×
Ad

ಹೆನ್ರಿಕ್ ಕ್ಲಾಸೆನ್‌ರನ್ನು ಕೈಬಿಟ್ಟ ಸನ್‌ರೈಸರ್ಸ್ ಹೈದರಾಬಾದ್

Update: 2025-11-04 19:56 IST

ಹೊಸದಿಲ್ಲಿ, ನ.4: ಕಳೆದ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಗಿಂತ ಮೊದಲು 23 ಕೋ.ರೂ. ನೀಡಿ ಸ್ಫೋಟಕ ಶೈಲಿಯ ಬ್ಯಾಟರ್ ಹೆನ್ರಿಕ್ ಕ್ಲಾಸೆನ್‌ರನ್ನು ತನ್ನಲ್ಲೇ ಉಳಿಸಿಕೊಂಡಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಮುಂದಿನ ತಿಂಗಳು ನಡೆಯಲಿರುವ ಮಿನಿ ಹರಾಜಿಗಿಂತ ಮೊದಲು ಕ್ಲಾಸೆನ್‌ರನ್ನು ಕೈಬಿಟ್ಟಿದೆ.

ಸನ್‌ರೈಸರ್ಸ್ ತಂಡವು ದಕ್ಷಿಣ ಆಫ್ರಿಕಾದ ಮಾಜಿ ಅಂತರ್‌ರಾಷ್ಟ್ರೀಯ ಆಟಗಾರನ ಬಗ್ಗೆ ದಿವ್ಯ ಮೌನವಹಿಸಿದ್ದು, ಹಲವು ಐಪಿಎಲ್ ಫ್ರಾಂಚೈಸಿಗಳು ಕ್ಲಾಸೆನ್‌ರನ್ನು ತಮ್ಮ ತೆಕ್ಕೆಗೆ ಸೇರಿಸಿಕೊಳ್ಳಲು ಗಂಭೀರ ಚರ್ಚೆ ನಡೆಸುತ್ತಿವೆ.

34ರ ವಯಸ್ಸಿನ ಕ್ಲಾಸೆನ್ ಕಳೆದ ವರ್ಷ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ದಿಢೀರನೆ ನಿವೃತ್ತಿ ಪ್ರಕಟಿಸಿದ್ದರು. 2025ರ ಆವೃತ್ತಿಯ ಅತ್ಯಂತ ಶ್ರೀಮಂತ ಲೀಗ್ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆಡಿರುವ ತನ್ನ ಕೊನೆಯ ಪಂದ್ಯದಲ್ಲಿ 39 ಎಸೆತಗಳಲ್ಲಿ 105 ರನ್ ಗಳಿಸಿದ್ದರು.

ನಾಯಕ ಪ್ಯಾಟ್ ಕಮಿನ್ಸ್(18 ಕೋ.ರೂ.)ಗಿಂತ ಹೆಚ್ಚು ಮೊತ್ತಕ್ಕೆ ಕ್ಲಾಸೆನ್‌ರನ್ನು ತನ್ನಲ್ಲೇ ಉಳಿಸಿಕೊಂಡಿದ್ದ ಸನ್‌ರೈಸರ್ಸ್ ತಂಡವು ಈ ಬಾರಿ ಅವರನ್ನು ಹಣಕಾಸಿನ ದೃಷ್ಟಿಯಿಂದ ಬಿಡುಗಡೆಗೊಳಿಸಲು ನಿರ್ಧರಿಸಿದೆ.

2024ರಲ್ಲಿ ರನ್ನರ್ಸ್ ಅಪ್ ಆಗಿದ್ದ ಸನ್‌ರೈಸರ್ಸ್ ತಂಡವು 2025ರ ಆವೃತ್ತಿಯ ಐಪಿಎಲ್‌ನಲ್ಲಿ 6ನೇ ಸ್ಥಾನ ಪಡೆದಿತ್ತು.

ಅತ್ಯಂತ ಹೆಚ್ಚು ಮೊತ್ತಕ್ಕೆ ಸನ್‌ರೈಸರ್ಸ್ ತಂಡವನ್ನು ಸೇರಿದ್ದ ಮುಹಮ್ಮದ್ ಶಮಿ(10 ಕೋ.ರೂ.) ಹಾಗೂ ಹರ್ಷಲ್ ಪಟೇಲ್(8 ಕೋ.ರೂ.) 2025ರಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಶಮಿ ಫಿಟ್ನೆಸ್ ಸಮಸ್ಯೆಯನ್ನು ಎದುರಿಸಿದರೆ, ಪಟೇಲ್ 13 ಪಂದ್ಯದಲ್ಲಿ 16 ವಿಕೆಟ್‌ಗಳನ್ನು ಉರುಳಿಸಿದ್ದರೂ ಪ್ರತೀ ಓವರ್‌ಗೆ 10 ರನ್ ನೀಡಿದ್ದರು. ಶಮಿ ಇತ್ತೀಚೆಗೆ ದೇಶೀಯ ಕ್ರಿಕೆಟ್‌ನಲ್ಲಿ ಮಿಂಚುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News