×
Ad

ಟಿ-20 ಕ್ರಿಕೆಟ್: ಐತಿಹಾಸಿಕ ಸಾಧನೆಗೈದ ಶಾಕಿಬ್ ಅಲ್ ಹಸನ್

Update: 2025-08-25 21:24 IST

Photo | timesofindia

ಢಾಕಾ, ಆ.25: ಬಾಂಗ್ಲಾದೇಶದ ಕ್ರಿಕೆಟ್ ಲೆಜೆಂಡ್ ಶಾಕಿಬ್ ಅಲ್ ಹಸನ್ ಟಿ-20 ಕ್ರಿಕೆಟ್‌ ನಲ್ಲಿ ಐತಿಹಾಸಿಕ ಮೈಲಿಗಲ್ಲು ತಲುಪಿದರು.

ಆ್ಯಂಟಿಗುವಾದಲ್ಲಿ ನಡೆದ 2025ರ ಆವೃತ್ತಿಯ ಕೆರಿಬಿಯನ್ ಪ್ರೀಮಿಯರ್ ಲೀಗ್ ಪಂದ್ಯವೊಂದರಲ್ಲಿ 500 ಪ್ಲಸ್ ವಿಕೆಟ್‌ಗಳು ಹಾಗೂ 7,000ಕ್ಕೂ ಅಧಿಕ ರನ್ ಗಳಿಸಿದ ಮೊದಲ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು.

ಸೇಂಟ್ ಕಿಟ್ಸ್ ವಿರುದ್ಧ ಆ್ಯಂಟಿಗುವಾ, ಬರ್ಬುಡಾ ಫಾಲ್ಕನ್ಸ್ ತಂಡದ ಪರ ಆಡಿದ ಶಾಕಿಬ್ ಆಲ್‌ ರೌಂಡ್ ಪ್ರದರ್ಶನ ನೀಡಿದರು. 11 ರನ್‌ಗೆ 3 ವಿಕೆಟ್‌ಗಳನ್ನು ಉರುಳಿಸಿದ್ದಲ್ಲದೆ, ಕ್ಷಿಪ್ರವಾಗಿ 25 ರನ್ ಕಲೆ ಹಾಕಿ ತನ್ನ ತಂಡಕ್ಕೆ 7 ವಿಕೆಟ್‌ಗಳ ಗೆಲುವು ತಂದುಕೊಟ್ಟರು.

ಪಂದ್ಯದ ವೇಳೆ 3 ವಿಕೆಟ್‌ ಗಳನ್ನು ಪಡೆದಿರುವ ಶಾಕಿಬ್ ಅವರು ಟಿ-20 ಕ್ರಿಕೆಟ್‌ನ ವಿಶೇಷ 500 ವಿಕೆಟ್ ಕ್ಲಬ್‌ ನಲ್ಲಿ ಸ್ಥಾನ ಪಡೆದರು. ಈ ಮೈಲಿಗಲ್ಲು ತಲುಪಿದ ಕೇವಲ 5ನೇ ಬೌಲರ್ ಎನಿಸಿಕೊಂಡರು. ರಶೀದ್ ಖಾನ್, ಡ್ವೇಯ್ನ್ ಬ್ರಾವೊ, ಸುನೀಲ್ ನರೇನ್ ಹಾಗೂ ಇಮ್ರಾನ್ ತಾಹಿರ್ ಅವರನ್ನು ಸೇರಿಕೊಂಡರು. ಈ ಎಲ್ಲ ಬೌಲರ್‌ ಗಳು 500 ಪ್ಲಸ್ ವಿಕೆಟ್ ಪಡೆದಿದ್ದಾರೆ.

ಶಾಕಿಬ್ ಅವರು 500 ಟಿ-20 ವಿಕೆಟ್‌ ಗಳನ್ನು ಪಡೆದ ಮೊದಲ ಎಡಗೈ ಸ್ಪಿನ್ನರ್ ಎಂಬ ಕೀರ್ತಿಗೆ ಭಾಜನರಾದರು. ಈ ಮೂಲಕ ಇಮಾದ್ ವಸೀಮ್(376 ವಿಕೆಟ್‌ಗಳು)ದಾಖಲೆಯನ್ನು ಮುರಿದರು. 500 ವಿಕೆಟ್ ಕ್ಲಬ್ ಸೇರಿದ್ದಲ್ಲದೆ 7,574 ರನ್ ಗಳಿಸಿ ಮಹತ್ವದ ಸಾಧನೆ ಮಾಡಿದರು.

500 ವಿಕೆಟ್ ಕ್ಲಬ್‌ ನಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಶಾಕಿಬ್ ಮೊದಲ ಸ್ಥಾನದಲ್ಲಿದ್ದಾರೆ. ಡ್ವೇಯ್ನ್ ಬ್ರಾವೊ 6,970 ರನ್ ಗಳಿಸಿ 2ನೇ ಸ್ಥಾನದಲ್ಲಿದ್ದಾರೆ. ಸುನೀಲ್ ನರೇನ್(4,649 ರನ್), ರಶೀದ್ ಖಾನ್(2,662 ರನ್)ಹಾಗೂ ಇಮ್ರಾನ್ ತಾಹಿರ್(3771 ರನ್) ಆ ನಂತರದ ಸ್ಥಾನದಲ್ಲಿದ್ದಾರೆ.

7,000 ಪ್ಲಸ್ ರನ್ ಕ್ಲಬ್‌ನಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ಆಟಗಾರರ ಪೈಕಿ ಶಾಕಿಬ್ 502 ವಿಕೆಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಆಂಡ್ರೆ ರಸ್ಸೆಲ್(487 ವಿಕೆಟ್, 9,361 ರನ್), ಕಿರೋನ್ ಪೊಲಾರ್ಡ್(332 ವಿಕೆಟ್, 13,981 ರನ್)ಅವರಿದ್ದಾರೆ. ರವಿ ಬೋಪಾರ ಹಾಗೂ ಮೊಯಿನ್ ಅಲಿ ಕ್ರಮವಾಗಿ 292 ಹಾಗೂ 260 ವಿಕೆಟ್‌ ಗಳನ್ನು ಪಡೆದಿದ್ದಾರೆ.

ಅಂತರ್‌ರಾಷ್ಟ್ರೀಯ ಟಿ-20 ಕ್ರಿಕೆಟ್‌ ನಲ್ಲಿ ಶಾಕಿಬ್ ಅವರ ಸಾಧನೆ ಗಮನಾರ್ಹವಾಗಿದೆ. ಶಾಕಿಬ್ ಅವರು ಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 2,500ಕ್ಕೂ ಅಧಿಕ ರನ್ ಹಾಗೂ 100ಕ್ಕೂ ಅಧಿಕ ವಿಕೆಟ್‌ಗಳನ್ನು ಪಡೆದ ಏಕೈಕ ಆಟಗಾರನಾಗಿದ್ದಾರೆ. 2024ರ ಟಿ-20 ವಿಶ್ವಕಪ್ ನಂತರ ನಿವೃತ್ತಿಯಾಗಿರುವ ಶಾಕಿಬ್ ಅವರು ಬಾಂಗ್ಲಾದೇಶ ಪರ ಆಡಿರುವ 129 ಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 2,551 ರನ್ ಹಾಗೂ 149 ವಿಕೆಟ್‌ ಗಳನ್ನು ಪಡೆದಿದ್ದಾರೆ.

ಟಿ-20 ಅಂತರ್‌ ರಾಷ್ಟ್ರೀಯ ಪಂದ್ಯದಲ್ಲಿ ಯಾವೊಬ್ಬ ಆಟಗಾರನು 100 ವಿಕೆಟ್ ಹಾಗೂ 1,000 ರನ್ ಗಳಿಸದ ಹಿನ್ನೆಲೆಯಲ್ಲಿ ಶಾಕಿಬ್ ದಾಖಲೆ ಅತ್ಯಂತ ಮಹತ್ವ ಪಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News