡದ ವಾತಾವರಣದಲ್ಲಿ ಭಾರತವನ್ನು ಎದುರಿಸಲಿರುವ ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್ ಗಳಿಗೆ ಭಾರತೀಯ ಸ್ಪಿನ್ನರ್ ಗಳನ್ನು ಎದುರಿಸುವುದು ಒಂದು ಸವಾಲಾಗಿದೆ.
ಅನುಭವಿಗಳು ಹಾಗೂ ಭರವಸೆಯ ಯುವ ಪ್ರತಿಭೆಗಳು ಸೇರಿದಂತೆ ಆಯ್ಕೆಗಾರರು ಸಮತೋಲಿತ ತಂಡವನ್ನು ಆಯ್ಕೆ ಮಾಡಿದ್ದಾರೆ.
ಬ್ಯಾಟಿಂಗ್ ಸರದಿಯಲ್ಲಿ ಮರ್ಕ್ರಮ್, ರಿಯಾನ್ ರಿಕೆಲ್ಟನ್, ಟೋನಿ ಡಿ ರೆರ್ಝಿ ಹಾಗೂ ಝುಬೆರ್ ಹಂಝಾ ಅವರಿಗೆ ಯುವ ಆಟಗಾರರಾದ ಡೆವಾಲ್ಡ್ ಬ್ರೆವಿಸ್ ಸಾಥ್ ನೀಡಲಿದ್ದಾರೆ. ಕೈಲ್ ವೆರ್ರೆನ್ನೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸುವ ನಿರೀಕ್ಷೆ ಇದ್ದು, ಟ್ರಿಸ್ಟನ್ ಸ್ಟಬ್ಸ್ ಮಧ್ಯಮ ಸರದಿಯಲ್ಲಿ ತಂಡವನ್ನು ಆಧರಿಸಲಿದ್ದಾರೆ.
ಅಲ್ ರೌಂಡರ್ ವಿಭಾಗದಲ್ಲಿ ವಿಯಾನ್ ಮುಲ್ದರ್, ಕಾರ್ಬಿನ್ ಬಾಷ್ ಹಾಗೂ ಮಾರ್ಕೊ ಜಾನ್ಸನ್ ಅವರಿದ್ದಾರೆ. ದಕ್ಷಿಣ ಆಫ್ರಿಕಾದ ಬಲಿಷ್ಠ ಬೌಲಿಂಗ್ ವಿಭಾಗವನ್ನು ಕಾಗಿಸೊ ರಬಾಡ, ಕೇಶವ ಮಹಾರಾಜ್, ಎಸ್. ಮುತ್ತುಸ್ವಾಮಿ ಹಾಗೂ ಸೈಮನ್ ಹಾರ್ಮರ್ ಮುನ್ನಡೆಸಲಿದ್ದಾರೆ.
*ದಕ್ಷಿಣ ಆಫ್ರಿಕಾ ಟೆಸ್ಟ್ ತಂಡ: ಟೆಂಬಾ ಬವುಮಾ(ನಾಯಕ), ಏಡೆನ್ ಮರ್ಕ್ರಮ್, ರಿಯಾನ್ ರಿಕೆಲ್ಟನ್, ಕೈಲ್ ವೆರ್ರೆನ್ನೆ, ಡೆವಾಲ್ಡ್ ಬ್ರೆವಿಸ್, ಝುಬೆರ್ ಹಂಝಾ, ಟೋನಿ ಡಿ ರೆರ್ಝಿ, ಟ್ರಿಸ್ಟನ್ ಸ್ಟಬ್ಸ್, ಕಾರ್ಬಿನ್ ಬಾಷ್, ವಿಯಾನ್ ಮುಲ್ದರ್, ಮಾರ್ಕೊ ಜಾನ್ಸನ್, ಕಾಗಿಸೊ ರಬಾಡ, ಕೇಶವ ಮಹಾರಾಜ್, ಎಸ್.ಮುತ್ತುಸ್ವಾಮಿ ಹಾಗೂ ಸೈಮನ್ ಹಾರ್ಮರ್.
ವೇಳಾಪಟ್ಟಿ
ಪ್ರಥಮ ಟೆಸ್ಟ್: ನ.14ರಿಂದ 18, ಕೋಲ್ಕತಾ
ದ್ವಿತೀಯ ಟೆಸ್ಟ್: ನ.22ರಿಂದ 26, ಗುವಾಹಟಿ