ನಾಳೆ ಎರಡನೇ ಟಿ-20 ಪಂದ್ಯ| ಭಾರತಕ್ಕೆ ತಿರುಗೇಟು ನೀಡುವುದೇ ಕಿವೀಸ್?
ಸಾಂದರ್ಭಿಕ ಚಿತ್ರ | Photo Credit ; PTI
ರಾಯ್ಪುರ, ಜ.22: ನಾಗಪುರದಲ್ಲಿ ಬುಧವಾರ ನಡೆದ ಮೊದಲ ಟಿ-20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ನ್ಯೂಝಿಲ್ಯಾಂಡ್ ತಂಡವನ್ನು 48 ರನ್‌ಗಳಿಂದ ಮಣಿಸಿ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ ಮುಂಬರುವ ಟಿ-20 ವಿಶ್ವಕಪ್ ಟೂರ್ನಿಗೆ ತನ್ನ ಅಂತಿಮ ತಾಲೀಮನ್ನು ತನ್ನದೇ ಶೈಲಿಯಲ್ಲಿ ಆರಂಭಿಸಿದೆ.
ಉಭಯ ತಂಡಗಳು ಎರಡನೇ ಟಿ-20 ಪಂದ್ಯವನ್ನಾಡಲು ರಾಯ್ಪುರಕ್ಕೆ ಆಗಮಿಸಿವೆ. ಅಗ್ರ ಸರದಿಯಲ್ಲಿ ಅಭಿಷೇಕ್ ಶರ್ಮಾ ಹಾಗೂ ಇನಿಂಗ್ಸ್ ಅಂತ್ಯದಲ್ಲಿ ರಿಂಕು ಸಿಂಗ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ದೊಡ್ಡ ಮೊತ್ತ ಕಲೆ ಹಾಕಿತ್ತು.
ನಾಯಕ ಸೂರ್ಯಕುಮಾರ್ ಯಾದವ್ ತನ್ನ ಫಾರ್ಮ್‌ಗೆ ಮರಳುವ ಸೂಚನೆ ನೀಡಿದ್ದಾರೆ. ಅಗ್ರ ಸರದಿಗೆ ವಾಪಸ್ಸಾಗಿರುವ ಸಂಜು ಸ್ಯಾಮ್ಸನ್‌ರಿಂದ ಟೀಮ್ ಇಂಡಿಯಾ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದೆ.
ಎಡಗೈ ಬ್ಯಾಟರ್ ಇಶಾನ್ ಕಿಶನ್ ರಾಷ್ಟ್ರೀಯ ತಂಡಕ್ಕೆ ವಾಪಸಾಗಿದ್ದಾರೆ. ಆದರೆ ಎರಡು ಬೌಂಡರಿಗಳಿಸಿದ ನಂತರ ದೊಡ್ಡ ಗಳಿಸುವ ಅವಕಾಶ ಕಳೆದುಕೊಂಡರು.
35 ಎಸೆತಗಳಲ್ಲಿ ಎಂಟು ಸಿಕ್ಸರ್‌ಗಳ ಸಹಿತ 84 ರನ್ ಗಳಿಸಿ ಅಬ್ಬರಿಸಿದ್ದ ಅಭಿಷೇಕ್ ಮೇಲೆ ಎಲ್ಲರ ಚಿತ್ತ ಹರಿದಿದೆ. ಪ್ರಸಕ್ತ ಸರಣಿ ಹಾಗೂ ಮುಂಬರುವ ವಿಶ್ವಕಪ್‌ನಲ್ಲಿ ಅಭಿಷೇಕ್ ಫಾರ್ಮ್ ಭಾರತದ ಯಶಸ್ಸಿಗೆ ನಿರ್ಣಾಯಕವಾಗಿದೆ.
ಕಿವೀಸ್ ಪಡೆ ಮೊದಲ ಪಂದ್ಯದಲ್ಲಿ ರನ್ ಚೇಸ್ ವೇಳೆ ಗ್ಲೆನ್ ಫಿಲಿಪ್ಸ್ ಅರ್ಧಶತಕವನ್ನು ಹೊರತುಪಡಿಸಿ ಬೇರೆಲ್ಲೂ ಹೋರಾಟ ನೀಡಿಲ್ಲ. ಆರಂಭಿಕ ಆಟಗಾರರಾದ ಡೆವೊನ್ ಕಾನ್ವೆ ಹಾಗೂ ರಾಬಿನ್ಸನ್ ವಿಫಲರಾಗಿದ್ದಾರೆ.
ಜಸ್‌ಪ್ರಿತ್ ಬುಮ್ರಾ, ಅರ್ಷದೀಪ ಸಿಂಗ್, ಹಾರ್ದಿಕ್ ಪಾಂಡ್ಯ ಹಾಗೂ ವರುಣ್ ಚಕ್ರವರ್ತಿ ಅವರನ್ನೊಳಗೊಂಡ ಭಾರತದ ಬೌಲಿಂಗ್ ದಾಳಿಯು ಎಲ್ಲ ಶ್ರೇಷ್ಠ ಬ್ಯಾಟರ್‌ಗಳಿಗೆ ಸವಾಲಾಗಬಲ್ಲದು.
ಉಪ ನಾಯಕ ಅಕ್ಷರ್ ಪಟೇಲ್‌ರ ಫಿಟ್ನೆಸ್ ಭಾರತ ತಂಡಕ್ಕೆ ಚಿಂತೆಯಾಗಿ ಕಾಡುತ್ತಿದೆ. ಮೊದಲ ಪಂದ್ಯದಲ್ಲಿ ಬೌಲಿಂಗ್ ವೇಳೆ ಪಟೇಲ್ ಸ್ವತಃ ಗಾಯಗೊಂಡಿದ್ದರು. ತನ್ನ ಬೌಲಿಂಗ್ ಕೋಟಾವನ್ನು ಪೂರ್ಣಗೊಳಿಸಿರಲಿಲ್ಲ.
2025ರ ಡಿಸೆಂಬರ್‌ನಲ್ಲಿ ರಾಯ್ಪುರದಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಭಾರತ ನೀಡಿದ್ದ 358 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ ಯಾವ ಸ್ಕೋರ್ ಕೂಡ ಸುರಕ್ಷಿತವಲ್ಲ ಎಂಬುದನ್ನು ತೋರಿಸಿಕೊಟ್ಟಿತ್ತು.
ತಂಡಗಳು
ಭಾರತ: ಸೂರ್ಯಕುಮಾರ್ ಯಾದವ್(ನಾಯಕ), ಅಕ್ಷರ್ ಪಟೇಲ್(ಉಪ ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್(ವಿಕೆಟ್‌ಕೀಪರ್), ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ಜಸ್‌ಪ್ರಿತ್ ಬುಮ್ರಾ, ಹರ್ಷಿತ್ ರಾಣಾ, ಅರ್ಷದೀಪ ಸಿಂಗ್, ಕುಲದೀಪ ಯಾದವ್, ವರುಣ್ ಚಕ್ರವರ್ತಿ, ಇಶಾನ್ ಕಿಶನ್, ರವಿ ಬಿಷ್ಣೋಯಿ.
ನ್ಯೂಝಿಲ್ಯಾಂಡ್: ಮಿಚೆಲ್ ಸ್ಯಾಂಟ್ನರ್(ನಾಯಕ), ಮೈಕಲ್ ಬ್ರೆಸ್‌ವೆಲ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೆ(ವಿಕೆಟ್‌ಕೀಪರ್), ಜೇಕಬ್ ಡಫಿ, ಝ್ಯಾಕ್ ಫೌಲ್ಕ್ಸ್, ಮ್ಯಾಟ್ ಹೆನ್ರಿ, ಜೆಮೀಸನ್, ಬೆವನ್ ಜೇಕಬ್ಸ್, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಾಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಟಿಮ್ ರಾಬಿನ್ಸನ್, ಇಶ್ ಸೋಧಿ ಹಾಗೂ ಕ್ರಿಸ್ಟಿಯನ್ ಕ್ಲಾರ್ಕ್