×
Ad

ಸ್ಮೃತಿ ಮಂಧಾನ ದಾಖಲೆ ಮುರಿದ ದಕ್ಷಿಣ ಆಫ್ರಿಕಾದ ಟಝ್ಮಿನ್ ಬ್ರಿಟ್ಸ್

Update: 2025-10-07 20:27 IST

ಟಝ್ಮಿನ್ ಬ್ರಿಟ್ಸ್ | Photo Credit : @HardCricketpix 

ಹೊಸದಿಲ್ಲಿ, ಅ.7: ದಕ್ಷಿಣ ಆಫ್ರಿಕಾದ ಕ್ರಿಕೆಟರ್ ಟಝ್ಮಿನ್ ಬ್ರಿಟ್ಸ್ ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ 2025ರ ಆವೃತ್ತಿಯ ಮಹಿಳೆಯರ ವಿಶ್ವಕಪ್ ಪಂದ್ಯದ ವೇಳೆ ಐತಿಹಾಸಿಕ ಮೈಲಿಗಲ್ಲು ತಲುಪಿದ್ದಾರೆ. ಬ್ರಿಟ್ಸ್ ಕೇವಲ 86 ಎಸೆತಗಳಲ್ಲಿ 15 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಶತಕ ಸಿಡಿಸಿದ್ದಾರೆ.

ಬ್ರಿಟ್ಸ್ 2025ರ ಋತುವಿನಲ್ಲಿ 5ನೇ ಏಕದಿನ ಶತಕ ದಾಖಲಿಸಿ ಮಹಿಳೆಯರ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಂತ ಹೆಚ್ಚು ಶತಕಗಳನ್ನು ಸಿಡಿಸಿ ನೂತನ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಭಾರತದ ಆರಂಭಿಕ ಅಟಗಾರ್ತಿ ಸ್ಮೃತಿ ಮಂಧಾನ ಅವರ ದಾಖಲೆಯನ್ನು ಮುರಿದಿದ್ದಾರೆ. ಮಂಧಾನ 2024 ಹಾಗೂ 2025ರಲ್ಲಿ ತಲಾ 4 ಶತಕಗಳನ್ನು ದಾಖಲಿಸಿದ್ದಾರೆ.

ಬ್ರಿಟ್ಸ್ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 7 ಶತಕಗಳನ್ನು ಪೂರೈಸಿದ ಸಾಧನೆ ಮಾಡಿದ್ದಾರೆ. 41 ಇನಿಂಗ್ಸ್‌ಗಳಲ್ಲಿ ಈ ಸಾಧನೆಗೈದಿರುವ ಬ್ರಿಟ್ಸ್ ಆಸ್ಟ್ರೇಲಿಯದ ಮಾಜಿ ನಾಯಕಿ ಮೆಗ್ ಲ್ಯಾನ್ನಿಂಗ್ ದಾಖಲೆಯನ್ನು ಮುರಿದಿದ್ದಾರೆ. ಇಂಗ್ಲೆಂಡ್‌ನ ಟಮ್ಮಿ ಬೀಮೌಂಟ್ ಹಾಗೂ ನ್ಯೂಝಿಲ್ಯಾಂಡ್‌ನ ಸುಝಿ ಬೇಟ್ಸ್ ಕ್ರಮವಾಗಿ 62 ಹಾಗೂ 81 ಇನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ.

ಶತಕ ಗಳಿಸಿದ ನಂತರ ವಿಭಿನ್ನವಾಗಿ ಸಂಭ್ರಮಾಚರಣೆ ನಡೆಸಿದ ಬ್ರಿಟ್ಸ್ 89 ಎಸೆತಗಳಲ್ಲಿ 101 ರನ್ ಗಳಿಸಿ ಲೀ ತಹುಹು ಅವರಿಗೆ ವಿಕೆಟ್ ಒಪ್ಪಿಸಿದರು.

ಮೊದಲ ಇನಿಂಗ್ಸ್‌ನಲ್ಲಿ ನ್ಯೂಝಿಲ್ಯಾಂಡ್‌ನ ಸೋಫಿ ಡಿವೈನ್ ತನ್ನ 300ನೇ ಅಂತರ್‌ರಾಷ್ಟ್ರೀಯ ಪಂದ್ಯವನ್ನು ಆಡಿದ್ದು, 9 ಬೌಂಡರಿಗಳ ಸಹಿತ 98 ಎಸೆತಗಳಲ್ಲಿ 85 ರನ್ ಗಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News