ಗಬ್ಬಾ ಗೆಲುವಿಗಿಂತ ಓವಲ್ ಗೆಲುವು ದೊಡ್ಡದು: ಸುನೀಲ್ ಗಾವಸ್ಕರ್ ರಿಂದ ಮುಕ್ತ ಕಂಠದ ಪ್ರಶಂಸೆ
ಲಂಡನ್: ಇಲ್ಲಿನ ಕೆನಿಂಗ್ಟನ್ ಓವಲ್ ನಲ್ಲಿ ನಡೆದ ಐದನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡದ ವಿರುದ್ಧ ಪ್ರವಾಸಿ ಭಾರತ ತಂಡ 6 ರನ್ ಗಳ ರೋಚಕ ಗೆಲುವು ಸಾಧಿಸುವ ಮೂಲಕ ಸರಣಿ ಸಮಬಲ ಸಾಧಿಸಿದೆ. ಇದರ ಬೆನ್ನಿಗೇ, ಭಾರತೀಯ ಕ್ರಿಕೆಟ್ ನ ದಂತಕತೆ ಸುನೀಲ್ ಗಾವಸ್ಕರ್, “ಗಬ್ಬಾ ಗೆಲುವಿಗಿಂತ ಓವಲ್ ಗೆಲುವು ದೊಡ್ಡದು” ಎಂದು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.
ಪಂದ್ಯದ ನಂತರ ಸಂಭ್ರಮದಿಂದ ಬೀಗುತ್ತಿದ್ದ ಸುನೀಲ್ ಗಾವಸ್ಕರ್, “2021ರಲ್ಲಿ ಬ್ರಿಸ್ಬೇನ್ ನಲ್ಲಿ ಬಹುತೇಕ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲೂ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ತಂಡದ ವಿರುದ್ಧ ಸಾಧಿಸಿದ್ದ ಮೂರು ವಿಕೆಟ್ ಗಳ ಗೆಲುವಿಗಿಂತ ಓವಲ್ ನಲ್ಲಿನ ಈ ಗೆಲುವು ತುಂಬಾ ದೊಡ್ಡದಾಗಿದೆ” ಎಂದು ಶ್ಲಾ ಘಿಸಿದ್ದಾರೆ.
ಇದಕ್ಕೂ ಮುನ್ನ, ಪಂದ್ಯದ ನಾಲ್ಕನೆಯ ದಿನವಾದ ರವಿವಾರದಂದು ಮಧ್ಯಮ ಕ್ರಮಾಂಕದ ಬ್ಯಾಟರ್ ಗಳಾದ ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ ಅಮೋಘ ಶತಕಗಳನ್ನು ದಾಖಲಿಸುವ ಮೂಲಕ, ಇಂಗ್ಲೆಂಡ್ ಗೆಲುವನ್ನು ಬಹುತೇಕ ನಿಶ್ಚಿತಗೊಳಿಸಿದ್ದರು. ಆದರೆ, ಟೀ ವಿರಾಮದ ನಂತರ, ಮೂರನೆಯ ಅವಧಿಯಲ್ಲಿ ಪವಾಡವೊಂದು ನಡೆಯಿತು. ಭಾರತ ತಂಡದ ಯುವ ವೇಗಿಗಳಾದ ಪ್ರಸಿದ್ಧ ಕೃಷ್ಣ ಹಾಗೂ ಆಕಾಶ್ ದೀಪ್ ಕ್ರಮವಾಗಿ ಎರಡು ಮತ್ತು ಒಂದು ವಿಕೆಟ್ ಕಿತ್ತು, ಏಕಪಕ್ಷೀಯವಾಗುತ್ತಿದ್ದ ಪಂದ್ಯವನ್ನು ಕುತೂಹಲಕಾರಿ ಘಟ್ಟಕ್ಕೆ ಎಳೆದು ತಂದರು.
ಈ ನಡುವೆ, ಮಳೆ ಸುರಿದಿದ್ದರಿಂದ, ಪಂದ್ಯವನ್ನು ಇಂದಿಗೆ ಮುಂದೂಡಲಾಗಿತ್ತು. ಆಗ ಇಂಗ್ಲೆಂಡ್ ತಂಡದ ಮೊತ್ತ ಆರು ವಿಕೆಟ್ ನಷ್ಟಕ್ಕೆ 339 ರನ್ ಆಗಿತ್ತು. ಹೀಗಿದ್ದೂ, ಇಂಗ್ಲೆಂಡ್ ತಂಡ ಇನ್ನುಳಿದ ನಾಲ್ಕು ವಿಕೆಟ್ ಗಳಿಂದ 35 ರನ್ ಗಳನ್ನಷ್ಟೇ ಗಳಿಸಬೇಕಿತ್ತು. ಆದರೆ, ಭಾರತ ತಂಡದ ಮುಂಚೂಣಿ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಕಾಗಿಸಿದರು.
ಕೊನೆಯ ದಿನವಾದ ಸೋಮವಾರ ಪಂದ್ಯ ಆರಂಭಗೊಂಡಾಗ, ಇಂಗ್ಲೆಂಡ್ ತಂಡದ ಇನ್ನುಳಿದಿದ್ದ ನಾಲ್ಕು ವಿಕೆಟ್ ಗಳ ಪೈಕಿ ಮೂರು ವಿಕೆಟ್ ಅನ್ನು ಸಿರಾಜ್ ಒಬ್ಬರೇ ಕಬಳಿಸಿದರು. ಇನ್ನೊಂದು ವಿಕೆಟ್ ಅನ್ನು ಪ್ರಸಿದ್ಧ ಕೃಷ್ಣ ತಮ್ಮ ಬುಟ್ಟಿಗೆ ಹಾಕಿಕೊಂಡರು. ಕೊನೆಗೆ ಅತ್ಯಂತ ರೋಚಕವಾಗಿ ಅಂತ್ಯಗೊಂಡ ಈ ಪಂದ್ಯದಲ್ಲಿ ಭಾರತ ತಂಡ ಆರು ರನ್ ಗಳ ಗೆಲುವು ಸಾಧಿಸುವ ಮೂಲಕ, ಟೆಸ್ಟ್ ಇತಿಹಾಸದಲ್ಲಿ ಈವರೆಗೆ ದಾಖಲಾಗಿರುವ ಅತ್ಯಂತ ರೋಚಕ ಪಂದ್ಯ ಎಂಬ ಹಿರಿಮೆಗೆ ಕೆನಿಂಗ್ಟನ್ ಓವಲ್ ಪಂದ್ಯ ಪಾತ್ರವಾಯಿತು.