×
Ad

ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧ 9 ಸಿಕ್ಸರ್ ಸಿಡಿಸಿದ ಸೂರ್ಯವಂಶಿ

Update: 2025-07-03 20:41 IST

ಸೂರ್ಯವಂಶಿ | PC : PTI 

ಲಂಡನ್: ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಯುವ ಆಟಗಾರ ವೈಭವ್ ಸೂರ್ಯವಂಶಿ ಆತಿಥೇಯ ಇಂಗ್ಲೆಂಡ್ ಅಂಡರ್-19 ಕ್ರಿಕೆಟ್ ತಂಡದ ವಿರುದ್ಧ 3ನೇ ಯೂತ್ ಏಕದಿನ ಪಂದ್ಯದಲ್ಲಿ ಭಾರತದ ಅಂಡರ್-19 ತಂಡ 4 ವಿಕೆಟ್‌ಗಳ ಅಂತರದಿಂದ ಗೆಲ್ಲುವಲ್ಲಿ ನೆರವಾದರು.

ಬುಧವಾರ ನಡೆದ ಪಂದ್ಯದಲ್ಲಿ 14ರ ಹರೆಯದ ಎಡಗೈ ಬ್ಯಾಟರ್ ಸೂರ್ಯವಂಶಿ ಕೇವಲ 31 ಎಸತಗಳಲ್ಲಿ 9 ಸಿಕ್ಸರ್ ಹಾಗೂ 6 ಬೌಂಡರಿಗಳ ಸಹಿತ 86 ರನ್ ಕಲೆ ಹಾಕಿದರು. ಕೇವಲ 20 ಎಸೆತಗಳಲ್ಲಿ ಅರ್ಧಶತಕವನ್ನು ಸಿಡಿಸುವ ಮೂಲಕ ಭಾರತ ತಂಡವು ಮಳೆಯಿಂದಾಗಿ 40 ಓವರ್‌ ಗಳಿಗೆ ಕಡಿತಗೊಂಡ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ ಗುರಿಯನ್ನು 34.3 ಓವರ್‌ ಗಳಲ್ಲಿ ತಲುಪುವಲ್ಲಿ ಮಹತ್ವದ ಪಾತ್ರವಹಿಸಿದರು.

ಸೂರ್ಯವಂಶಿ ಸ್ಫೋಟಕ ಶೈಲಿಯ ಬ್ಯಾಟಿಂಗ್‌ನ ಮೂಲಕ ಯೂತ್ ಏಕದಿನ ಕ್ರಿಕೆಟ್‌ ನಲ್ಲಿ ಗರಿಷ್ಠ ಸಿಕ್ಸರ್‌ ಗಳನ್ನು ಸಿಡಿಸಿದ ಭಾರತದ ಬ್ಯಾಟರ್ ಎನಿಸಿಕೊಂಡರು. ಇದರೊಂದಿಗೆ ತಲಾ 8 ಸಿಕ್ಸರ್‌ ಗಳನ್ನು ಬಾರಿಸಿದ್ದ ರಾಜ್ ಅಂಗದ್ ಹಾಗೂ ಮನ್‌ ದೀಪ್ ಸಿಂಗ್ ಅವರ ದಾಖಲೆಯನ್ನು ಮುರಿದರು.

ಯೂತ್ ಏಕದಿನ ಪಂದ್ಯದಲ್ಲಿ ಸೂರ್ಯವಂಶಿ ಎರಡನೇ ವೇಗದ ಅರ್ಧಶತಕ(20 ಎಸೆತಗಳು)ಸಿಡಿಸಿದರು. ರಿಷಭ್ ಪಂತ್ 2016ರಲ್ಲಿ ನೇಪಾಳ ಅಂಡರ್-19 ತಂಡದ ವಿರುದ್ಧ 18 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.

ರಾಜಸ್ಥಾನ ರಾಯಲ್ಸ್ ಬ್ಯಾಟರ್ ತನ್ನ ಬೌಂಡರಿ ಗಳಿಸುವ ಸಾಮರ್ಥ್ಯವನ್ನು ಮತ್ತೊಮ್ಮೆ ಹೊರಹಾಕಿದ್ದು ಬೌಂಡರಿ ಹಾಗೂ ಸಿಕ್ಸರ್‌ ಗಳ ಮೂಲಕವೇ 86 ರನ್ ಪೈಕಿ 78 ರನ್ ಗಳಿಸಿದರು.

ಮಳೆ ಬಾಧಿತ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡವು 6 ವಿಕೆಟ್‌ಗಳ ನಷ್ಟಕ್ಕೆ 268 ರನ್ ಗಳಿಸಿದೆ. ನಾಯಕ ಥಾಮಸ್ ರೀವ್ 44 ಎಸೆತಗಳಲ್ಲಿ ಔಟಾಗದೆ 76 ರನ್ ಗಳಿಸಿ ಭಾರತಕ್ಕೆ ಸವಾಲಿನ ಮೊತ್ತ ನಿಗದಿಪಡಿಸಿದರು.

ಸರಣಿಯಲ್ಲಿ ಸ್ಥಿರ ಪ್ರದರ್ಶನದಿಂದ ಸೂರ್ಯವಂಶಿ ಗಮನ ಸೆಳೆಯುತ್ತಿದ್ದಾರೆ. 3 ಇನಿಂಗ್ಸ್‌ ಗಳಲ್ಲಿ 179 ರನ್ ಗಳಿಸಿ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. 213.09ರ ಸ್ಟ್ರೈಕ್‌ ರೇಟ್‌ ನಲ್ಲಿ ಈಗ ನಡೆಯುತ್ತಿರುವ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಆಕ್ರಮಣಕಾರಿ ಬ್ಯಾಟಿಂಗ್‌ನ ಮೂಲಕೆ ಎದುರಾಳಿ ಬೌಲರ್‌ ಗಳ ಬೆವರಿಳಿಸಿದ್ದಾರೆ.

ಭಾರತದ ಪರ 6 ಯೂತ್ ಏಕದಿನ ಪಂದ್ಯಗಳನ್ನಾಡಿರುವ ಸೂರ್ಯವಂಶಿ ಇದೀಗ ಗರಿಷ್ಠ ಸ್ಕೋರ್ ಗಳಿಸಿದ್ದಾರೆ. ಭಾರತೀಯ ಕ್ರಿಕೆಟ್‌ ನ ಯೂತ್ ವಿಭಾಗದಲ್ಲಿ ಭರವಸೆಯ ಪ್ರತಿಭೆಯಾಗಿ ಬೆಳೆಯುತ್ತಿದ್ದಾರೆ. ಅವರ ಆಕ್ರಮಣಕಾರಿ ಶೈಲಿಯ ಬ್ಯಾಟಿಂಗ್ ಭಾರತದ ಅಂಡರ್-19 ತಂಡದ ಪ್ರಮುಖ ಆಟಗಾರರನ್ನಾಗಿಸಿದೆ.

►ಯೂತ್ ಏಕದಿನ ಕ್ರಿಕೆಟ್‌ ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಭಾರತೀಯ ಆಟಗಾರರು

9: ವೈಭವ್ ಸೂರ್ಯವಂಶಿ, ಇಂಗ್ಲೆಂಡ್ ವಿರುದ್ಧ, 2025

8: ರಾಜ್ ಅಂಗದ್ ಬಾವಾ, ಝಿಂಬಾಬ್ವೆ ವಿರುದ್ಧ, 2022

8: ಮನ್‌ ದೀಪ್ ಸಿಂಗ್, ಆಸ್ಟ್ರೇಲಿಯದ ವಿರುದ್ದ, 2009

7: ಅಂಕುಶ್ ಬೈನ್ಸ್, ಝಿಂಬಾಬ್ವೆ ವಿರುದ್ಧ, 2013

►ಯೂತ್ ಏಕದಿನ ಕ್ರಿಕೆಟ್: ವೇಗವಾಗಿ ಅರ್ಧಶತಕ ಗಳಿಸಿದ ಭಾರತದ ಅಂಡರ್-19 ಬ್ಯಾಟರ್‌ ಗಳು

18 ಎಸೆತಗಳು: ರಿಷಭ್ ಪಂತ್, ನೇಪಾಳ ಅಂಡರ್-19 ತಂಡದ ವಿರುದ್ಧ, 2016

20 ಎಸೆತಗಳು: ವೈಭವ್ ಸೂರ್ಯವಂಶಿ, ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧ, 2025

23 ಎಸೆತಗಳು: ತಿಲಕ್ ವರ್ಮಾ, ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧ, 2023

24 ಎಸೆತಗಳು: ವೈಭವ್ ಸೂರ್ಯವಂಶಿ, ಶ್ರೀಲಂಕಾ ಅಂಡರ್-19 ತಂಡದ ವಿರುದ್ಧ, 2024

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News