×
Ad

ಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಶತಕಗಳು: ವಿರಾಟ್ ಕೊಹ್ಲಿ ದಾಖಲೆ ಮುರಿದ ವಾರ್ನರ್

Update: 2026-01-16 21:50 IST

ಡೇವಿಡ್ ವಾರ್ನರ್ | Photo Credit : X

ಸಿಡ್ನಿ, ಜ.16: ಟಿ-20 ಕ್ರಿಕೆಟ್‌ನೊಂದಿಗೆ ಡೇವಿಡ್ ವಾರ್ನರ್ ಪ್ರೀತಿಯ ಸಂಬಂಧ ಮುಂದುವರಿದಿದೆ. ಬಿಗ್‌ಬ್ಯಾಶ್ ಲೀಗ್‌ನಲ್ಲಿ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಸಿಡ್ನಿ ಥಂಡರ್ ಹಾಗೂ ಸಿಡ್ನಿ ಸಿಕ್ಸರ್ ತಂಡಗಳ ನಡುವಿನ 2025-26ರ ಬಿಬಿಎಲ್‌ನ 37ನೇ ಪಂದ್ಯದಲ್ಲಿ ವಾರ್ನರ್ 65 ಎಸೆತಗಳಲ್ಲಿ ಔಟಾಗದೆ 110 ರನ್ ಗಳಿಸಿ ಥಂಡರ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 189 ರನ್ ಗಳಿಸುವಲ್ಲಿ ನೆರವಾಗಿದ್ದಾರೆ.

ಒಂದೆಡೆ ವಿಕೆಟ್ ಉರುಳುತ್ತಿದ್ದರೆ, ಇನ್ನೊಂದೆಡೆ ವಾರ್ನರ್ ಅವರು ಇನಿಂಗ್ಸ್ ಕಟ್ಟುತ್ತಾ ಸಾಗಿದರು. ಏಕಾಂಗಿ ಹೋರಾಟ ನೀಡಿದ ವಾರ್ನರ್ ಟಿ-20 ಕ್ರಿಕೆಟ್‌ನಲ್ಲಿ ತಾನೇಕೆ ಓರ್ವ ವಿದ್ವಂಸಕ ಶೈಲಿಯ ಬ್ಯಾಟರ್ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಈ ಇನಿಂಗ್ಸ್‌ನ ಮೂಲಕ ವಾರ್ನರ್ ಅವರು ಅತ್ಯಂತ ಹೆಚ್ಚು ಟಿ-20 ಶತಕಗಳನ್ನು ಸಿಡಿಸಿರುವ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ. ವಾರ್ನರ್ ಇದೀಗ 10ನೇ ಟಿ-20 ಶತಕವನ್ನು ಬಾರಿಸಿದರು. ಈ ಮೂಲಕ 9 ಶತಕಗಳನ್ನು ಗಳಿಸಿರುವ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ. ಕ್ರಿಸ್ ಗೇಲ್(22)ಹಾಗೂ ಬಾಬರ್ ಆಝಂ(11)ನಂತರ ಮೂರನೇ ಸ್ಥಾನದಲ್ಲಿದ್ದಾರೆ.

ಮಿಚೆಲ್ ಸ್ಟಾರ್ಕ್ ಅವರು 11 ವರ್ಷಗಳ ನಂತರ ಮೊದಲ ಬಾರಿ ಬಿಬಿಎಲ್‌ನಲ್ಲಿ ಕಾಣಿಸಿಕೊಂಡರು. ಸ್ಟಾರ್ಕ್ ನಾಲ್ಕು ಓವರ್‌ಗಳಲ್ಲಿ 31 ರನ್ ನೀಡಿ 1 ವಿಕೆಟನ್ನು ಪಡೆದರು. ಸಿಕ್ಸರ್ ತಂಡದ ಪರ ಸ್ಯಾಮ್ ಕರನ್ 28 ರನ್‌ಗೆ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಥಂಡರ್ ತಂಡವನ್ನು 200ರೊಳಗೆ ಕಟ್ಟಿಹಾಕಿದರು.

ವಾರ್ನರ್ ತನ್ನ ಶತಕದ ಮೂಲಕ ಬಿಬಿಎಲ್ ಇತಿಹಾಸದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡರು. ಇದೀಗ ಅವರು ಮೂರು ಬಿಬಿಎಲ್ ಶತಕಗಳನ್ನು ಗಳಿಸಿದ್ದಾರೆ. ಬೆನ್ ಮೆಕ್‌ಡೆರ್ಮೊಟ್ ಹಾಗೂ ಸ್ಟೀವನ್ ಸ್ಮಿತ್‌ರೊಂದಿಗೆ ಸ್ಥಾನ ಹಂಚಿಕೊಂಡಿದ್ದಾರೆ.

2025-26ರ ಋತುವಿನಲ್ಲಿ ವಾರ್ನರ್ ಗಳಿಸಿದ 8ನೇ ವೈಯಕ್ತಿಕ ಶತಕ ಇದಾಗಿದೆ. ಒಂದೇ ಆವೃತ್ತಿಯ ಪಂದ್ಯಾವಳಿಯಲ್ಲಿ ಆಟಗಾರನೊಬ್ಬನ ಶ್ರೇಷ್ಠ ಸಾಧನೆ ಇದಾಗಿದೆ.

ಕೊಹ್ಲಿ ಅವರು 414 ಟಿ-20 ಪಂದ್ಯಗಳಲ್ಲಿ 41.92ರ ಸರಾಸರಿಯಲ್ಲಿ, 134.67ರ ಸ್ಟ್ರೈಕ್‌ರೇಟ್‌ನಲ್ಲಿ 9 ಶತಕಗಳು ಹಾಗೂ 105 ಅರ್ಧಶತಕಗಳ ಸಹಿತ ಒಟ್ಟು 13,543 ರನ್ ಗಳಿಸಿದ್ದಾರೆ.

ವಾರ್ನರ್ ಅವರು 431 ಟಿ-20 ಪಂದ್ಯಗಳಲ್ಲಿ 140.45ರ ಸ್ಟ್ರೈಕ್‌ರೇಟ್‌ನಲ್ಲಿ 10 ಶತಕಗಳು ಹಾಗೂ 115 ಅರ್ಧಶತಕಗಳ ಸಹಿತ ಒಟ್ಟು 13,918 ರನ್ ಕಲೆ ಹಾಕಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News