×
Ad

ಸಯ್ಯದ್ ಕಿರ್ಮಾನಿ ವಿಶ್ವದ ನಂ.1 ವಿಕೆಟ್‌ ಕೀಪರ್-ಬ್ಯಾಟರ್: ಅಝರುದ್ದೀನ್

Update: 2025-08-11 20:37 IST
PC : @FaheemQureshinc

ಹೊಸದಿಲ್ಲಿ, ಆ.11: ಭಾರತ ಕ್ರಿಕೆಟ್ ತಂಡವು 1983ರ ವಿಶ್ವಕಪ್ ಗೆಲುವಿನಲ್ಲಿ ತನ್ನದೇ ಆದ ಕೊಡುಗೆ ನೀಡಿರುವ ಸಯ್ಯದ್ ಕೀರ್ಮಾನಿ ವಿಶ್ವ ಶ್ರೇಷ್ಠ ವಿಕೆಟ್‌ ಕೀಪರ್ ಆಗಿದ್ದಾರೆ ಎಂದು ಟೀಮ್ ಇಂಡಿಯಾದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಅಭಿಪ್ರಾಯಪಟ್ಟಿದ್ದಾರೆ.

ಕಿರ್ಮಾನಿ ಅವರ ಆತ್ಮಚರಿತ್ರೆ ‘ಸ್ಟಂಪ್ಡ್:ಲೈಫ್ ಬಿಹೈಂಡ್ ಆ್ಯಂಡ್ ಬಿಯಾಂಡ್ ದ ಟ್ವೆಂಟಿ-ಟು ಯಾರ್ಡ್ಸ್’ಬಿಡುಗಡೆ ಸಮಾರಂಭದಲ್ಲಿ ಅಝರುದ್ದೀನ್ 1983ರ ವಿಶ್ವಕಪ್‌ ನ ವೇಳೆ ಸ್ಪಿನ್ ಬೌಲಿಂಗ್ ವಿರುದ್ಧ ಅಸಾಧಾರಣ ಕೌಶಲ್ಯ ಮೆರೆದಿದ್ದ ಕಿರ್ಮಾನಿ ಅವರನ್ನು ಶ್ಲಾಘಿಸಿದರು.

‘‘ಕಿರ್ಮಾನಿ ವಿಶ್ವದ ನಂ.1 ವಿಕೆಟ್‌ ಕೀಪರ್. ಅಂತಹ ವಿಕೆಟ್‌ ಕೀಪರ್ ಎಂದಿಗೂ ಹುಟ್ಟಿಲ್ಲ. ನಾಲ್ವರು ಸ್ಪಿನ್ನರ್‌ ಗಳೊಂದಿಗೆ ವಿಕೆಟ್‌ ಕೀಪಿಂಗ್ ಮಾಡುವುದು ಅವರಿಗೆ ಸುಲಭವಾಗಿರಲಿಲ್ಲ. 1983ರ ವಿಶ್ವಕಪ್‌ ನಲ್ಲಿ ಅವರು ಅನೇಕ ಉತ್ತಮ ಕ್ಯಾಚ್‌ ಗಳನ್ನು ಪಡೆದರು. ಕಪಿಲ್ 175 ರನ್ ಗಳಿಸಿದ್ದಾಗಲೂ ಕೂಡ ಅವರು ನಿರ್ಣಾಯಕ 24 ರನ್ ಗಳಿಸಿದ್ದರು. ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಭಗವಂತ ಅವರಿಗೆ ದೀರ್ಘಾಯುಷ್ಯ ನೀಡಲಿ. ಜನರು ಈ ಪುಸ್ತಕವನ್ನು ಓದಿ ಆನಂದಿಸಬೇಕು. ಪುಸ್ತಕಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತದೆ ಎಂದು ಭಾವಿಸುವೆ’’ ಎಂದು ಅಝರುದ್ದೀನ್ ಹೇಳಿದರು.

1983ರ ವಿಶ್ವಕಪ್‌ ನಲ್ಲಿ ಕಿರ್ಮಾನಿ ಅವರು 12 ಕ್ಯಾಚ್‌ ಗಳನ್ನು ಪಡೆದಿದ್ದಲ್ಲದೆ, 2 ಸ್ಟಂಪಿಂಗ್ಸ್ ಮಾಡಿದ್ದರು. ತನ್ನ ವೃತ್ತಿಬದುಕಿನಲ್ಲಿ ಕಿರ್ಮಾನಿ ಒಟ್ಟು 234 ಬ್ಯಾಟರ್‌ ಗಳನ್ನು ಔಟ್ ಮಾಡಿದ್ದು, ಭಾರತೀಯ ವಿಕೆಟ್‌ ಕೀಪರ್‌ ಗಳ ಪೈಕಿ ಎಂ.ಎಸ್. ಧೋನಿ(829), ನಯನ್ ಮೊಂಗಿಯಾ(261)ಹಾಗೂ ರಿಷಭ್ ಪಂತ್(244)ನಂತರ 4ನೇ ಸ್ಥಾನದಲ್ಲಿದ್ದಾರೆ.

ಜಾಗತಿಕ ಮಟ್ಟದಲ್ಲಿ ದಕ್ಷಿಣ ಆಫ್ರಿಕಾದ ಮಾರ್ಕ್ ಬೌಚರ್(998)ಮೊದಲ ಸ್ಥಾನದಲ್ಲಿದ್ದಾರೆ. ಆ ನಂತರ ಆಸ್ಟ್ರೇಲಿಯದ ಆ್ಯಡಮ್ ಗಿಲ್‌ಕ್ರಿಸ್ಟ್(905)ಅವರಿದ್ದಾರೆ.

ಕಿರ್ಮಾನಿ 1976ರಿಂದ 1986ರ ತನಕ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು. ಎಲ್ಲ ಮಾದರಿಯ 137 ಪಂದ್ಯಗಳಲ್ಲಿ 2 ಶತಕ ಹಾಗೂ 12 ಅರ್ಧಶತಕಗಳ ಸಹಿತ 3,132 ರನ್ ಗಳಿಸಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಅಝರುದ್ದೀನ್ ಅವರು ಹೈದರಾಬಾದ್ ಕ್ರಿಕೆಟಿಗ ಮುಹಮ್ಮದ್ ಸಿರಾಜ್‌ರನ್ನು ಶ್ಲಾಘಿಸಿದರು. ಸಿರಾಜ್ ಇತ್ತೀಚೆಗೆ ಇಂಗ್ಲೆಂಡ್ ತಂಡದ ವಿರುದ್ಧದ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು.

‘‘ಸಿರಾಜ್ ಅವರನ್ನು ಭೇಟಿಯಾಗುವ ಅವಕಾಶ ನನಗೂ ಲಭಿಸಿತ್ತು. ಅವರು ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದ್ದರು. ನಾನು ಅವರನ್ನು ಅಭಿನಂದಿಸಲು ಬಯಸುತ್ತೇನೆ. ಸಿರಾಜ್ ಇನ್ನೂ ಬೆಳೆಯುತ್ತಾರೆ, ಉತ್ತಮ ಪ್ರದರ್ಶನ ನೀಡುತ್ತಾರೆಂಬ ವಿಶ್ವಾಸದಲ್ಲಿದ್ದೇನೆ’ ಎಂದು ಅಝರುದ್ದೀನ್ ಹೇಳಿದರು.

5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಟ್ಟು 23 ವಿಕೆಟ್‌ ಗಳನ್ನು ಉರುಳಿಸಿದ್ದ ಸಿರಾಜ್ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಎಲ್ಲ ಆಟಗಾರರಿಗಿಂತ ಗರಿಷ್ಠ ಓವರ್‌ ಗಳನ್ನು(185.3)ಬೌಲಿಂಗ್ ಮಾಡಿದ್ದರು. 2024-25ರಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯದಲ್ಲಿ ನಡೆದಿದ್ದ 5 ಪಂದ್ಯಗಳ ಟೆಸ್ಟ್ ಸರಣಿಯ ಎಲ್ಲ ಪಂದ್ಯಗಳಲ್ಲೂ ಸಿರಾಜ್ ಆಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News