×
Ad

2ನೇ ಟಿ20: ಬ್ರೆವಿಸ್ ಭರ್ಜರಿ ಶತಕ; ಆಸ್ಟ್ರೇಲಿಯದ ವಿರುದ್ಧ ಜಯ, ಸರಣಿ ಸಮಬಲಗೊಳಿಸಿದ ದಕ್ಷಿಣ ಆಫ್ರಿಕಾ

Update: 2025-08-12 21:53 IST

ಡೆವಾಲ್ಡ್ ಬ್ರೆವಿಸ್ | PC : NDTV 

ಡಾರ್ವಿನ್, ಆ.12: ಡೆವಾಲ್ಡ್ ಬ್ರೆವಿಸ್ ಅವರ ದಾಖಲೆಯ ಶತಕದ ನೆರವಿನಿಂದ ಆತಿಥೇಯ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಆಸ್ಟ್ರೇಲಿಯ ತಂಡದ ವಿರುದ್ಧ 2ನೇ ಟಿ20 ಅಂತರರಾಷ್ಟ್ರೀಯ ಪಂದ್ಯವನ್ನು 53 ರನ್ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ತಂಡ 7 ವಿಕೆಟ್‌ಗಳ ನಷ್ಟಕ್ಕೆ 218 ರನ್ ಗಳಿಸಿತು. ಗೆಲ್ಲಲು 219 ರನ್ ಗುರಿ ಪಡೆದ ಆಸ್ಟ್ರೇಲಿಯ ತಂಡವು 17.4 ಓವರ್‌ ಗಳಲ್ಲಿ 165 ರನ್ ಗಳಿಸಿ ಆಲೌಟಾಗಿದೆ. ಕಾರ್ಬಿನ್ ಬಾಷ್(3-20) ಹಾಗೂ ಕ್ವೆನಾ ಮಫಾಕಾ(3-57)ತಲಾ ಮೂರು ವಿಕೆಟ್‌ಗಳನ್ನು ಉರುಳಿಸಿ ಆಸ್ಟ್ರೇಲಿಯಕ್ಕೆ ಕಡಿವಾಣ ಹಾಕಿದರು.

ಈ ಸೋಲಿನೊಂದಿಗೆ ಆಸ್ಟ್ರೇಲಿಯ ತಂಡದ ಸತತ 9 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. 7 ಪಂದ್ಯಗಳಲ್ಲಿ ಮೊದಲ ಬಾರಿ ಆಫ್ರಿಕಾ ತಂಡಕ್ಕೆ ಸೋಲುಂಡಿದೆ.

ಆಸ್ಟ್ರೇಲಿಯದ ಇನಿಂಗ್ಸ್‌ನಲ್ಲಿ ಟಿಮ್ ಡೇವಿಡ್(50 ರನ್, 24 ಎಸೆತ, 4 ಬೌಂಡರಿ, 4 ಸಿಕ್ಸರ್)ಬರೋಬ್ಬರಿ 50 ರನ್ ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು. ಅಲೆಕ್ಸ್ ಕಾರಿ(26 ರನ್), ನಾಯಕ ಮಿಚೆಲ್ ಮಾರ್ಷ್(22 ರನ್), ಮ್ಯಾಕ್ಸ್‌ವೆಲ್(16 ರನ್)ಎರಡಂಕೆಯ ಸ್ಕೋರ್ ಗಳಿಸಿದರು. ಟ್ರಾವಿಸ್ ಹೆಡ್(5), ಕ್ಯಾಮರೂನ್ ಗ್ರೀನ್(9 ರನ್), ಮಿಚೆಲ್ ಓವೆನ್(8)ವಿಫಲರಾದರು.

ದಕ್ಷಿಣ ಆಫ್ರಿಕಾದ ಪರ ಗರಿಷ್ಠ ವೈಯಕ್ತಿಕ ಟಿ20 ಸ್ಕೋರ್(ಔಟಾಗದೆ 125)ಗಳಿಸಿದ ಬ್ರೆವಿಸ್ 41 ಎಸೆತಗಳಲ್ಲಿ 2ನೇ ವೇಗದ ಶತಕ ಗಳಿಸಿದರು. ಟಿ20 ಕ್ರಿಕೆಟ್‌ ನಲ್ಲಿ ಶತಕ ಗಳಿಸಿದ ದಕ್ಷಿಣ ಆಫ್ರಿಕಾದ ಯುವ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಮೂಲಕ ದಕ್ಷಿಣ ಆಫ್ರಿಕಾ ತಂಡವು ಆಸ್ಟ್ರೇಲಿಯ ವಿರುದ್ಧ ಗರಿಷ್ಠ ಮೊತ್ತ ಗಳಿಸುವಲ್ಲಿ ನೆರವಾದರು.

ದಕ್ಷಿಣ ಆಫ್ರಿಕಾದ ದೇಶೀಯ ಕ್ರಿಕೆಟ್‌ ನಲ್ಲಿ ಗರಿಷ್ಠ ಟಿ20 ಸ್ಕೋರ್(162)ಗಳಿಸಿದ ದಾಖಲೆಯನ್ನು ಹೊಂದಿರುವ ಬ್ರೆವಿಸ್ ಅವರು ಬೌಂಡರಿ ಹಾಗೂ ಸಿಕ್ಸರ್‌ ಗಳ ಮೂಲಕವೇ 96 ರನ್ ಕಲೆ ಹಾಕಿದ್ದಾರೆ. ಏಕಾಂಗಿಯಾಗಿ ಹೋರಾಡಿದ ಬ್ರೆವಿಸ್ ಅವರು 56 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದರು. ಟ್ರಿಸ್ಟನ್ ಸ್ಟಬ್ಸ್ (31 ರನ್, 22 ಎಸೆತ) ಅವರೊಂದಿಗೆ 4ನೇ ವಿಕೆಟ್‌ಗೆ 91 ಎಸೆತಗಳಲ್ಲಿ 126 ರನ್ ಸೇರಿಸಿದರು.

ಆಸ್ಟ್ರೇಲಿಯದ ಐವರು ಬೌಲರ್‌ ಗಳ ಪೈಕಿ ಬೆನ್ ಡ್ವಾರ್ಶುಯಿಸ್ ಹೊರತುಪಡಿಸಿ ಉಳಿದ ನಾಲ್ವರು ಪ್ರತೀ ಓವರ್‌ ಗೆ 11 ರನ್ ನೀಡಿದರು.

ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯ ತಂಡವು 10ನೇ ಓವರ್‌ ನಲ್ಲಿ 104 ರನ್‌ ಗೆ 3 ವಿಕೆಟ್ ಕಳೆದುಕೊಂಡಿತ್ತು. ಟಿಮ್ ಡೇವಿಡ್ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದರು. ಉಳಿದವರು ದೊಡ್ಡ ಮೊತ್ತ ಗಳಿಸಲಿಲ್ಲ.

ದಕ್ಷಿಣ ಆಫ್ರಿಕಾದ ಪರ ಎಡಗೈ ವೇಗಿ ಕ್ವೆನಾ ಮಫಾಕಾ ದುಬಾರಿ ಬೌಲರ್ ಎನಿಸಿಕೊಂಡರು. ಆಲ್‌ ರೌಂಡರ್ ಕಾರ್ಬಿನ್ ಬಾಷ್ 3 ವಿಕೆಟ್‌ಗಳನ್ನು ಪಡೆದು ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು. ಈ ಇಬ್ಬರ ಸಾಹಸದಿಂದ ದಕ್ಷಿಣ ಆಫ್ರಿಕಾವು ಆಸ್ಟ್ರೇಲಿಯದ ವಿರುದ್ದ ದೊಡ್ಡ ಅಂತರದಿಂದ(53)ಜಯ ದಾಖಲಿಸಿದೆ.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ 7ನೇ ಓವರ್‌ ನಲ್ಲಿ 57 ರನ್‌ ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆಗ ಸ್ಟಬ್ಸ್ (31 ರನ್) ಅವರೊಂದಿಗೆ ಶತಕದ ಜೊತೆಯಾಟ ನಡೆಸಿದ ಬ್ರೆವಿಸ್ ದಕ್ಷಿಣ ಆಫ್ರಿಕಾ ತಂಡ ಚೇತರಿಸಿಕೊಳ್ಳಲು ನೆರವಾದರು. ಆಸ್ಟ್ರೇಲಿಯದ ಪರ ಬೆನ್ ಡ್ವಾರ್ಶುಯಿಸ್(2-24)ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್(2-44)ತಲಾ ಎರಡು ವಿಕೆಟ್‌ಗಳನ್ನು ಪಡೆದರು.

►56 ಎಸೆತಗಳಲ್ಲಿ ಔಟಾಗದೆ 125 ರನ್ ಗಳಿಸಿದ ಡೆವಾಲ್ಡ್ ಬ್ರೆವಿಸ್!

ದಕ್ಷಿಣ ಆಫ್ರಿಕಾದ ಮಧ್ಯಮ ಸರದಿಯ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಕೇವಲ 56 ಎಸೆತಗಳಲ್ಲಿ ಔಟಾಗದೆ 125 ರನ್ ಗಳಿಸುವ ಮೂಲಕ ತನ್ನ ತಂಡವು ಆಸ್ಟ್ರೇಲಿಯದ ವಿರುದ್ಧ ಟಿ20 ಕ್ರಿಕೆಟ್‌ ನಲ್ಲಿ ಗರಿಷ್ಠ ರನ್( 7 ವಿಕೆಟ್‌ಗಳ ನಷ್ಟಕ್ಕೆ 218 ರನ್) ಗಳಿಸುವಲ್ಲಿ ನೆರವಾದರು. ಎರಡನೇ ಅತಿ ವೇಗದಲ್ಲಿ (41 ಎಸೆತಗಳು) ಟಿ20 ಶತಕ ಗಳಿಸಿದ ದಕ್ಷಿಣ ಆಫ್ರಿಕಾದ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು.

ಮೊದಲ ಪಂದ್ಯದಲ್ಲಿ ಕೇವಲ 2 ರನ್ ಗಳಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟರ್ ಬ್ರೆವಿಸ್ 25 ಎಸೆತಗಳಲ್ಲಿ ತನ್ನ ಅರ್ಧಶತಕ ಪೂರೈಸಿದರು. ಕೇವಲ 41 ಎಸೆತಗಳಲ್ಲಿ ಶತಕವನ್ನು ಪೂರೈಸಿ ಪುರುಷರ ಟಿ20ಯಲ್ಲಿ 2ನೇ ವೇಗದ ಟಿ20 ಶತಕ ಗಳಿಸಿ ಆಫ್ರಿಕಾದ 2ನೇ ಬ್ಯಾಟರ್ ಎನಿಸಿಕೊಂಡರು. 2017ರಲ್ಲಿ ಡೇವಿಡ್ ಮಿಲ್ಲರ್ ಬಾಂಗ್ಲಾದೇಶ ವಿರುದ್ಧ 35 ಎಸೆತಗಳಲ್ಲಿ ಶತಕ ಗಳಿಸಿದ್ದರು.

22 ವರ್ಷ ವಯಸ್ಸಿನ ಬ್ರೆವಿಸ್ ಟಿ20 ಶತಕ ಗಳಿಸಿದ ದಕ್ಷಿಣ ಆಫ್ರಿಕಾದ ಕಿರಿಯ ವಯಸ್ಸಿನ ಆಟಗಾರನಾಗಿದ್ದಾರೆ. ಈ ಮೂಲಕ ರಿಚರ್ಡ್ ಲೆವಿಸ್(24 ವರ್ಷ)ದಾಖಲೆಯನ್ನು ಮುರಿದರು.

‘ಬೇಬಿ ಎಬಿ’ ಎಂಬ ಅಡ್ಡ ಹೆಸರನ್ನು ಹೊಂದಿರುವ ಬ್ರೆವಿಸ್ ಅವರು ಎಬಿ ಡಿ ವಿಲಿಯರ್ಸ್ ಬ್ಯಾಟಿಂಗ್ ಶೈಲಿಯನ್ನೇ ಅನುಸರಿಸುತ್ತಾರೆ. 22ರ ಹರೆಯದ ಬ್ರೆವಿಸ್ ಅವರು ಸ್ಕೂಪ್ಸ್ ಹಾಗೂ ರ‍್ಯಾಂಪ್ಸ್ ಸಹಿತ ಎಲ್ಲ ರೀತಿಯ ಸ್ಟ್ರೋಕ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 223ರ ಸ್ಟ್ರೈಕ್‌ ರೇಟ್‌ ನಲ್ಲಿ ಬ್ಯಾಟ್ ಬೀಸಿ 12 ಬೌಂಡರಿ, 8 ಸಿಕ್ಸರ್‌ ಗಳನ್ನು ಸಿಡಿಸಿ ಆಸ್ಟ್ರೇಲಿಯದ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದ್ದಾರೆ.

ಬ್ರೆವಿಸ್ ಅವರ ಹೊಡೆತದ ಆಯ್ಕೆ ಹಾಗೂ ಹಿಡಿತವು ಮಾರ್ಗದರ್ಶಕರಾದ ಎಬಿ ಡಿವಿಲಿಯರ್ಸ್ ಅವರ ಪ್ರಭಾವ ಪ್ರತಿಬಿಂಬಿಸುತ್ತಿದೆ. ಎಬಿಡಿ ಅವರು ಬ್ರೆವಿಸ್‌ ಗೆ ಹದಿ ಹರೆಯದಿಂದಲೂ ಮಾರ್ಗದರ್ಶನ ನೀಡುತ್ತಿದ್ದಾರೆ.

ಎಬಿಡಿಯವರಂತೆಯೆ ಬ್ರೆವಿಸ್ ಕೂಡ ಸೂಪರ್ ಸ್ಪೋರ್ಟ್ಸ್ ಪಾರ್ಕ್ ಪ್ರದೇಶದಲ್ಲಿ ಬೆಳೆದರು. ಅದೇ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದರು. ಎಬಿಡಿ ಅವರ ಮೆಂಟರ್ ಡಿಯೋನ್ ಬೋಟ್ಸ್ ಅವರಿಂದ ತರಬೇತಿ ಪಡೆದಿದ್ದಾರೆ.

ಬ್ಯಾಟಿಂಗ್ ಮಾತ್ರವಲ್ಲ ಲೆಗ್ ಸ್ಪಿನ್ನರ್ ಕೂಡ ಆಗಿರುವ ಬ್ರೆವಿಸ್‌ ಗೆ ಶೇನ್ ವಾರ್ನ್ ಅವರೇ ಸ್ಫೂರ್ತಿಯಾಗಿದ್ದಾರೆ. ಪ್ರಸಕ್ತ ಸರಣಿಯಲ್ಲಿ ಬ್ರೆವಿಸ್ ಈಗಾಗಲೇ ವಿಕೆಟ್‌ಗಳನ್ನು ಪಡೆದಿದ್ದಾರೆ.

ತನ್ನ ಆಲ್‌ ರೌಂಡ್ ಕೌಶಲ್ಯ, ನಿರ್ಭೀತಿಯ ಬ್ಯಾಟಿಂಗ್‌ನ ಮೂಲಕ ವಿಶ್ವ ಕ್ರಿಕೆಟ್‌ ನ ಓರ್ವ ಯುವ ಆಟಗಾರನಾಗಿ ಹೊರಹೊಮ್ಮುತ್ತಿದ್ದಾರೆ.

ಅಭಿಮಾನಿಗಳು ತನ್ನನ್ನು ‘ಬೇಬಿ ಎಬಿ’ಎಂದು ಏಕೆ ಕರೆಯುತ್ತಿದ್ದಾರೆ ಎನ್ನುವುದನ್ನು 2ನೇ ಟಿ20 ಪಂದ್ಯದಲ್ಲಿ ಬ್ರೆವಿಸ್ ನೆನಪಿಸಿದರು. ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಅವರೊಂದಿಗೆ ಆರ್‌ಸಿಬಿ ಪರ ಆಡುವ ಕನಸು ಕಾಣುತ್ತಿದ್ದಾರೆ.

► ಹಲವು ಟಿ20 ಮೈಲಿಗಲ್ಲುಗಳನ್ನು ಮುರಿದ ಬ್ರೆವಿಸ್

►  ಟಿ20 ಶತಕ ಗಳಿಸಿದ ದಕ್ಷಿಣ ಆಫ್ರಿಕಾದ ಯುವ ಆಟಗಾರ

22 ವರ್ಷ, 105 ದಿನಗಳ ವಯಸ್ಸಿನ ಬ್ರೆವಿಸ್, ರಿಚರ್ಡ್ ಲೇವಿಸ್ ಅವರ ದಾಖಲೆ(24 ವರ್ಷ, 36 ದಿನಗಳು)ಮುರಿದರು.

►  ಪುರುಷರ ಟಿ20ಯಲ್ಲಿ ದಕ್ಷಿಣ ಆಫ್ರಿಕಾದ ಪರ ಗರಿಷ್ಠ ವೈಯಕ್ತಿಕ ಸ್ಕೋರ್

ಔಟಾಗದೆ 125 ರನ್ ಗಳಿಸಿರುವ ಬ್ರೆವಿಸ್ ಅವರು ಎಫ್ ಡು ಪ್ಲೆಸಿಸ್(119 ರನ್, ವಿಂಡೀಸ್ ವಿರುದ್ಧ, 2015)ದಾಖಲೆಯನ್ನು ಮುರಿದರು.

► ಒಂದೇ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ ಹಲವು ದಾಖಲೆಗಳು

ಆಸ್ಟ್ರೇಲಿಯದ ವಿರುದ್ಧ್ದ ವೇಗದ ಶತಕ ಗಳಿಸಿದ ದಕ್ಷಿಣ ಆಫ್ರಿಕಾದ ಬ್ಯಾಟರ್, ಗರಿಷ್ಠ ಸ್ಕೋರ್ ಹಾಗೂ ಗರಿಷ್ಠ ಸಿಕ್ಸರ್‌ ಗಳನ್ನು(8)ಸಿಡಿಸಿದ ಸಾಧನೆ.

► ಎಲೈಟ್ ಕಂಪನಿ

ಆಸ್ಟ್ರೇಲಿಯದ ವಿರುದ್ಧ ಟಿ20 ಶತಕ ಗಳಿಸಿದ ಆರನೇ ಆಟಗಾರ. ಋತುರಾಜ್ ಗಾಯಕ್ವಾಡ್, ಬ್ರೆಂಡನ್ ಮೆಕಲಮ್, ಮಾರ್ಟಿನ್ ಗಪ್ಟಿಲ್, ತಿಲಕರತ್ನೆ ದಿಲ್ಶನ್ ಹಾಗೂ ಶೈ ಹೋಪ್ ಅವರಿದ್ದ ಎಲೈಟ್ ಕಂಪನಿಗೆ ಸೇರ್ಪಡೆ.

► ಆಸ್ಟ್ರೇಲಿಯದಲ್ಲಿ ಗರಿಷ್ಠ ವೈಯಕ್ತಿಕ ಟಿ20 ಸ್ಕೋರ್

ಶೇನ್ ವಾಟ್ಸನ್(ಔಟಾಗದೆ 124, 2016ರಲ್ಲಿ ಭಾರತದ ವಿರುದ್ಧ)ದಾಖಲೆ ಪತನ

-ಗರಿಷ್ಠ ಜೊತೆಯಾಟ

ಟ್ರಿಸ್ಟನ್ ಸ್ಟಬ್ಸ್ ಅವರೊಂದಿಗೆ 126 ರನ್ ಜೊತೆಯಾಟ, ಟಿ20ಯಲ್ಲಿ ಆಸ್ಟ್ರೇಲಿಯದ ವಿರುದ್ಧ್ದ ದಕ್ಷಿಣ ಆಫ್ರಿಕಾ ಪರ 2ನೇ ಗರಿಷ್ಠ ಜೊತೆಯಾಟ.

-ಆಸ್ಟ್ರೇಲಿಯದ ವಿರುದ್ಧ ದಾಖಲೆಯ ಮೊತ್ತ

ದಕ್ಷಿಣ ಆಫ್ರಿಕಾ ತಂಡ(218/7)ತನ್ನ ಹಿಂದಿನ ದಾಖಲೆ(204/7, 2016)ಯನ್ನು ಉತ್ತಮಪಡಿಸಿಕೊಂಡಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News