ಭಾರತೀಯ ಫುಟ್ಬಾಲ್ ನಲ್ಲಿ ಮತ್ತೊಂದು ದಾಖಲೆ ನಿರ್ಮಿಸುವತ್ತ ಸುನೀಲ್ ಚೆಟ್ರಿ
Photo : twitter/chetrisunil11
ಹೊಸದಿಲ್ಲಿ: ಹಾಂಗ್ ಝೌ ಆತಿಥ್ಯದಲ್ಲಿ ನಡೆಯುವ ಏಶ್ಯನ್ ಗೇಮ್ಸ್ ನಲ್ಲಿ ಚೀನಾ ವಿರುದ್ಧ ಮೊದಲ ಏಶ್ಯನ್ ಗೇಮ್ಸ್ ನಲ್ಲಿ ಸುನೀಲ್ ಚೆಟ್ರಿ ಭಾರತ ಫುಟ್ಬಾಲ್ ತಂಡವನ್ನು ಮುನ್ನಡೆಸಲಿದ್ದಾರೆ. ಸುನೀಲ್ ಅವರು ಏಶ್ಯನ್ ಗೇಮ್ಸ್ ನಲ್ಲಿ ಎರಡು ಆವೃತ್ತಿಗಳಲ್ಲಿ ದೇಶವನ್ನು ನಾಯಕನಾಗಿ ಮುನ್ನಡೆಸಲಿರುವ ಭಾರತದ ಮೂರನೇ ನಾಯಕನಾಗುವುದರೊಂದಿಗೆ ಭಾರತೀಯ ಫುಟ್ಬಾಲ್ ನಲ್ಲಿ ಮತ್ತೊಂದು ದಾಖಲೆ ನಿರ್ಮಿಸುವತ್ತ ಚಿತ್ತಹರಿಸಿದ್ದಾರೆ.
ಈ ಹಿಂದೆ ಸೈಲೆನ್ ಮನ್ನಾ(1951 ಹಾಗೂ 1954) ಹಾಗೂ ಬೈಚುಂಗ್ ಭುಟಿಯಾ(2002 ಹಾಗೂ 2006) ಈ ಸಾಧನೆ ಮಾಡಿದ್ದರು. ಮನ್ನಾ ಅವರು ಮೊದಲ ಆವೃತ್ತಿಯ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಜಯಿಸಿದ್ದರು.
ಭಾರತದ ಫುಟ್ಬಾಲ್ ನಲ್ಲಿ ಭಾರತದ ಪರ ಗರಿಷ್ಠ ಗೋಲು ಗಳಿಸಿರುವ ದಾಖಲೆ ಹೊಂದಿರುವ ಚೆಟ್ರಿ ಏಶ್ಯನ್ ಗೇಮ್ಸ್ ತಂಡದಲ್ಲಿರುವ ಅತ್ಯಂತ ಹಿರಿಯ ಆಟಗಾರನಾಗಿದ್ದಾರೆ.
ಕ್ರೀಡಾ ಸಚಿವಾಲಯದ ವಿಶೇಷ ಶಿಫಾರಸಿನ ಅಡಿ ಅನುಮತಿ ಪಡೆದು 9 ವರ್ಷಗಗಳ ಬಳಿಕ ಭಾರತದ ಫುಟ್ಬಾಲ್ ತಂಡವು ಏಶ್ಯನ್ ಗೇಮ್ಸ್ ನಲ್ಲಿ ಭಾಗವಹಿಸುತ್ತಿದೆ. ಪುರುಷರ ತಂಡದ ಕೋಚ್ ಇಗೊರ್ ಸ್ಟಿಮ್ಯಾಕ್ಗೆ ಇದು ಮೊದಲ ಏಶ್ಯನ್ ಗೇಮ್ಸ್ ಆಗಿದೆ.
*ಸೈಲೆನ್ ಮನ್ನಾ(1951,1954): ಹೊಸದಿಲ್ಲಿಯಲ್ಲಿ 1951ರಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ಮೋಹನ್ ಬಗಾನ್ ದಂತಕತೆ ಸೈಲೆನ್ ಮನ್ನಾ ಇತಿಹಾಸ ನಿರ್ಮಿಸಿದ್ದರು. ಭಾರತವು ಇಂಡೋನೇಶ್ಯ ಹಾಗೂ ಅಫ್ಘಾನಿಸ್ತಾನವನ್ನು ಸೋಲಿಸಿ ಫೈನಲ್ ತಲುಪಿದ್ದರು. ಫೈನಲಿನಲ್ಲಿ ಇರಾನ್ ತಂಡವನ್ನು 1-0 ಅಂತರದಿಂದ ಮಣಿಸಿತ್ತು.
1954ರ ಆವೃತ್ತಿಯ ಗೇಮ್ಸ್ ನಲ್ಲಿ ಭಾರತವು ಕೇವಲ ಒಂದು ಪಂದ್ಯವನ್ನು ಜಯಿಸಿತ್ತು. ಆಗ ಜಪಾನ್ ತಂಡವನ್ನು 3-2ರಿಂದ ಸೋಲಿಸಿತ್ತು. ಭಾರತವು ಗ್ರೂಪ್ ಹಂತದಲ್ಲೇ ನಿರ್ಗಮಿಸಿತ್ತು.
*ಬೈಚುಂಗ್ ಭುಟಿಯಾ(2002,2006): 2002ರ ಏಶ್ಯನ್ ಗೇಮ್ಸ್ ನಲ್ಲಿ ಬೈಚುಂಗ್ ಭುಟಿಯಾ 3 ಪಂದ್ಯಗಳಲ್ಲಿ 4 ಗೋಲು ಗಳಿಸಿದ್ದರು. ಗ್ರೂಪ್ ಹಂತಗಳಲ್ಲಿ ಬಾಂಗ್ಲಾದೇಶ ಹಾಗೂ ತುರ್ಕ್ಮೆನಿಸ್ತಾನವನ್ನು ಭಾರತ ಮಣಿಸಿತ್ತು. ಚೀನಾದ ವಿರುದ್ಧ ಸೋತ ಕಾರಣ ಅಂತಿಮ-16ರ ಹಂತಕ್ಕೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ಗೇಮ್ಸ್ ನಲ್ಲಿ ಭಾರತ ಗ್ರೂಪ್ ಹಂತದಲ್ಲೇ ನಿರ್ಗಮಿಸಿತ್ತು.