×
Ad

ಸುರೇಶ್ ರೈನಾರ ಸಾರ್ವಕಾಲಿಕ ವಿಶ್ವ ಇಲೆವೆನ್‌ನಲ್ಲಿ ಧೋನಿ, ಕೊಹ್ಲಿಗಿಲ್ಲ ಸ್ಥಾನ!

Update: 2025-07-19 21:57 IST

ಸುರೇಶ್ ರೈನಾ | PC : BCCI

ಹೊಸದಿಲ್ಲಿ: ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರು ಈಗ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನ ವೇಳೆ ತನ್ನ ಸಾರ್ವಕಾಲಿಕ ವಿಶ್ವ ಇಲೆವೆನ್ ತಂಡವನ್ನು ಬಹಿರಂಗಪಡಿಸಿದ್ದಾರೆ. ಇದರಲ್ಲಿ ತನ್ನ ಮಾಜಿ ಸಹ ಆಟಗಾರ ಹಾಗೂ ನಾಯಕ ಎಂ.ಎಸ್. ಧೋನಿ ಹಾಗೂ ಆಧುನಿಕ ಕ್ರಿಕೆಟ್ ಐಕಾನ್ ವಿರಾಟ್ ಕೊಹ್ಲಿ ಅವರನ್ನು ಕೈಬಿಟ್ಟಿದ್ದಾರೆ.

ರೈನಾ ಆಯ್ಕೆ ಮಾಡಿರುವ ತಂಡದಲ್ಲಿ ವಿವಿಧ ಕಾಲಮಾನದ ಲೆಜೆಂಡರಿ ಆಟಗಾರರಿದ್ದು, ವೆಸ್ಟ್‌ಇಂಡೀಸ್‌ನ ಬ್ರಿಯಾನ್ ಲಾರಾ ಹಾಗೂ ಸಚಿನ್ ತೆಂಡುಲ್ಕರ್‌ರನ್ನು ಆರಂಭಿಕ ಆಟಗಾರರನ್ನಾಗಿ ಆಯ್ಕೆ ಮಾಡಿದ್ದಾರೆ.

ರೈನಾ ಅವರ ವಿಶ್ವ ಇಲೆವನ್ ತಂಡದ ಮಧ್ಯಮ ಸರದಿಯಲ್ಲಿ ವೆಸ್ಟ್‌ಇಂಡೀಸ್‌ನ ಲೆಜೆಂಡ್ ವಿವಿಯನ್ ರಿಚರ್ಡ್ಸ್ ಹಾಗೂ ಗ್ಯಾರಿ ಸೋಬರ್ಸ್ ಜೊತೆಗೆ ಭಾರತೀಯ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರಿದ್ದಾರೆ. ತಂಡದಲ್ಲಿ ಇಂಗ್ಲೆಂಡ್ ಆಲ್‌ರೌಂಡರ್‌ಗಳಾದ ಇಯಾನ್ ಬೋಥಮ್ ಹಾಗೂ ಆಂಡ್ರೂ ಫ್ಲಿಂಟಾಫ್ ಅವರಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ರೈನಾ ಅವರು ಸ್ಪಿನ್ನರ್‌ಗಳಿಗೆ ಹೆಚ್ಚು ಆದ್ಯತೆ ನೀಡಿದ್ದು, ಆಸ್ಟ್ರೇಲಿಯದ ದಿವಂಗತ ಸ್ಪಿನ್ನರ್ ಶೇನ್ ವಾರ್ನ್, ಭಾರತೀಯ ಸ್ಪಿನ್ನರ್‌ಗಳಾದ ಅನಿಲ್ ಕುಂಬ್ಳೆ ಹಾಗೂ ಹರ್ಭಜನ್ ಸಿಂಗ್, ಪಾಕಿಸ್ತಾನದ ಸಕ್ಲೇನ್ ಮುಷ್ತಾಕ್ ಅವರಿದ್ದಾರೆ. ದಕ್ಷಿಣ ಆಫ್ರಿಕಾದ ಪೌಲ್ ಆಡಮ್ಸ್‌ರನ್ನು ಇಂಪ್ಯಾಕ್ಟ್ ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ.

ಎಂ.ಎಸ್. ಧೋನಿಯ ಅನುಪಸ್ಥಿತಿಯಿಂದಾಗಿ ರೈನಾರ ವಿಶ್ವ ಇಲೆವೆನ್ ತಂಡವು ಹೆಚ್ಚು ಗಮನ ಸೆಳೆದಿದೆ. ಧೋನಿ ಕ್ರಿಕೆಟ್ ಕಂಡ ಓರ್ವ ಶ್ರೇಷ್ಠ ವಿಕೆಟ್‌ಕೀಪರ್ ಆಗಿದ್ದು, ಅತ್ಯುತ್ತಮ ಬ್ಯಾಟರ್ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಟೆಸ್ಟ್ ಹಾಗೂ ಟಿ-20 ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು.

ರೈನಾ ಅವರು ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನಲ್ಲಿ ಆಡಲು ತಯಾರಿ ನಡೆಸುತ್ತಿದ್ದಾರೆ. ಈ ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯ, ಇಂಗ್ಲೆಂಡ್, ಪಾಕಿಸ್ತಾನ, ವೆಸ್ಟ್‌ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾದ ನಿವೃತ್ತ ಆಟಗಾರರು ಆಡುತ್ತಿದ್ದಾರೆ.

ರೈನಾ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಲ್ಲ ಮಾದರಿಯಲ್ಲಿ 8,000ಕ್ಕೂ ಅಧಿಕ ರನ್ ಗಳಿಸಿದ್ದರು. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿಗೆ ಮಹತ್ವದ ಕೊಡುಗೆ ನೀಡಿದ್ದರು.

ಸುರೇಶ್ ರೈನಾರ ಸಾರ್ವಕಾಲಿಕ ವಿಶ್ವ ಇಲೆವೆನ್: ಬ್ರಿಯಾನ್ ಲಾರಾ, ಸಚಿನ್ ತೆಂಡುಲ್ಕರ್, ವಿವಿಯನ್ ರಿಚರ್ಡ್ಸ್, ಗ್ಯಾರಿ ಸೋಬರ್ಸ್, ಯುವರಾಜ್ ಸಿಂಗ್, ಇಯಾನ್ ಬೋಥಮ್, ಆಂಡ್ರೂ ಫ್ಲಿಂಟಾಫ್, ಶೇನ್ ವಾರ್ನ್, ಹರ್ಭಜನ್ ಸಿಂಗ್, ಅನಿಲ್ ಕುಂಬ್ಳೆ, ಸಕ್ಲೇನ್ ಮುಷ್ತಾಕ್. ಪೌಲ್ ಆಡಮ್ಸ್(ಇಂಪ್ಯಾಕ್ಟ್ ಆಟಗಾರ)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News