×
Ad

ಬೆಂಗಳೂರಿನಲ್ಲಿ ಕಾಲ್ತುಳಿತ ಪ್ರಕರಣ | ಮಹಾರಾಜ ಟ್ರೋಫಿ ಟೂರ್ನಿ ಚಿನ್ನಸ್ವಾಮಿ ಸ್ಟೇಡಿಯಂನಿಂದ ಸ್ಥಳಾಂತರ?

Update: 2025-08-01 20:58 IST

PC :  PTI 

ಬೆಂಗಳೂರು, ಆ.1: ಪೊಲೀಸರ ಅನುಮತಿ ಇನ್ನೂ ಸಿಗದ ಕಾರಣ ಆಗಸ್ಟ್ 11ರಿಂದ 27ರ ತನಕ ನಿಗದಿಯಾಗಿದ್ದ ಮಹಾರಾಜ ಟ್ರೋಫಿಗಾಗಿ ನಡೆಯಲಿರುವ ಕೆಎಸ್‌ಸಿಎ ಟಿ-20 ಪಂದ್ಯಾವಳಿಯನ್ನು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಿಂದ ಬೆಂಗಳೂರಿನ ಹೊರವಲಯದಲ್ಲಿರುವ ಕೆಎಸ್‌ಸಿಎ ಆಲೂರು ಕ್ರೀಡಾಂಗಣ ಅಥವಾ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ.

ಫ್ರಾಂಚೈಸಿ ಆಧರಿತ ನಾಲ್ಕನೇ ಆವೃತ್ತಿಯ ಪಂದ್ಯಾವಳಿಯು ಮುಚ್ಚಿದ ಬಾಗಿಲಿನ ಇವೆಂಟ್ ಆಗಲಿದೆ ಎಂದು ಜು.11ರಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್(ಕೆಎಸ್‌ಸಿಎ)ಘೋಷಿಸಿತ್ತು. ನಗರದ ಪೊಲೀಸರು ಟೂರ್ನಿಗೆ ಇನ್ನೂ ಅನುಮತಿ ನೀಡಿಲ್ಲ ಎಂದು ತಿಳಿದುಬಂದಿದೆ. ಬೇರೆ ಸ್ಥಳಗಳಲ್ಲಿ ಪಂದ್ಯಾವಳಿ ನಡೆಸಲು ಯೋಜಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಜೂನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ವಿಜಯೋತ್ಸವದ ವೇಳೆ ಬೆಂಗಳೂರು ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು.

‘‘ಯಾವುದೇ ಹೊಟೇಲ್ ನಮಗೆ ಶೇ.100ರಷ್ಟು ಮರು ಪಾವತಿ ಮಾಡುವುದಿಲ್ಲ. ಪಂಚತಾರಾ ಹೊಟೇಲ್‌ನಲ್ಲಿ ಸುಮಾರು 2 ಡಝನ್ ಕೊಠಡಿಗಳನ್ನು ಬುಕ್ ಮಾಡಲು ನಾವು ಈಗಾಗಲೇ ಲಕ್ಷಾಂತರ ರೂ.ಖರ್ಚು ಮಾಡಿದ್ದೇವೆ. ಇದರ ಹೊರತಾಗಿ ಪಂದ್ಯಾವಳಿ ಇಲ್ಲಿಂದ ಸ್ಥಳಾಂತರಗೊಂಡರೆ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತವಾಗಲಿದೆ’’ಎಂದು ಫ್ರಾಂಚೈಸಿಯ ಪಾಲುದಾರರೊಬ್ಬರು ಹೇಳಿದ್ದಾರೆ.

ಟೂರ್ನಿ ಸ್ಥಳಾಂತರಗೊಳಿಸಲು ಪರಿಗಣಿಸಲ್ಪಟ್ಟಿರುವ ಎರಡೂ ಸ್ಥಳಗಳು ವಿಭಿನ್ನ ಸವಾಲುಗಳನ್ನು ಎದುರಿಸುತ್ತಿವೆ. ಕ್ರಿಕೆಟ್‌ ಗೆ ಸೂಕ್ತವಾಗಿರುವ ಆಲೂರ್ ಸ್ಟೇಡಿಯಂನಲ್ಲಿ ಫ್ಲಡ್‌ ಲೈಟ್‌ ಗಳು ಅಥವಾ ಪ್ರೇಕ್ಷಕರ ಗ್ಯಾಲರಿ ಇಲ್ಲ. ಅಂದರೆ ಪಂದ್ಯಾವಳಿಯನ್ನು ಹಗಲಿನಲ್ಲಿ ನಡೆಸಬೇಕಾಗುತ್ತದೆ. ಮೈಸೂರಿನಲ್ಲಿ ಉತ್ತಮ ಸ್ಟೇಡಿಯಂ ಇದೆ. ಆದರೆ ಕಳೆದ ಒಂದು ತಿಂಗಳಿಂದ ಈ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News